ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಘಟಪ್ರಭಾ ನದಿಗೆ ಒಳಹರಿವು ಹೆಚ್ಚಳ ಬೆಳಗಾವಿ ಜಿಲ್ಲೆಯ 14 ಸೇತುವೆಗಳು ಮುಳುಗಡೆ
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾದ ಹಿನ್ನೆಲೆ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಘಟಪ್ರಭಾ ನದಿಗಳಿಗೆ ಒಳಹರಿವು ಹೆಚ್ಚಾಗಿದೆ. ಕೃಷ್ಣಾ ನದಿಗೆ 92 ಸಾವಿರ ಕ್ಯೂಸೆಕ್, ದೂಧ್‌ಗಂಗಾ ನದಿಗೆ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು 14 ಸೇತುವೆಗಳು ಮುಳುಗಡೆಯಾಗಿವೆ.
ಬೆಳಗಾವಿ ಜು.22: ಮಹಾರಾಷ್ಟ್ರದ (Maharashtra) ಪಶ್ಚಿಮ ಘಟ್ಟ (Western Ghats) ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾದ ಹಿನ್ನೆಲೆ ಕೃಷ್ಣಾ (Krishna), ವೇದಗಂಗಾ, ದೂಧ್‌ಗಂಗಾ, ಘಟಪ್ರಭಾ (Ghataprabha) ನದಿಗಳಿಗೆ ಒಳಹರಿವು ಹೆಚ್ಚಾಗಿದೆ. ಕೃಷ್ಣಾ ನದಿಗೆ 92 ಸಾವಿರ ಕ್ಯೂಸೆಕ್, ದೂಧ್‌ಗಂಗಾ ನದಿಗೆ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಒಟ್ಟು 14 ಸೇತುವೆಗಳು ಮುಳುಗಡೆಯಾಗಿವೆ. ಇದರಲ್ಲಿ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಒಟ್ಟು 9 ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ.
ವೇದಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ನಿಪ್ಪಾಣಿ ತಾಲೂಕಿನ ಭೋಜವಾಡಿ-ಕಾರದಗಾ, ಮಲಿಕವಾಡ-ದತ್ತವಾಡ ಸೇತುವೆ, ಕುನ್ನೂರು-ಬಾರವಾಡ, ಸಿದ್ನಾಳ್-ಅಕ್ಕೋಳ, ಭೋಜ್-ಕುನ್ನೂರು ಸೇತುವೆ, ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಮಾಂಜರಿ-ಬಾವನಸೌದತ್ತಿ ಸೇತುವೆ, ಕಾಗವಾಡ ತಾಲೂಕಿನ ಮಂಗಾವತಿ-ರಾಜಾಪುರ ಸೇತುವೆ, ಹುಕ್ಕೇರಿ ತಾಲೂಕಿನ ಅರ್ಜುನವಾಡಿ-ಕೋಚರಿ ಸೇತುವೆ, ಅರ್ಜುನವಾಡಿ-ಕುರ್ಣಿ ಮತ್ತು ಕುರ್ಣಿ-ಕೋಚರಿ ಸೇತುವೆ, ಹಾಲತ್ರಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿರುವ ಖಾನಾಪುರ ತಾಲೂಕಿನ ಖಾನಾಪುರ-ಹೆಮ್ಮಡಗಾ ಕೆಳಹಂತದ ಸೇತುವೆ ಮುಳುಗಡೆಯಾಗಿದೆ. ಈ ಹಿನ್ನೆಲೆ ಸೇತುವೆ ಎರಡು ಬದಿ ಬ್ಯಾರಿಕೇಡ್ ಹಾಕಿ ಪೊಲೀಸರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗದ ಮೂಲಕ ಸಂಚರಿಸುತ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ: ಬೈಲಹೊಂಗಲ ತಾಲೂಕಿನ 3 ಮನೆಗಳು ಕುಸಿತ; 13 ಜನರಿಗೆ ಗಾಯ
ಇನ್ನು ಮಹರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಸತಾರ ಜಿಲ್ಲೆಯ ಕೊಯ್ನಾ ಜಲಾಶಯ ಶೇ 40 ರಷ್ಟು ಭರ್ತಿಯಾಗಿದೆ. ಸದ್ಯಕ್ಕೆ ಕೊಯ್ನಾ ಜಲಾಶಯಕ್ಕೆ 27 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದೆ. ಕೊಯ್ನಾ ಅಚ್ಚುಕಟ್ಟು ಪ್ರದೇಶದಲ್ಲಿ 113 ಮಿಲಿ ಮೀಟರ್ ಮಳೆಯಾಗಿದೆ. ಮಹಾಬಲೇಶ್ವರದಲ್ಲಿ 140 ಮಿ.ಮೀ. ಮಳೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ