ಬೆಳಗಾವಿ, ಜುಲೈ 23: ಜಿಲ್ಲೆಯಾದ್ಯಂತ ಭಾರೀ ಮಳೆ (Heavy rains) ಮುಂದುವರಿದ ಹಿನ್ನೆಲೆ ಖಾನಾಪುರ, ಕಿತ್ತೂರು, ಬೆಳಗಾವಿ ತಾಲೂಕಿನ ಶಾಲೆಗಳಿಗೆ ಸೋಮವಾರ ಒಂದು ದಿನ ರಜೆ ಘೋಷಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (DC Nitesh Patil) ಆದೇಶ ಹೊರಡಿಸಿದ್ದಾರೆ. ಮಕ್ಕಳ ಸುರಕ್ಷತೆ ಹಿತದೃಷ್ಟಿ ಮತ್ತು ಮುಂಜಾಗ್ರತ ಕ್ರಮವಾಗಿ 3 ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಮೂರು-ನಾಲ್ಕು ದಿನಗಳಿಂದ ಭಾರೀ ಮಳೆ ಆಗುತ್ತಿದೆ. ಹಾಗಾಗಿ ಇಂದು ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮಕ್ಕೆ ಭೇಟಿ ನೀಡಿದ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಕೃಷ್ಣಾ ನದಿಯಲ್ಲಿ ಬೋಟ್‌ನಲ್ಲಿ ತೆರಳಿ ಒಳಹರಿವು ಪ್ರಮಾಣ ವೀಕ್ಷಣೆ ಮಾಡಿದ್ದಾರೆ.
ಬಳಿಕ ಟಿವಿ9 ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ 3 ದಿನದಿಂದ ಮಳೆ ಆಗುತ್ತಿದೆ. ಸದ್ಯ ಕೃಷ್ಣಾ ನದಿಗೆ ಒಂದು ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. 2 ಲಕ್ಷ ಕ್ಯೂಸೆಕ್ ನೀರು ಹರಿಯುವವರೆಗೂ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಇಲ್ಲ. ಆದರೂ ಏನೆಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದರು.
ಕೃಷ್ಣಾ ಉಪನದಿಗಳಾದ ದೂದ್‌ಗಂಗಾ, ವೇದಗಂಗಾದಲ್ಲಿ ನೀರಿನ ಹರಿವು ಹೆಚ್ಚಿದೆ. ನೀರು ಮತ್ತಷ್ಟು ಹೆಚ್ಚಾದ್ದರೆ ಗ್ರಾಮಸ್ಥರನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡುತ್ತೇವೆ. ಮಹಾರಾಷ್ಟ್ರದ ನೀರಾವರಿ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೊಯ್ನಾ, ಆಲಮಟ್ಟಿ ಜಲಾಶಯ ಕೇವಲ 44 ಪರ್ಸೆಂಟ್ ಮಾತ್ರ ಭರ್ತಿ ಆಗಿದೆ.
ಸದ್ಯ ಮಹಾರಾಷ್ಟ್ರದ ಯಾವುದೇ ಡ್ಯಾಂನಿಂದ ನೀರು ಬಿಡುವ ಪರಿಸ್ಥಿತಿ ಇಲ್ಲ. ಗ್ರಾಮಸ್ಥರ ಮನವಿ ಮೇರೆಗೆ ಡಿಸೈನ್ ಚೇಂಜ್ ಮಾಡಿದ್ದರಿಂದ ಕೆಳಹಂತದ ಸೇತುವೆ ಬಳಿ ಎತ್ತರದ ಸೇತುವೆ ನಿರ್ಮಾಣ ಕಾಮಗಾರಿ ವಿಳಂಬ ಆಗಿದೆ. ತೋಟದ ಮನೆಗಳಲ್ಲಿ ವಾಸವಿರುವವರು ಎತ್ತರ ಪ್ರದೇಶಕ್ಕೆ ತೆರಳಲು ಮನವಿ ಮಾಡಿದ್ದು, ಇನ್ನೂ ಮೂರು ದಿನ ಇದೇ ರೀತಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.