ಮೈದುಂಬಿ ಹರಿಯುತ್ತಿವೆ ಬೆಳಗಾವಿಯ ಸಪ್ತನದಿಗಳು: ಪ್ರವಾಹ ಭೀತಿ ಪ್ರದೇಶಗಳಿಗೆ ಡಿಸಿ ನೇತೃತ್ವದ ತಂಡ ಭೇಟಿ

| Updated By: ವಿವೇಕ ಬಿರಾದಾರ

Updated on: Jul 23, 2023 | 10:36 AM

ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಸಪ್ತನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಮೈದುಂಬಿ ಹರಿಯುತ್ತಿವೆ ಬೆಳಗಾವಿಯ ಸಪ್ತನದಿಗಳು: ಪ್ರವಾಹ ಭೀತಿ ಪ್ರದೇಶಗಳಿಗೆ ಡಿಸಿ ನೇತೃತ್ವದ ತಂಡ ಭೇಟಿ
ಬಂಗಾಳಿ ಬಾಬಾ ದೇವಸ್ಥಾನ
Follow us on

ಬೆಳಗಾವಿ ಜು.23: ಮಹಾರಾಷ್ಟ್ರದ (Maharashtra) ಪಶ್ಚಿಮ ಘಟ್ಟ (Western Ghats) ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ (Rain) ಹಿನ್ನೆಲೆ ಜಿಲ್ಲೆಯ ಸಪ್ತನದಿಗಳು (Rivers) ಮೈದುಂಬಿ ಹರಿಯುತ್ತಿವೆ. ಇದರಿಂದ ಬೆಳಗಾವಿ (Belagavi) ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹೀಗಾಗಿ ಇಂದು (ಜು.23) ಈ ಪ್ರದೇಶಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (Nitesh Patil) ನೇತೃತ್ವದ ತಂಡ ಭೇಟಿ ನೀಡಲಿದೆ.
ಜಿಲ್ಲಾಧಿಕರಿಗಳಿಗೆ ಜಿಲ್ಲಾ ಪಂಚಾಯತಿ ಸಿಇಒ ಹರ್ಷಲ್ ಭೋಯರ್, ಎಸ್‌ಪಿ ಡಾ.ಸಂಜೀವ ಪಾಟೀಲ್ ಸಾಥ್ ನೀಡಲಿದ್ದಾರೆ. ಬೆಳಗ್ಗೆ 11.30 ಕ್ಕೆ ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಬಳಿಯ ಘಟಪ್ರಭಾ ನದಿ, ಮಧ್ಯಾಹ್ನ 12.30ಕ್ಕೆ ನಿಪ್ಪಾಣಿ ತಾಲೂಕಿನ ವೇದಗಂಗಾ, ದೂಧಗಂಗಾ ನದಿಗೆ ಅಡ್ಡಲಾಗಿ ಕಟ್ಟಿರುವ ಮುಳುಗಡೆಯಾದ ಸೇತುವೆಗಳ ವೀಕ್ಷಣೆ ಮಾಡಲಿದ್ದಾರೆ.

ಮಧ್ಯಾಹ್ನ 2ಕ್ಕೆ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಮಾಂಜರಿ ಸೇತುವೆ, ಸಂಜೆ 4 ಗಂಟೆಗೆ ಗೋಕಾಕ ತಾಲೂಕಿನ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಲೋಳಸೂರ ಸೇತುವೆ ವೀಕ್ಷಿಸಲಿದ್ದಾರೆ. ಬಳಿಕ ಪ್ರವಾಹ ಪರಿಸ್ಥಿತಿ ಉಂಟಾದರೇ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ.

ತುಂಬಿ ಹರಿಯುತ್ತಿರುವ ಕಳಸಾ ಮತ್ತು ಬಂಡೂರಿ ನಾಲಾ ನೀರು ವ್ಯರ್ಥ

ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ನಿತ್ಯ 200-235 ಮಿ‌ಮೀ ಮಳೆಯಾಗುತ್ತಿದೆ. ಇದರಿಂದ ಮಹದಾಯಿ ನದಿಗೆ ಒಳಹರಿವು ಹೆಚ್ಚಾದ ಹಿನ್ನೆಲೆ ಕಳಸಾ ಬಂಡೂರಿ ನಾಲಾ ತುಂಬಿ ಹರಿಯುತ್ತಿದೆ. ಈ ನಾಲಾ ನೀರು ರಾಜ್ಯದ ಮಲಪ್ರಭಾ ನದಿ ಸೇರಬೇಕಿತ್ತು. ಆದರೆ ಕಳಸಾ ಬಂಡೂರಿ ನಾಲಾ ಕಾಮಗಾರಿ ಅಪೂರ್ಣ ಹಿನ್ನೆಲೆ ಗೋವಾ ಮೂಲಕ ಸಮುದ್ರ ಸೇರಿ ವ್ಯರ್ಥವಾಗುತ್ತಿದೆ. ಕಳಸಾ ಬಂಡೂರಿ ನಾಲೆಯನ್ನು ಮಲಪ್ರಭಾ ನದಿಗೆ ಜೋಡಿಸಲು ಉತ್ತರ ಕರ್ನಾಟಕ ಜನರು ಐದು ದಶಕಗಳಿಂದ ನಿರಂತರ ಹೋರಾಟ ನಡೆಯುತ್ತಿದೆ.

ಇದನ್ನೂ ಓದಿ:  ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಘಟಪ್ರಭಾ ನದಿಗೆ ಒಳಹರಿವು ಹೆಚ್ಚಳ ಬೆಳಗಾವಿ ಜಿಲ್ಲೆಯ 14 ಸೇತುವೆಗಳು ಮುಳುಗಡೆ

ಮಹದಾಯಿ ನ್ಯಾಧೀಕರಣದಿಂದ ಕಳಸಾ ನಾಲಾದಿಂದ 1.72 ಟಿಎಂಸಿ ನೀರು ರಾಜ್ಯಕ್ಕೆ ಬರಬೇಕು. ಈ ನೀರನ್ನು ಕುಡಿಯುವ ನೀರಿಗೆ ಬಳಕೆ ಮಾಡಿಕೊಳ್ಳಬೇಕು. ಆದರೆ ಸುಪ್ರೀಂಕೋರ್ಟ್​ನಲ್ಲಿ ಮತ್ತೆ ಗೋವಾ ಕ್ಯಾತೆ ತೆಗೆದ ಹಿನ್ನೆಲೆ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗಿದೆ. ಇದರಿಂದ ಮಲಪ್ರಭಾ ನದಿ ಸೇರಬೇಕಿದ್ದ ನೀರು ಗೋವಾ ಮೂಲಕ ಸಮುದ್ರ ಸೇರಿ ವ್ಯರ್ಥವಾಗುತ್ತಿದೆ.

ನಿಪ್ಪಾಣಿ ತಾಲೂಕಿನಲ್ಲಿ ಪ್ರವಾಹ ಭೀತಿ

ಹೌದು ಕಾರದಗಾ ಗ್ರಾಮದ ಕಾರದಗಾ ಹೊರವಲಯದಲ್ಲಿರುವ ಬಂಗಾಳಿ ಬಾಬಾ ದೇವಸ್ಥಾನ ಕಮ್ ದರ್ಗಾಕ್ಕೆ ಜಲದಿಗ್ಭಂದನವಾಗಿದೆ. ಬಂಗಾಳಿ ಬಾಬಾ ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿರುವ ಧಾರ್ಮಿಕ ಕೇಂದ್ರವಾಗಿದೆ. ಬಂಗಾಳಿ ಬಾಬಾ ಧಾರ್ಮಿಕ ಕೇಂದ್ರಕ್ಕೆ ನೀರು ಆವರಿಸಿದ ಹಿನ್ನೆಲೆ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ದೂಧ್‌ಗಂಗಾ ನದಿಗೆ ಪ್ರತಿದಿನ 20 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದೆ. ದೂಧ್‌ಗಂಗಾ ನದಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿ ಸೇರುತ್ತದೆ. ಇದರಿಂದ ಕೃಷ್ಣಾ ನದಿಗೆ ಪ್ರತಿದಿನ 92 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ