ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ: ಒಂದೇ ವಾರದಲ್ಲಿ 87 ಮನೆಗಳಿಗೆ ಹಾನಿ

| Updated By: ವಿವೇಕ ಬಿರಾದಾರ

Updated on: Jul 26, 2023 | 12:19 PM

ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಒಂದೇ ವಾರದಲ್ಲಿ 87 ಮನೆಗಳಿಗೆ ಹಾನಿಯಾಗಿದೆ. ನಾಲ್ಕು ಮನೆಗಳು ಸಂಪೂರ್ಣವಾಗಿ ಧರೆಗುರುಳಿವೆ.

ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆ: ಒಂದೇ ವಾರದಲ್ಲಿ 87 ಮನೆಗಳಿಗೆ ಹಾನಿ
ಕುಸಿದಿರುವ ಮನೆ
Follow us on

ಬೆಳಗಾವಿ ಜು.26: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ (Rain) ಹಿನ್ನೆಲೆ ಒಂದೇ ವಾರದಲ್ಲಿ 87 ಮನೆಗಳಿಗೆ ಹಾನಿಯಾಗಿದೆ. ನಾಲ್ಕು ಮನೆಗಳು (Home) ಸಂಪೂರ್ಣವಾಗಿ ಧರೆಗುರುಳಿವೆ. ಖಾನಾಪುರ (Khanapur) ತಾಲೂಕಿನಲ್ಲೇ ನಿನ್ನೆ (ಜು.25) ಒಂದೇ ದಿನ 24 ಮನೆಗಳು ಬಿದ್ದು ಅವಾಂತರ ಸೃಷ್ಠಿಯಾಗಿದೆ. ಇನ್ನು ಮಳೆ ಆರಂಭವಾದಾಗಿನಿಂದ ಒಟ್ಟು 40 ಮನೆಗಳಿಗೆ ಹಾನಿಯಾಗಿದೆ.

ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆ ಹಾಲತ್ರಿ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ಖಾನಾಪುರ ತಾಲೂಕಿನ ಅಶೋಕನಗರ ಬಳಿ ಇರುವ ಖಾನಾಪುರ-ಹೆಮ್ಮಡಗಾ-ಗೋವಾ ಸಂಪರ್ಕ ಸೇತುವೆ ಜಲಾವೃತಗೊಂಡಿದ್ದು, ಸೇತುವೆ ಮೇಲೆ ಒಂದು ಅಡಿಯಷ್ಟು ನೀರು ಹರಿಯುತ್ತಿದೆ. ಸೇತುವೆ ಮುಳುಗಡೆಯಿಂದ ಹೆಮ್ಮಡಗಾ, ಅಶೋಕ ನಗರ, ಗವಾಳಿ, ಪಾಸ್ತೊಳಿ, ನೇರಸಾ ಸೇರಿದಂತೆ 40 ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಇದೀಗ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದಾರೆ.

ಇದನ್ನೂ ಓದಿ: Belagavi Rain: ಮಳೆ ಹೊಡೆತಕ್ಕೆ ಕೊಚ್ಚಿಕೊಂಡು ಹೋದ ಬೆಳಗಾವಿ ರಾಮನಗರ ಗೋವಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ

ಇನ್ನು ಕೃಷ್ಣಾ ನದಿಯ ಉಪನದಿಯಾದ ದೂಧ್​ಗಂಗಾ ನದಿಗೆ ಪ್ರತಿದಿನ 27 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಇದರಿಂದ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದ ಬಳಿ ನದಿ ಅಪಯಾಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಸದಲಗಾ-ಬೋರಗಾಂವ ಸೇತುವೆ ಮುಳುಗಡೆ ಹಂತ ತಲುಪಿದೆ. ಹಾಗೇ ರಸ್ತೆ ಬದಿಯಲ್ಲಿರುವ ವಿದ್ಯುತ್ ಟ್ರಾನ್ಸಫಾರ್ಮರ್‌ಗಳು ಮುಳುಗಡೆಯಾಗಿವೆ. ಸಾವಿರಾರು ಹೆಕ್ಟೇರ್ ಪ್ರದೇಶದ ಕಬ್ಬಿನ ಗದ್ದೆ ಜಲಾವೃತಗೊಂಡಿದೆ.

ದೂದ್​ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ರಾಧಾನಗರಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಹೀಗಾಗಿ ಡ್ಯಾಮ್​ನಿಂದ ಸ್ವಯಂಚಾಲಿತ ಗೇಟ್ ನಂ. ಆರು ಮತ್ತು ಐದರ ಮೂಲಕ ನೀರು ಹೊರಬರುತ್ತಿದೆ. ಸದ್ಯ 4256 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ರಾಧಾನಗರಿ ಜಲಾಶಯ ಏಳು ಸ್ವಯಂಚಾಲಿತ ಗೇಟ್‌ಗಳನ್ನು ಹೊಂದಿದೆ. ಇದರಿಂದ ಕೊಲ್ಹಾಪುರದ ಪಂಚಗಂಗಾ ನದಿ ತೀರದಲ್ಲಿ ಶುರುವಾಯಿತು ಪ್ರವಾಹ ಭೀತಿ ಎದುರಾಗಿದೆ.
ಹಾಗೇ ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ ದೂಧ್‌ಗಂಗಾ, ವೇದಗಂಗಾ ನದಿಗೆ ಒಳ ಹರಿವು ಹೆಚ್ಚಳವಾಗುವ ಸಾಧ್ಯತೆ ಇದ್ದು ನದಿ ಪಾತ್ರದ ಜನರಿಗೆ ಸಂಕಷ್ಟ ಒದಗಲಿದೆ. ಹೀಗಾಗಿ ನದಿ ಪಾತ್ರದಲ್ಲಿನ ಜನ ಎಚ್ಚರದಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ