Karnataka Winter Session 2022 Highlights: ವಿಧಾನಸಭೆ ಕಲಾಪ ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ

| Updated By: ಆಯೇಷಾ ಬಾನು

Updated on: Dec 23, 2022 | 1:20 PM

Karnataka News, Belagavi Assembly Session Live News Highlights: ಚಳಿಗಾಲದ ಅಧಿವೇಶನದ ಐದನೇ ದಿನವೂ ಸಾಲು ಸಾಲು ಪ್ರತಿಭಟನೆಗಳು ನಡೆಯಲಿವೆ. ಕ್ಷಣ ಕ್ಷಣದ ಮಾಹಿತಿಗಾಗಿ ಫಾಲೋ ಮಾಡಿ.

Karnataka Winter Session 2022 Highlights: ವಿಧಾನಸಭೆ ಕಲಾಪ ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ
ಬೆಳಗಾವಿ ಚಳಿಗಾಲದ ಅಧಿವೇಶನ

Karnataka News, Belagavi Assembly Session Live News Updates: ಬೆಳಗಾವಿ: ಜಿಲ್ಲೆಯ ಸುವರ್ಣ ಸೌಧದಲ್ಲಿ ಇಂದು ಐದನೇ ದಿನದ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನ ಐದನೇ ದಿನಕ್ಕೆ ಕಾಲಿಟ್ಟರೂ ಪ್ರತಿಭಟನೆಗಳು ಕಮ್ಮಿಯಾಗಿಲ್ಲ. ಇಂದು ಕೂಡ ಸಾಲು ಸಾಲು ಪ್ರತಿಭಟನೆಗಳು ನಡೆಯಲಿವೆ. ಕೊಂಡಸಕೊಪ್ಪ, ಬಸ್ತವಾಡ ಬಳಿ 11 ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದ್ದು, 2 ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಲಿವೆ. ಲವ್ ಜಿಹಾದ್ ವಿರುದ್ಧ ವಿಶೇಷ ಪೊಲೀಸ್ ದಳ ಸ್ಥಾಪಿಸಲು ಆಗ್ರಹಿಸಲಿವೆ. ಹಿಂದೂ ಜನ ಜಾಗೃತಿ ಸಮಿತಿ ಗೋವಾದಿಂದ ಪ್ರತಿಭಟನೆ ನಡೆಸಲಿದೆ. ಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಒಂದು ಲಕ್ಷ ಪರಿಹಾರಕ್ಕಾಗಿ ಆಗ್ರಹಿಸಿ ಸ್ವಾಭಿಮಾನಿ ರೈತ ಸಂಘ ಪ್ರತಿಭಟನೆ ನಡೆಸಲಿದೆ. ವಸತಿ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಹೋರಾಟ ನಡೆಯಲಿದೆ. ಹೀಗೆ ಅನೇಕ ವಿಚಾರಗಳ ಸಂಬಂಧ ಇಂದು ಪ್ರತಿಭಟನೆ ನಡೆಯಲಿದ್ದು ಕ್ಷಣ ಕ್ಷಣದ ಮಾಹಿತಿಗಾಗಿ ಲೈವ್ ಫಾಲೋ ಮಾಡಿ.

LIVE NEWS & UPDATES

The liveblog has ended.
  • 23 Dec 2022 01:15 PM (IST)

    Karnataka Winter Session 2022 Live: ವಿಧಾನಸಭೆ ಕಲಾಪ ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ

    ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಕಲಾಪವನ್ನು ಸೋಮವಾರ ಬೆಳಗ್ಗೆ 11 ಗಂಟೆಗೆ ಮುಂದೂಡಿದ್ದಾರೆ.

  • 23 Dec 2022 01:10 PM (IST)

    Karnataka Winter Session 2022 Live: 2019-20, 2020-21ನೇ ಸಾಲಿನ ಟೆಂಡರ್​ ಬಗ್ಗೆ ಸಿಐಡಿ ತನಿಖೆ

    ಗಂಗಾ ಕಲ್ಯಾಣ ಯೋಜನೆ ಟೆಂಡರ್ ನಿಯಮ ಉಲ್ಲಂಘನೆ ಆರೋಪ ಸಂಬಂಧ ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2019-20, 2020-21ನೇ ಸಾಲಿನ ಟೆಂಡರ್​ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ.


  • 23 Dec 2022 01:07 PM (IST)

    Karnataka Winter Session 2022 Live: ದೊಡ್ಡ ಸಮುದಾಯ 2ಎಗೆ ಬಂದ್ರೆ ಸಣ್ಣ ಸಮುದಾಯಕ್ಕೆ ತೊಂದರೆ ಆಗುತ್ತೆ

    ಮೀಸಲಾತಿ ಹೋರಾಟ ಎಲ್ಲ ಸಮಾಜಗಳು ಮಾಡುತ್ತಿವೆ. ಕುರುಬ ಸಮಾಜದ ಮೀಸಲಾತಿ ಬಗ್ಗೆ ಸಿಎಂ ಮಾತನಾಡುತ್ತಿಲ್ಲ. 2ಎ ನಲ್ಲಿ ಸಣ್ಣ ಸಮುದಾಯಗಳು ಇದ್ದಾವೆ. ಕುರುಬ ಸಮುದಾಯಲ್ಲಿ ಬಹಳ ಬಡವರಿದ್ದಾರೆ. ಹಾಗಾಗಿ ನಮಗೆ ಎಸ್ಟಿ ಮೀಸಲಾತಿ ಕೊಡಬೇಕು. 2ಎ ಮೀಸಲಾತಿ ಬೇರಯವರು ಕೇಳಿದ್ರೆ ತಪ್ಪಲ್ಲ. ದೊಡ್ಡ ಸಮುದಾಯ 2ಎಗೆ ಬಂದ್ರೆ ಸಣ್ಣ ಸಮುದಾಯಕ್ಕೆ ತೊಂದರೆ ಆಗುತ್ತೆ ಎಂದು ಹರಿಹರ ಶಾಸಕರ ಎಸ್ ರಾಮಪ್ಪ ಹೇಳಿದ್ರು.

  • 23 Dec 2022 01:03 PM (IST)

    Karnataka Winter Session 2022 Live: ಸೀಜ್ ಆಗಿರುವ ವೆಹಿಕಲ್ ಬಗ್ಗೆ ಗಮನ ಸೆಳೆದ ಶಾಸಕರು

    ಪೊಲೀಸರು ಸೀಜ್ ಮಾಡ್ತಿರೋ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಲಾಗ್ತಿದೆ. ಇದಕ್ಕೆ ಪ್ರತ್ಯೇಕ ಜಾಗ ಮಾಡಿ ಅಂತ ಯು.ಟಿ ಖಾದರ್ ಮನವಿ ಮಾಡಿದ್ದಾರೆ. ಸ್ಟೇಷನ್ ಮುಂದೆ ಜಾಗವೇ ಇರೋದಿಲ್ಲ. ಆದ್ರೂ ಜೋಡಿಸಿ ನಿಲ್ಲಿಸ್ತಿದ್ದಾರೆ, ಓಡಾಡಲು ಆಗ್ತಿಲ್ಲ ಎಂದರು. ಈ ವೇಳೆ ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಕೂಡ ಸಮಸ್ಯೆ ಇದೆ. ಫುಟ್‌ಪಾತ್ ಮೇಲೆ ನಿಲ್ಲಿಸ್ತಾರೆ. ಓಡಾಡಲೂ ಜಾಗವಿಲ್ಲ ಅಂತ ಆರೋಪಿಸಿದ್ರು. ಸರ್ವಜ್ಞ ನಗರ ಶಾಸಕ ಕೆ.ಜೆ. ಜಾರ್ಜ್ ಎದ್ದು ನಿಂತು, ಬೆಂಗಳೂರಿನ ಎಲ್ಲೆಡೆ ಈ ಸಮಸ್ಯೆ ಇದೆ. ಸೀಜ್ ಆದ ಎಲ್ಲಾ ವಾಹನಗಳನ್ನ ಒಂದು ಕಡೆ ನಿಲ್ಲಿಸಲು ಸೂಕ್ತ ಸ್ಥಳ ನಿಯೋಜಿಸುವಂತೆ ಮನವಿ ಮಾಡಿದ್ರು. ಇದಕ್ಕೆ ಉತ್ತರಿಸಿದ ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಸ್ಟೇಷನ್ ಮುಂದೆ ಗಾಡಿ ನಿಲ್ಲಿಸಿದ್ರೆ ಎಲ್ಲಾ ಪಾರ್ಟ್ಸ್ ಕಳ್ಳತನ ಆಗ್ತಿದೆ. ಇನ್ನು ಬೇರೆ ಕಡೆ ಮಾಡಿದ್ರೆ ಇಂಜಿನ್ನೇ ಕಳವು ಮಾಡ್ತಾರೆ. ಇದನ್ನ ಹೇಗೆ ಬಗೆಹರಿಸಬೇಕು ನೋಡ್ತೀವಿ, ಇದನ್ನು ಗೃಹಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

  • 23 Dec 2022 12:58 PM (IST)

    Karnataka Winter Session 2022 Live: ಪರಿಶಿಷ್ಟ ಪಂಗಡಗಳಿಗೆ ನಾಗಮೋಹನ್ ದಾಸ್ ವರದಿ ಬಗ್ಗೆ ತಿಪ್ಪೇಸ್ವಾಮಿ ಪ್ರಸ್ತಾಪ

    ಪರಿಶಿಷ್ಟ ಪಂಗಡಗಳಿಗೆ ನಾಗಮೋಹನ್ ದಾಸ್ ವರದಿಯ ಶಿಫಾರಸ್ಸಿನ ಅನ್ವಯ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ತೆಗೆದುಕೊಂಡ ಕ್ರಮ. ಶೆಡ್ಯುಲ್ 9 ಕ್ಕೆ ತೆಗೆದುಕೊಂಡು ಹೋದ್ರೆ ಕೇಂದ್ರ ಒಪ್ಪುತ್ತಾ ಎಂದು ತಿಪ್ಪೇಸ್ವಾಮಿ ಪ್ರಸ್ತಾಪಿಸಿದ್ದು ಇದಕ್ಕೆ ಸಚಿವ ಶ್ರೀರಾಮುಲು ಉತ್ತರ ನೀಡಿದ್ದಾರೆ. 1961 ರಿಂದ 2011 ಜನಸಂಖ್ಯೆ ಪ್ರಕಾರ 42 ಲಕ್ಷ ಇದೆ. 1956 ರಲ್ಲಿ ಮೀಸಲಾತಿ ಕೊಡಲಾಗಿತ್ತು. ಆಗ ಮೂರು ಪರ್ಸೆಂಟ್ ಮಾತ್ರ ಇತ್ತು. ಮೀಸಲಾತಿ ಕುರಿತು ಕೇಂದ್ರ ಘೋಷಣೆ ಮಾಡಿದೆ. ಶಿಕ್ಷಣ, ಉದ್ಯೋಗದಲ್ಲಿ 7 ಪರ್ಸೆಂಟ್ ಕೊಡಲಾಗಿದೆ. 2011ರಲ್ಲಿ ನಮ್ಮ ಜನಸಂಖ್ಯೆ 42.49 ಲಕ್ಷ ಇತ್ತು. ಜನಸಂಖ್ಯೆ ಬೆಳೆಯುತಾ ಇತ್ತೇ ಹೊರತು ಮೀಸಲಾತಿ ಹೆಚ್ಚಾಗಿರಲಿಲ್ಲ. ನಾಗಮೋಹನ ದಾಸ್ ಅವರು ಕೊಟ್ಟ ವರದಿ ಮೇಲೆ ಮೀಸಲಾತಿ ಹೆಚ್ಚಾಯ್ತು. ಬಿಲ್ ಪಾಸ್ ಆದ ನಂತರ ಕೇಂದ್ರ ಸರ್ಕಾರಕ್ಕೆ ಕೊಡಲಾಗುತ್ತದೆ. ಶೆಡ್ಯೂಲ್ಡ್ 9 ರಲ್ಲಿ ಸೇರಿಸಲು ಕೋರಲಾಗುತ್ತದೆ. 50 ಪರ್ಸೆಂಟ್ ಮೀರದಂತೆ ಮೀಸಲಾತಿ ಇರಬೇಕು ಅಂತ ಇದೆ. EWS ಬಗ್ಗೆ ಕೇಂದ್ರ ನಿರ್ಧಾರ ತೆಗೆದುಕೊಂಡಿದೆ. ಬೇರೆ ಬೇರೆ ರಾಜ್ಯದ ಮೀಸಲಾತಿ ನೋಡಿ ಇಲ್ಲೂ ಮಾಡಲಾಗಿದೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡ್ತೀವಿ ಎಂದರು.

  • 23 Dec 2022 12:55 PM (IST)

    Karnataka Winter Session 2022 Live: ಕಾಡಾನೆ ಹಾವಳಿ ಬಗ್ಗೆ ಶಾಸಕ ಹೆಚ್​.ಕೆ.ಕುಮಾರಸ್ವಾಮಿ ಸಿಎಂಗೆ ಪ್ರಶ್ನೆ

    ಕಾಡಾನೆ ಹಾವಳಿ ಬಗ್ಗೆ ವಿಧಾನಸಭೆಯಲ್ಲಿ ಸಕಲೇಶಪುರ ಶಾಸಕ ಹೆಚ್​.ಕೆ.ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. ಆನೆ ಟಾಸ್ಕ್​​ಫೋಸ್ಟ್​ ಮಾಡಿದ್ದೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಅದಕ್ಕಾಗಿ 47 ಸಿಬ್ಬಂದಿ ನೇಮಕ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದ್ರೆ ಒಬ್ಬ ಸಿಬ್ಬಂದಿಯೂ ಸ್ವತಂತ್ರ ಹುದ್ದೆಯಲ್ಲಿಲ್ಲ. ಸಿಬ್ಬಂದಿ ನೇಮಿಸದೇ ಟಾಸ್ಕ್​ಫೋರ್ಸ್​​ ರಚನೆ ಮಾಡಿದ್ರೆ ವ್ಯರ್ಥ ಎಂದರು. ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ ಕಾರಜೋಳ ಅವರೆ ಸಿಎಂಗೆ ಎರಡು ವಿಷಯವನ್ನು ಹೇಳಬೇಕು. ಮೊದಲನೆಯದ್ದು ಆನೆ ಟಾಸ್ಕ್​ಫೋರ್ಸ್​ ಸಿಬ್ಬಂದಿ ನೇಮಿಸಬೇಕು. ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕೊಡಬೇಕು. ಸಿಎಂ ಹೇಳಿದ ಮೇಲೂ ಆದೇಶ ಪಾಲನೆ ಆಗಲಿಲ್ಲ ಅಂದ್ರೆ ಹೇಗೆ? ಎಂದು ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಶ್ನೆ ಮಾಡಿದ್ರು.

  • 23 Dec 2022 12:47 PM (IST)

    Karnataka Winter Session 2022 Live: ರಾಜ್ಯದ ಯೋಧರ ಕ್ಷೇಮಾಭಿವೃದ್ಧಿ ಬಗ್ಗೆ ಪ್ರಸ್ತಾಪ

    ಗಮನ ಸೆಳೆಯುವ ಸೂಚನಾ ಕಲಾಪದ ವೇಳೆ ವಿಧಾನಸಭೆಯಲ್ಲಿ ರಾಜ್ಯದ ಯೋಧರ ಕ್ಷೇಮಾಭಿವೃದ್ಧಿ ಬಗ್ಗೆ ಖಾದರ್ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರದ ಅರೆಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ಯೋಧರು, ನಿವೃತ್ತ ಯೋಧರು, ಹುತಾತ್ಮ ಕುಟುಂಬಗಳ ಕ್ಷೇಮಾಭಿವೃದ್ಧಿಗೆ ರಾಜ್ಯದಲ್ಲಿ ಅರೆ ಸೈನಿಕ ಕಲ್ಯಾಣ‌ ಮಂಡಳಿ ಸ್ಥಾಪಿಸಲು ವಿಧಾನಸಭೆಯಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮನವಿ ಮಾಡಿದ್ರು.

  • 23 Dec 2022 12:45 PM (IST)

    Karnataka Winter Session 2022 Live: ಗಮನ ಸೆಳೆಯುವ ಸೂಚನಾ ಕಲಾಪ

    ರಾಜ್ಯದಲ್ಲಿನ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಸಾರಿಗೆ ಇಲಾಖೆಗಳಲ್ಲಿ ಬಳಕೆಯಾಗದ ಮತ್ತು ಹಳೆಯದಾದ ನಾಲ್ಕು ಚಕ್ರದ ವಾಹನಗಳು ಮತ್ತು ಬಸ್ ಗಳನ್ನು ಪರಿಶೀಲಿಸಿ ಸ್ಕ್ರ್ಯಾಪ್ ಮಾಡುವಂತೆ ಮನವಿ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದ ನಂಜನಗೂಡು ಶಾಸಕ ಹರ್ಷವರ್ಧನ್.

  • 23 Dec 2022 12:17 PM (IST)

    Karnataka Winter Session 2022 Live: ಸ್ಟಾಂಪ್ ನಾಲ್ಕನೇ ತಿದ್ದುಪಡಿ ವಿಧೇಯಕ ಅಂಗೀಕಾರ

    ಸ್ಟಾಂಪ್ ನಾಲ್ಕನೇ ತಿದ್ದುಪಡಿ ವಿಧೇಯಕ ಅಂಗೀಕಾರ. ಬೀದಿ ಬದಿಯ ವ್ಯಾಪಾರಿಗಳಿಗೆ ಆತ್ಮ ನಿರ್ಭರ ನಿಧಿಯಡಿ ಸ್ಟಾಂಪ್ ಶುಲ್ಕ ಮನ್ನಾ ಮಾಡಲು ಅವಕಾಶ ಮಾಡಿಕೊಡುವ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

  • 23 Dec 2022 12:12 PM (IST)

    Karnataka Winter Session 2022 Live: ಉ.ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಚರ್ಚೆಗೆ ಜೆಡಿಎಸ್ ನಿಲುವಳಿ

    ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಕಲಾಪಕ್ಕೆ ತಡವಾಗಿ ಹಾಜರಾಗಿದ್ದಾರೆ. ಉ.ಕರ್ನಾಟಕ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆಗೆ ಆಗ್ರಹಿಸಿ ವಿಧಾನಸಭೆಯಲ್ಲಿ ಜೆಡಿಎಸ್ ಪಕ್ಷ​ ನಿಲುವಳಿ ನೋಟಿಸ್​​​​ ನೀಡಿದೆ. ನಿಯಮ 69ರಡಿ ಸೋಮವಾರದ ಬಳಿಕ ಚರ್ಚೆಗೆ ಅವಕಾಶ ಕೊಡುವುದಾಗಿ ಸ್ಪೀಕರ್ ಕಾಗೇರಿ ತಿಳಿಸಿದರು.

  • 23 Dec 2022 12:07 PM (IST)

    Karnataka Winter Session 2022 Live: ಉಪವಾಸ ಸತ್ಯಾಗ್ರಹ, ಮೂವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲು.

    ಬೆಳಗಾವಿಯ ಸುವರ್ಣ ಸೌದದ ಬಳಿ ಬಸ್ತವಾಡದಲ್ಲಿ ಸಾರಿಗೆ ನೌಕರರು ಪ್ರತಿಭಟನೆ ಮುಂದುವರೆಸಿದ್ದಾರೆ. 6 ಜನರಿಂದ ಉಪವಾಸ ಸತ್ಯಾಗ್ರಹ ನಡೆದಿದ್ದು ಈ ಪೈಕಿ ಮೂವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾರಿಗೆ ಸಚಿವ ಶ್ರೀರಾಮಲು ಹಾಗೂ ನೌಕರರ ನಡುವಿನ ಸಂಧಾನ ವಿಫಲ ಹಿನ್ನಲೆ ಪ್ರತಿಭಟನೆ ಮುಂದುವರೆದಿದೆ. ಸಾರಿಗೆ ನೌಕರರು ಕಳೆದ 5 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ವಜಾಗೊಂಡಿರುವ ನೌಕರರನ್ನ ವಾಪಾಸ್ ತೆಗೆದುಕೊಳ್ಳಬೇಕು, ಏಳನೇ ವೇತನ ಆಯೋಗ ಮಾದರಿಯಲ್ಲಿ ವೇತನ ನೀಡಬೇಕು ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

  • 23 Dec 2022 11:51 AM (IST)

    Karnataka Winter Session 2022 Live: ವಿಧಾನಪರಿಷತ್​ ಉಪಸಭಾಪತಿಯಾಗಿ ಎಂ.ಕೆ.ಪ್ರಾಣೇಶ್ ಆಯ್ಕೆ

    ವಿಧಾನಪರಿಷತ್​ ಉಪಸಭಾಪತಿಯಾಗಿ ಎಂ.ಕೆ.ಪ್ರಾಣೇಶ್ ಆಯ್ಕೆಯಾಗಿದ್ದಾರೆ. ಬಿಜೆಪಿಯ ಎಂ.ಕೆ.ಪ್ರಾಣೇಶ್ ಪರ 39 ಮತಗಳು ಚಲಾವಣೆಯಾಗಿದ್ದು ಕಾಂಗ್ರೆಸ್​​ನ ಅರವಿಂದ ಕುಮಾರ್ ಅರಳಿ ಪರ 26 ಮತಗಳು ಬಂದಿವೆ. ವಿಧಾನ ಪರಿಷತ್​​ ಜೆಡಿಎಸ್ ಸದಸ್ಯರಿಂದ ತಟಸ್ಥ ನಿಲುವು.

  • 23 Dec 2022 11:50 AM (IST)

    Karnataka Winter Session 2022 Live: ಗದ್ದಲದ ನಡುವೆಯೇ ಚುನಾವಣೆ ಪ್ರಕ್ರಿಯೆ ಮುಂದುವರಿಕೆ

    ಗದ್ದಲದ ನಡುವೆಯೇ ಚುನಾವಣೆ ಪ್ರಕ್ರಿಯೆ ಮುಂದುವರಿದಿದೆ. ಸದಸ್ಯರು ಎದ್ದು ನಿಂತು ಮತ ಹಾಕುವಂತೆ ಸಭಾಪತಿ ಸೂಚನೆ ನೀಡಿದ್ರು. ಪ್ರಾಣೇಶ್ ಪರ ಮತ ಚಲಾಯಿಸುವವರು ಎದ್ದು ನಿಲ್ಲುವಂತೆ ಸೂಚಿಸಿದ್ದು ಪ್ರಾಣೇಶ್ ಪರ 39 ಮತಗಳು ಚಲಾವಣೆಗೊಂಡಿವೆ.

  • 23 Dec 2022 11:49 AM (IST)

    Karnataka Winter Session 2022 Live: ವಾರಾಂತ್ಯದ ಕಲಾಪದ ದಿನ ಹಲವು ಶಾಸಕರು ಗೈರು

    ವಾರಾಂತ್ಯದ ಕಲಾಪದ ದಿನದಂದು ಸದನದಲ್ಲಿ ಹಲವು ಶಾಸಕರು ಗೈರಾಗಿದ್ದಾರೆ. ವಿಪಕ್ಷಗಳ ಸಾಲಿನಲ್ಲಿ 22 ರಷ್ಟು, ಆಡಳಿತ ಪಕ್ಷದ ಸಾಲಿನಲ್ಲಿ 50 ರಷ್ಟು ಶಾಸಕರು ಗೈರು. ಹಲವು ಶಾಸಕರು ಮಾಸ್ಕ್ ಧರಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಿನ್ನೆ ಸದನಕ್ಕೆ ಹಾಜರಾಗಿ ಇಂದು ಕಲಾಪಕ್ಕೆ ಗೈರು. ಸದನದಲ್ಲಿ ಅಕ್ಕಪಕ್ಕದಲ್ಲಿ ಕುಳಿತು ಚರ್ಚೆಯಲ್ಲಿ ತೊಡಗಿರುವ ಆಡಳಿತ ಪಕ್ಷದ ಶಾಸಕರಾದ ಕೆ.ಎಸ್. ಈಶ್ವರಪ್ಪ ಮತ್ತು ಬಸನಗೌಡ ಪಾಟೀಲ್ ಯತ್ನಾಳ್.

  • 23 Dec 2022 11:47 AM (IST)

    Karnataka Winter Session 2022 Live: ಜೆಡಿಎಸ್ ಭೋಜೇಗೌಡ ಮಾತಿಗೆ ಆಡಳಿತ ಪಕ್ಷ, ಕಾಂಗ್ರೆಸ್ ಆಕ್ಷೇಪ

    ಜೆಡಿಎಸ್​ನ ಭೋಜೇಗೌಡ ಮಾತಿಗೆ ಆಡಳಿತ ಪಕ್ಷ ಹಾಗೂ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ನಾವು ಚುನಾವಣೆ ಸಂದರ್ಭದಲ್ಲಿ ತಟಸ್ಥರಾಗಿರುತ್ತೇವೆ ಎಂದ ಜೆಡಿಎಸ್ ಭೋಜೇಗೌಡ. ಆಗ ಚುನಾವಣೆ ಪ್ರಾರಂಭ ಆದಾಗ ಇದೆಲ್ಲ ಮಾತುಗಳು ಬೇಕಾ? ಚುನಾವಣೆ ಮಾಡಿ ಎಂದು ಪುಟ್ಟಣ್ಣ ಆಗ್ರಹಿಸಿದ್ರು.ಇದಕ್ಕೆ ನಿಮ್ಮ ಪಕ್ಷದ ನಿಲುವು ನೀವು ಮಾತಾಡಿ, ಆದರೆ ನಮ್ಮ ಪಕ್ಷದ ಬಗ್ಗೆ ಯಾಕೆ ಮಾತಾಡ್ತೀರಾ ಎಂದು ಯುಬಿ ವೆಂಕಟೇಶ ಗದ್ದಲ ಶುರು ಮಾಡಿದ್ರು. ಯುಬಿ ವೆಂಕಟೇಶ ಹಾಗೂ ಭೋಜೇಗೌಡ ನಡುವೆ ಮಾತಿನ ಚಕಮಕಿ ಆರಂಭವಾಯಿತು.

  • 23 Dec 2022 11:44 AM (IST)

    Karnataka Winter Session 2022 Live: ಕೇವಲ ಒಂದು ಪಾದಯಾತ್ರೆ , ರಾಲಿ ತಡೆಗಟ್ಟಲು ಕೋವಿಡ್ ಕ್ರಮ ಅಳವಡಿಕೆ ಮಾಡುತ್ತಿಲ್ಲ

    ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು ಅದ್ಭುತವಾಗಿ ಚರ್ಚೆಯಾಗುತ್ತಿವೆ. ಈ ಭಾಗದ ನೀರಾವರಿ, ಕೃಷಿ ಸಮಸ್ಯೆ ಮತ್ತು ಜ್ವಲಂತ ಸಮಸ್ಯೆಗಳು ಚರ್ಚೆಯಾಗುತ್ತಿವೆ. ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗುತ್ತಿದೆ ಎಂದು ಶಾಸಕ ಕುಮಾರ್ ಬಂಗಾರಪ್ಪ ಹೇಳಿದ್ರು.

    ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಮಾರ್ಗಸೂಚಿಗಳನ್ನು ನಮ್ಮ ಸರ್ಕಾರ ಮಾಡಿರುವುದು ಸ್ವಾಗತರ್ಹ. ಆದರೆ ಈ ವಿಚಾರದಲ್ಲಿ ರಾಜಕೀಯ ಮಾಡೋದು ಬೇಡ. ಕೋವಿಡ್ ಬಂದಿರೋದು ಚೀನಾದಿಂದ. ಹೀಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಈ ಬಗ್ಗೆ ಕಾರ್ಯೋನ್ಮುಖವಾಗಿದೆ. ಕೇವಲ ಒಂದು ಪಾದಯಾತ್ರೆ , ರಾಲಿ ತಡೆಗಟ್ಟಲು ಕೋವಿಡ್ ಕ್ರಮ ಅಳವಡಿಕೆ ಮಾಡುತ್ತಿಲ್ಲ. ಅಧಿಕಾರಕ್ಕೆ ಬರಲು ಕೇವಲ ಒಂದು ಪಾದಯಾತ್ರೆದಿಂದ ಸಾಧ್ಯವಾಗುವುದಿಲ್ಲ ಎಂದರು.

  • 23 Dec 2022 11:40 AM (IST)

    Karnataka Winter Session 2022 Live: ಸುವರ್ಣಸೌಧ ಎಂಟ್ರಿಯಲ್ಲಿ ಥರ್ಮಲ್ ಸ್ಯ್ಕಾನಿಂಗ್ ಮತ್ತು ಮಾಸ್ಕ್ ವ್ಯವಸ್ಥೆ

    ವಿದೇಶದಲ್ಲಿ ಕೋವಿಡ್ ಹೆಚ್ಚಳ ಹಿನ್ನೆಲೆ ಬೆಳಗಾವಿ ಸುವರ್ಣಸೌಧದಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಸುವರ್ಣಸೌಧ ಎಂಟ್ರಿಯಲ್ಲಿ ಥರ್ಮಲ್ ಸ್ಯ್ಕಾನಿಂಗ್ ಮತ್ತು ಮಾಸ್ಕ್ ವ್ಯವಸ್ಥೆ ಮಾಡಲಾಗಿದೆ.  ಆರೋಗ್ಯ ಇಲಾಖೆ ಸಿಬ್ಬಂದಿಗಳು ಜನ ಪ್ರತಿನಿಧಿಗಳು ಮತ್ತು ಜನರಿಗೆ ಥರ್ಮಲ್ ಸ್ಕ್ಯಾನ್ ಮಾಡುತ್ತಿದ್ದಾರೆ.

  • 23 Dec 2022 11:11 AM (IST)

    Karnataka Winter Session 2022 Live: ಕಾಂಗ್ರೆಸ್ ವಿರುದ್ಧ ಜಗದೀಶ್ ಶೆಟ್ಟರ್ ಕಿಡಿ

    ಮಹಾದಾಯಿ ಕುರಿತು ಕಾಂಗ್ರೆಸ್ ಸಮಾವೇಶ ವಿಚಾರಕ್ಕೆ ಚುನಾವಣೆ ಬಂದಾಗ ಕಣ್ಣೀರು ಹಾಕೋದನ್ನ ಬಿಡಿ ಅಂತ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ. ಕಾಂಗ್ರೆಸ್​ಗೆ ಎಲೆಕ್ಷನ್ ಬಂದಾಗ ಎಚ್ಚರ ಆಗತ್ತೆ. ಮಹಾದಾಯಿ, ಕಳಸಾ ಬಂಡೂರಿ ವಿಚಾರದಲ್ಲಿ ಅವರ ಸಾಧನೆ ಏನು? ನಮ್ಮ ಸರ್ಕಾರದಲ್ಲೇ ಎಲ್ಲವನ್ನೂ ಮಾಡಿದ್ವಿ. ಅವರ ಅವಧಿಯಲ್ಲಿ ಒಂದಿಂಚೂ ಮೂವ್ ಆಗಿಲ್ಲ. ಅವರು ಈಗ ಮಹಾದಾಯಿ ಬಗ್ಗೆ ಸಮಾವೇಶ ಮಾಡ್ತಾರೆ ಅಂದ್ರೆ ಅದು ನಗೆಪಾಟಲು. ಅವರಿದ್ದಾಗ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡ್ಸಿದ್ರು. ಚುನಾವಣೆ ಬಂದಾಗ ಈ ರೀತಿ ಕಣ್ಣೀರು ಹಾಕೋದನ್ನ ನಿಲ್ಲಿಸಿ ಎಂದ ಜಗದೀಶ್ ಶೆಟ್ಟರ್ ಗರಂ ಆದ್ರು.

    ಕಾಂಗ್ರೆಸ್ ಎಲ್ಲದರಲ್ಲೂ ರಾಜಕೀಯ ಮಾಡುತ್ತೆ. ಕುಕ್ಕರ್ ಬಾಂಬ್ ನಲ್ಲೂ ಡಿಕೆಶಿ ರಾಜಕಾರಣ ಮಾಡಿದ್ರು. ಈಗ ಕೋವಿಡ್ ವಿಚಾರದಲ್ಲಿ ರಾಜಕೀಯ. ಚೀನಾದಲ್ಲಿ ಕೋವಿಡ್ ಬಂದಿದೆ. ನಿನ್ನೆ ಖುದ್ದು ಪ್ರಧಾನಿ ಮೀಟಿಂಗ್ ಮಾಡಿದ್ರು. ಇಡೀ ದೇಶಕ್ಕೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು‌ ಹೇಳಿದ್ದಾರೆ. ಟೀಕೆ ಮಾಡೋ‌ ಸಲುವಾಗಿ ಟೀಕೆ ಮಾಡೋದು ಸರಿಯಲ್ಲ ಎಂದರು.

  • 23 Dec 2022 11:08 AM (IST)

    Karnataka Winter Session 2022 Live: ವಿಧಾನಸಭೆ ಕಲಾಪ ಆರಂಭ

    ಕಲಾಪ ಆರಂಭವಾಗುತ್ತಿದ್ದಂತೆಯೇ ಸದನದಲ್ಲಿ ಸಚಿವರ ಗೈರಿಗೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ. ಸಚಿವರು ಯಾರೂ ಇಲ್ಲ, ನಾವು ಯಾಕೆ ಬರಬೇಕು, ನಾವೂ ಮನೆಗೆ ಹೋಗುತ್ತೇವೆ ಎಂದು ಜೆಡಿಎಸ್ ಉಪ ನಾಯಕ ಬಂಡೆಪ್ಪ ಕಾಶೆಂಪುರ್ ಆಕ್ಷೇಪ ವ್ಯಕ್ತಪಡಿಸಿದ್ರು.

  • 23 Dec 2022 11:06 AM (IST)

    Karnataka Winter Session 2022 Live: ಸಮುದಾಯದ ಬೇಡಿಕೆಯನ್ನ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳಿಸಿದ್ದೇವೆ

    ಜನಸಂಖ್ಯೆ ಆಧಾರದಲ್ಲಿ ಒಕ್ಕಲಿಗ ಸಮುದಾಯ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಮುದಾಯದ ನಾಯಕರು ಮನವಿ ಮಾಡಿದ್ದಾರೆ. ಬೇಡಿಕೆಯನ್ನ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳಿಸಿದ್ದೇವೆ. ಆಯೋಗದಿಂದ ವರದಿ ಬಂದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

  • 23 Dec 2022 11:02 AM (IST)

    Karnataka Winter Session 2022 Live: ಶೇ.4ರಿಂದ ಶೇ.12ಕ್ಕೆ ಒಕ್ಕಲಿಗರ ಮೀಸಲಾತಿ ಹೆಚ್ಚಳ ಮಾಡಬೇಕು

    ಒಕ್ಕಲಿಗ ಸಮುದಾಯ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹ ವಿಚಾರಕ್ಕೆ ಸಂಬಂಧಿಸಿ ಸುವರ್ಣಸೌಧದಲ್ಲಿ ಕಂದಾಯ ಇಲಾಖೆ ಸಚಿವ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಕೊಡಬೇಕು. ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಸಲ್ಲಿಸಲಾಗಿದೆ. ಶೇ.4ರಿಂದ ಶೇ.12ಕ್ಕೆ ಒಕ್ಕಲಿಗರ ಮೀಸಲಾತಿ ಹೆಚ್ಚಳ ಮಾಡಬೇಕು. ನ್ಯಾಯ ಒದಗಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದರು.

  • 23 Dec 2022 10:57 AM (IST)

    Karnataka Winter Session 2022 Live: “ನಾನು ಕಮೆಂಟ್ ಮಾಡಲ್ಲ ಅಣ್ಣ”

    ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಿಪಿ ಯೋಗೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯಲ್ಲಿ ಹಿರಿಯರು ಮೂಲೆಗುಂಪು ವಿಚಾರಕ್ಕೆ “ನಾನು ಕಮೆಂಟ್ ಮಾಡಲ್ಲ ಅಣ್ಣ” ಎಂದು ಜಾರಿಕೊಂಡಿದ್ದಾರೆ. ನಾನು ಯಾವತ್ತೂ ಮತ್ತೆ ಸಚಿವನಾಗುವ ಆಸೆ ವ್ಯಕ್ತಪಡಿಸಿಲ್ಲ. ಒಂದು ವರ್ಷದ ಹಿಂದೆ ಸಂಪುಟ ವಿಸ್ತರಣೆ ಆಗಿದ್ರೆ ಅರ್ಥವಿರೋದು. ಎಲ್ಲರೂ ಈಗ 2023ರ ವಿಧಾನಸಭೆ ಚುನಾವಣೆಗೆ ಸಿದ್ಧರಾಗುತ್ತಿದ್ದಾರೆ. ಸರ್ಕಾರ ಏನು ತೀರ್ಮಾನ ಮಾಡುತ್ತೋ ನೋಡೋಣ. ಈಗಾಗಲೇ ಕೆಲ ದಿನಗಳ ಕಾಲ ಸಚಿವನಾಗಿ‌ ಕೆಲಸ ಮಾಡಿದ್ದೇನೆ. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಅಷ್ಟೇ ಎಂದರು.

    ವಂಶ ಪಾರಂಪರಿಕ ರಾಜಕೀಯವನ್ನ ಯೋಗೇಶ್ವರ್ ಖಂಡಿಸಿದ್ದಾರೆ. ಈ ಹಿಂದೆ ರಾಜ ಮನೆತನವನ್ನ ನೋಡಿದ್ವಿ. ತಾತ, ಮಕ್ಕಳು, ಮೊಮ್ಮಕ್ಕಳು ಅಂತಾ. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಇದು ಮುಂದುವರೆದಿರೋದು ಅಣಕ. ಇದು ಬೇಸರದ ವಿಚಾರ. ಜನ ತೀರ್ಮಾನಿಸುತ್ತಾರೆ ಎಂದರು.

  • 23 Dec 2022 10:54 AM (IST)

    Karnataka Winter Session 2022 Live: ಸುವರ್ಣ ಸೌಧಕ್ಕೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ‌

    ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಸುವರ್ಣ ಸೌಧಕ್ಕೆ ಆಗಮಿಸಿದ್ದಾರೆ. ಸುವರ್ಣ ಸೌಧದ ಮುಂಭಾಗ ನಡೆದ ಓಬವ್ವ ಆತ್ಮರಕ್ಷಣಾ ಕಲೆ ಕರಾಟೆ ಪ್ರದರ್ಶನ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಿದ್ದರು. ಮುಂದಿನ ದಿನದಲ್ಲಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕರಾಟೆ ತರಬೇತಿ ನೀಡಬೇಕು. ತರಬೇತಿ ಪಡೆದವರು ಎಲ್ಲಾ ಮಹಿಳೆಯರಿಗೆ ಕಲಿಸಿ. ಹೆಣ್ಣು ಮಕ್ಕಳು ಸುರಕ್ಷಿತವಾಗಿರಲು ಇದು ಅತ್ಯಗತ್ಯ ಎಂದು ಕಾರ್ಯಕ್ರಮದಲ್ಲಿ ಹೇಳಿದ್ರು.

  • 23 Dec 2022 10:48 AM (IST)

    Karnataka Winter Session 2022 Live: ಇಂದು ವಿಧಾನಪರಿಷತ್​ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ

    ಇಂದು ವಿಧಾನಪರಿಷತ್​ ಉಪಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಪ್ರಾಣೇಶ್​ ಪರ ಮತ ಚಲಾಯಿಸುವಂತೆ ವಿಧಾನಪರಿಷತ್ ಬಿಜೆಪಿ ಸದಸ್ಯರಿಗೆ ಪರಿಷತ್​ನ ಸರ್ಕಾರಿ ಮುಖ್ಯಸಚೇತಕ ನಾರಾಯಣಸ್ವಾಮಿ ವಿಪ್ ಜಾರಿ ಮಾಡಿದ್ದಾರೆ.

Published On - 10:44 am, Fri, 23 December 22

Follow us on