ಗಾಡಿ ಕಳಿಸಿದ ತಕ್ಷಣ ಹೋಗಬೇಡಿ: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 29, 2021 | 8:41 PM

ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ನೀಡಲು ವಿಡಿಯೊ ಚಿತ್ರೀಕರಣ ನಡೆಸಲು ಚುನಾವಣಾ ಆಯೋಗ, ಚುನಾವಣಾಧಿಕಾರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಗಾಡಿ ಕಳಿಸಿದ ತಕ್ಷಣ ಹೋಗಬೇಡಿ: ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆ ಶಿವಕುಮಾರ್ ವಾಗ್ದಾಳಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
Follow us on

ಬೆಳಗಾವಿ: ರಮೇಶ್, ಲಖನ್​ ಗಾಡಿ ಕಳಿಸಿದ ಅಂದ ತಕ್ಷಣ ಹೋಗಬೇಡಿ. ನಮ್ಮ ಪಕ್ಷದ ಮುಖಂಡರು ಈ ಸಂಸ್ಕೃತಿಯನ್ನು ಬಿಟ್ಟುಬಿಡಬೇಕು. ಅರಭಾವಿ ಕ್ಷೇತ್ರದಲ್ಲಿ ಮತದಾರರಿಗೆ ₹10,000 ಮುಂಗಡ ಪಾವತಿ ಮಾಡಿದ್ದಾರೆ ಎಂಬ ಮಾತುಗಳಿವೆ. ಮೂರ್ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಹಾಕುವುದಿಲ್ಲವೆಂಬ ಮಾಹಿತಿ ಬಂದಿದೆ ಎಂದು ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ವಿರುದ್ಧ ಡಿಕೆ ಶಿವಕುಮಾರ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಮತದಾರರ ಚೀಟಿ ಪಡೆದು ನಾವೇ ಮತ ಹಾಕುತ್ತೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ನೀಡಲು ವಿಡಿಯೊ ಚಿತ್ರೀಕರಣ ನಡೆಸಲು ಚುನಾವಣಾ ಆಯೋಗ, ಚುನಾವಣಾಧಿಕಾರಿಗೆ ಮನವಿ ಮಾಡುತ್ತೇವೆ ಎಂದು ಹೇಳಿದರು.

ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಸ್ವತಃ ಏಜೆಂಟ್ ಆಗುತ್ತಿದ್ದಾರೆಂದು ಕೇಳಿದೆ. ಅವರ ಉತ್ಸಾಹವನ್ನು ಇಡೀ ರಾಜ್ಯವೇ ಸ್ವಾಗತಿಸುತ್ತಿದೆ. ನಮ್ಮ ಎದುರಾಳಿಗಳು ಯಾಱರ ಜತೆ ಮಾತನಾಡುತ್ತಿದ್ದಾರೆಂದು ಮಾಹಿತಿ ಪಡೆಯುತ್ತೇವೆ. ನಮ್ಮದೇ ಸರ್ವೆ ತಂಡವಿದೆ. ಅವರಿಂದ ಕ್ಷೇತ್ರದ ಆಗುಹೋಗುಗಳ ಮಾಹಿತಿ ಪಡೆದುಕೊಳ್ಳುತ್ತೇವೆ. ಊರೂರಿಗೆ ಗಾಡಿ ಕಳುಹಿಸಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಕರೆಸುವ ತಂತ್ರ ರೂಪಿಸುತ್ತಿದ್ದಾರೆಂಬ ಮಾಹಿತಿ ಬಂದಿದೆ ಎಂದು ನುಡಿದರು.

ಕೆಲವರನ್ನು ಇಲ್ಲಿ ದೊಡ್ಡ ಸಾಹುಕಾರ್ ಅಂತಾರೆ. ಅವರು ಯಾವ ಸೀಮೆಯ ಸಾಹುಕಾರ ಎಂದು ಪ್ರಶ್ನಿಸಿದರು. ಮೊದಲು ಚುನಾವಣೆ ನಡೆಯುವುದು ಮುಖ್ಯ. ಈ ವೇಳೆ ನೆಂಟಸ್ತನ ವಿಶ್ವಾಸವನ್ನು ನಾವು ಒಪ್ಪುವುದಿಲ್ಲ. ಬಿಜೆಪಿಯವರಿಗೂ ಇದು ದೊಡ್ಡ ಪ್ರಾಣಸಂಕಟವಾಗಿದೆ. ಬೆಳಗಾವಿ ಜಿಲ್ಲೆಯ ದುಷ್ಟ ರಾಜಕಾರಣಕ್ಕೆ ತೆರೆ ಎಳೆಯುವ ವಿಶ್ವಾಸ ನಮಗಿದೆ. ಬಿಜೆಪಿಯವರು ಇದಕ್ಕೆ ಇತಿಶ್ರೀ ಹಾಡದಿದ್ದರೆ ಅವರಿಗೂ ಭವಿಷ್ಯ ಇರುವುದಿಲ್ಲ. ಸದ್ಯ ಕಾಂಗ್ರೆಸ್ ಪಕ್ಷ ಕ್ಲೀನ್ ಆಗಿದೆ, ಆ ಕೊಳಕು ನಮಗೆ ಬೇಡ. ಪರಿಷತ್​ ಚುನಾವಣೆಯಲ್ಲಿ ಬಂಡಾಯಗಾರರಿಗೆ ಬುದ್ಧಿ ಕಲಿಸಬೇಕು ಎಂದು ಕರೆ ನೀಡಿದರು.

ಬೆಳಗಾವಿ ಜಿಲ್ಲೆಯ ದುಷ್ಟ ರಾಜಕಾರಣಕ್ಕೆ ಬಿಜೆಪಿ ನಾಯಕರು ಕೊನೆ ಹಾಡುತ್ತಾರೆ ಎಂದು ತಿಳಿದಿದ್ದೇನೆ. ಬಿಜೆಪಿಯವರು ಇದಕ್ಕೆ ಕೊನೆ ಹಾಡದಿದ್ದರೆ ಅವರಿಗೂ ಭವಿಷ್ಯ ಇಲ್ಲ. ಬಹಳ ಜನ ಆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬರೋರಿದ್ದಾರೆ. ಯಡಿಯೂರಪ್ಪ ನಮ್ಮದು ಒಂದೇ ವೋಟ್ ಅಂತಾ ಹೇಳಿಹೋಗಿದ್ದಾರೆ. ನೀವು ಟ್ರಯಲ್ ಬ್ಯಾಲೆಟ್ ಮಾಡಿ ಯಾವ ರೀತಿ ಮತದಾನ ಮಾಡಬೇಕು ಎಂದು ಎಲ್ಲರಿಗೂ ತಿಳಿಸಿಕೊಡಿ. ಬಂಡಾಯ ಪ್ರವೃತ್ತಿಗೆ ನೀವು ಅವಕಾಶ ಕೊಡಬಾರದು ಎಂದು ವಿನಂತಿಸಿದರು.

ಇದನ್ನೂ ಓದಿ: ಚುನಾವಣೆ ಅಕ್ರಮ ಆರೋಪ: ಮತಗಟ್ಟೆಗಳಲ್ಲಿ ಸಿಸಿಕ್ಯಾಮರಾ ಹಾಕಬೇಕು- ಡಿಕೆ ಶಿವಕುಮಾರ್ ಹೇಳಿಕೆ
ಇದನ್ನೂ ಓದಿ: ಮಾನವಸಹಿತ ಗಗನಯಾನ ಕಾರ್ಯಕ್ರಮ ಸ್ಥಳಾಂತರ ಮಾಡದಂತೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿಗೆ ಮನವಿ ಪತ್ರ ಬರೆದ ಡಿಕೆ ಶಿವಕುಮಾರ್