ಬೆಳಗಾವಿ, ಜನವರಿ 14: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಚನ್ನರಾಜ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡ ಘಟನೆ ಸಂಭವಿಸಿದೆ. ಸಂಕ್ರಾಂತಿ ಹಬ್ಬದ ದಿನವಾದ ಇಂದು ಮಂಗಳವಾರ ಬೆಳಗಿನ ಜಾವ ಐದು ಗಂಟೆ ಆಸುಪಾಸಿನ ಸಮಯದಲ್ಲಿ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಮರಕ್ಕೆ ಕಾರು ಗುದ್ದಿ ಈ ಅಪಘಾತ ಸಂಭವಿಸಿದೆ.
ಈ ಅಪಘಾತದಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಆದರೆ, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಚಿವೆ ಹೆಬ್ಬಾಳ್ಕರ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.
ಇದನ್ನೂ ಓದಿ: ಅರಮನೆ ರಸ್ತೆ, ಬಳ್ಳಾರಿ ರಸ್ತೆಯಲ್ಲಿ ವಾಹನ ಸಂಚಾರ 2 ದಿನ ನಿಯಂತ್ರಣ, ಪರ್ಯಾಯ ಮಾರ್ಗ ಇಲ್ಲಿದೆ
ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಹೋದರ ಚನ್ನರಾಜ ಹಟ್ಟಿಹೊಳಿ ಅವರು ಬೆಂಗಳೂರಿನಿಂದ ಬೆಳಗಾವಿಗೆ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ದಾರಿಯಲ್ಲಿ ಕಾರಿಗೆ ನಾಯಿಯೊಂದು ಅಡ್ಡ ಬಂದಿದೆ. ಅದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನ ಮಾಡಿದಾಗ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅದೃಷ್ಟಕ್ಕೆ ಕಾರಿನೊಳಗಿದ್ದವರಿಗೆ ಯಾವ ಪ್ರಾಣಾಪಾಯವಾಗಿಲ್ಲ.
ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ದಾಖಲು ಮಾಡಿರುವ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಎಸ್ಪಿ ಭೀಮಾಶಂಕರ್ ಗುಳೇದ್ ಅವರು ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದಾರೆ. ಹೆಬ್ಬಾಳ್ಕರ್ ಅವರ ತಾಯಿ ಹಾಗೂ ಸಹೋದರಿ ಕೂಡ ಆಸ್ಪತ್ರೆಗೆ ದೌಡಾಯಿಸಿ ಬಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಹತ್ಯೆ
ಇದೇ ವೇಳೆ, ಕೇಂದ್ರ ಗೃಹಸಚಿವ ಡಾ. ಜಿ ಪರಮೇಶ್ವರ್ ಅವರೂ ಕೂಡ ದೂರವಾಣಿ ಮೂಲಕ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಅವರಿಗೆ ಜಿ. ಪರಮೇಶ್ವರ್ ಕರೆ ಮಾಡಿ ಮಾಹಿತಿ ಪಡೆದಿದ್ದು, ತಾಯಿಗೆ ಒಳ್ಳೆಯ ಚಿಕಿತ್ಸೆ ಕೊಡಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 9:14 am, Tue, 14 January 25