ಬೆಳಗಾವಿ: ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಣೆ ಮಾಡಿದ್ದ MES ಪುಂಡರ ವಿರುದ್ಧ ಎಫ್ಐಆರ್
ನವೆಂಬರ್ 01 ಕನ್ನಡ ರಾಜ್ಯೋತ್ಸದಂದು ಬೆಳಗಾವಿಯಲ್ಲಿ ಪುಂಡಾಟ ಮಾಡಿದ್ದ ಎಂಇಎಸ್ ಕಾರ್ಯಕರ್ತರಿಗೆ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಅನುಮತಿ ಇಲ್ಲದಿದ್ದರೂ ಕರಾಳ ದಿನ ಆಚರಣೆ ಮಾಡಿದ್ದವರು ವಿರುದ್ಧ ಪೊಲೀಸರು ಸ್ವಯಂ ಪ್ರೇರಿಯ ದೂರು ದಾಖಲಿಸಿಕೊಂಡಿದ್ದಾರೆ.
ಬೆಳಗಾವಿ, (ನವೆಂಬರ್ 03): ಕನ್ನಡ ರಾಜ್ಯೋತ್ಸವದಂದು ((Kannada Rajyotsava)) ಬೆಳಗಾವಿಯಲ್ಲಿ (Belagavi) ಕರಾಳ ದಿನ ಆಚರಣೆ ಮಾಡಿದ್ದ ಎಂಇಎಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಂಇಎಸ್ನ ಮಾಲೋಜಿರಾವ್ ಅಷ್ಟೇಕರ್, ಮನೋಹರ ಕಿಣೇಕರ್, ರಂಜಿತ್ ಚವ್ಹಾಣ್, ಸರಿತಾ ಪಾಟೀಲ್, ಸಾರಿಕಾ ಪಾಟೀಲ್, ಅಂಕುಶ ಕೇಸರಕರ್ ಸೇರಿದಂತೆ ಒಟ್ಟು 18 ಜನರ ವಿರುದ್ಧ ಕೇಸ್ ದಾಖಲಾಗಿದೆ. ಅನುಮತಿ ಇಲ್ಲದಿದ್ದರೂ ನಗರದಲ್ಲಿ ಕರಾಳ ದಿನಾಚರಣೆ ಹೆಸರಲ್ಲಿ ಮೆರವಣಿಗೆ ಮಾಡಿದ್ದರು. ಈ ಆಧಾರದ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
ನವೆಂಬರ್ 1ರಂದು ಬೆಳಗಾವಿಯ ಸಂಭಾಜಿ ಉದ್ಯಾನದಿಂದ ಮೆರವಣಿಗೆ ಮಾಡಿದ್ದರು. ಕಪ್ಪು ಬಟ್ಟೆ ಧರಸಿ ನೂರಾರು ಜನ ಎಂಇಎಸ್ ಪುಂಡರು ಮೆರವಣಿಗೆಯಲ್ಲಿ ಭಾಗಿಯಾಗಿ ನಾಡದ್ರೋಹಿ ಘೋಷಣೆ ಕೂಗಿದ್ದರು. ಇನ್ನೊಂದೆಡೆ ಕರಾಳ ದಿನ ಆಚರಣೆ ಅನುಮತಿ ಇಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೇಳಿದ್ದರು. ಆದರೂ ಸಹ ಎಂಇಎಸ್ ಕಾರ್ಯಕರ್ತರು ಮೆರವಣಿಗೆ ಮಾಡಿ ಕರಾಳ ದಿನಾಚರಣೆ ಮಾಡಿದ್ದರು. ಇದಕ್ಕೆ ಪೊಲೀಸರೇ ಭದ್ರತೆ ನೀಡಿದ್ದು ಅಚ್ಚರಿಕೆ ಕಾರಣವಾಗಿತ್ತು. ಅಲ್ಲದೇ ಕನ್ನಡಪರ ಸಂಘಟನೆಗಳ ಆಖ್ರೋಶಕ್ಕೆ ಕಾರಣವಾಗಿತ್ತು.
ಎಂಇಎಸ್ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿತ್ತು. ನಿಷೇಧದ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ಕರಾಳ ದಿನ ಆಚರಿಸಲಾಗಿತ್ತು ಅಲ್ಲದೇ ಪೊಲೀಸರ ಮುಂದೆಯೇ ನಾಡದ್ರೋಹಿ ಘೋಷಣೆ ಕೂಗಿ ಎಂಇಎಸ್ ಪುಂಡಾಟ ಮೆರೆದಿದ್ದರು. ಬೆಳಗಾವಿ, ಕಾರವಾರ, ನಿಪ್ಪಾಣಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಎಂದು ಘೋಷಣೆ ಕೂಗಿದ್ದರು. ಅನುಮತಿ ನೀಡುವುದಿಲ್ಲ ಎಂದಿದ್ದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಾಡದ್ರೋಹಿಗಳಿಗೆ ರಕ್ಷಣ ನೀಡಿ ಕೈ ಕಟ್ಟಿ ಕುಳಿತ್ತಿತ್ತು. ಇದರಿಂದ ಆಕ್ರೋಶಗೊಂಡ ಕನ್ನಡಪರ ಸಂಘಟನೆಗಳು
ಕರಾಳ ದಿನಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದ ಡಿಸಿ ಮತ್ತು ಕಮಿಷನರ್, ಈಗ ಎಂಇಎಸ್ ಪುಂಡರಿಗೆ ಭದ್ರತೆ ನೀಡಿ ಮೆರವಣಿಗೆಗೆ ಅವಕಾಶ ನೀಡಿದ್ದಾರೆ ಎಂದು ಕಿಡಿಕಾರಿದ್ದವು. ಅಲ್ಲದೇ ಜಿಲ್ಲಾಡಳಿತದ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪೊಲಿಸರು ಇದೀಗ ಕರಾಳ ದಿನ ಆಚರಣೆ ಮಾಡಿದ್ದವರ ವಿರುದ್ಧ ಕೇಸ್ ದಾಖಲಿಸಿಕೊಂಡು ಕೈತೊಳೆದುಕೊಂಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ