ಅವರದ್ದು ಒಂದೇ ಊರು, ಲಾಕ್ ಡೌನ್ (Lockdown) ಸಮಯದಲ್ಲಿ ಲವ್ (Love) ಆಗಿತ್ತು. ಇಬ್ಬರದ್ದೂ ಬೇರೆ ಬೇರೆ ಜಾತಿಯಾದ್ರೂ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಹೀಗಿದ್ದ ಜೋಡಿ ಕಳೆದ ವಾರ ಮದುವೆಯಾಗಿದ್ದು, ಇದೀಗ ಜೋಡಿಗೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಅಷ್ಟಕ್ಕೂ ಪ್ರೇಮಿಗಳು ಮದುವೆಯಾಗಿ ಠಾಣೆ ಮೆಟ್ಟಿಲೇರಿದ್ದು ಯಾಕೆ? ಈ ಕುರಿತು ಜೋಡಿ ಹೇಳುವುದೇನೂ ಅಂತೀರಾ? ಈ ಸ್ಟೋರಿ ನೋಡಿ… ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಜೋಡಿ, ಪೊಲೀಸರೇ ಇಬ್ಬರ ಹೇಳಿಕೆ ಪಡೆದುಕೊಂಡು ಆಟೋದಲ್ಲಿ ವಾಪಾಸ್ ಕಳುಹಿಸಿದ್ದು… ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆ ಮುಂಭಾಗದಲ್ಲಿ. ಹೌದು ಮದುವೆಯಾಗಿ ಬಂದು ಠಾಣೆಯ ಅಂಗಳದಲ್ಲಿ (Belagavi Police) ನಿಂತ ಜೋಡಿಯ ಹೆಸರು ಪ್ರಕಾಶ್ ಕಾಖಂಡಕಿ ಮತ್ತು ಸ್ವಪ್ನಾ ಲಮಾಣಿ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ನಿವಾಸಿಗಳು. ಜನವರಿ 18ರಂದು ಮನೆಯವರನ್ನ ವಿರೋಧ ಕಟ್ಟಿಕೊಂಡು ಓಡಿ ಬಂದು ರಿಜಿಸ್ಟ್ರಾರ್ ಆಫೀಸ್ ನಲ್ಲಿ ಮದುವೆಯಾಗಿದ್ದಾರೆ (Marriage). ಹೀಗೆ ಮದುವೆಯಾಗಿ ತಮ್ಮಷ್ಟಕ್ಕೆ ತಾವೇ ಬೆಳಗಾವಿಯಲ್ಲಿ ಮನೆ ಮಾಡಿಕೊಂಡು ಜೀವನ ಶುರು ಮಾಡಿದ್ದಾರೆ.
ಆದರೆ ಮಗಳು ಹೇಳದೇ ಕೇಳದ ಮನೆ ಬಿಟ್ಟು ಬಂದಿದ್ದಕ್ಕೆ ಆಕೆ ಬೆಳಗಾವಿಯಲ್ಲೇ ಕೆಲಸ ಮಾಡ್ತಿದ್ದ ಕಾರಣ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಯುವಕ ಸಿಕ್ಕು ಆತನಿಗೆ ಕುಟುಂಬಸ್ಥರು ಧಮಿಕಿ ಹಾಕಿದ್ರಂತೆ. ಇದರಿಂದ ರಕ್ಷಣೆ ಕೋರಿ ನವ ಜೋಡಿ ಬೆಳಗಾವಿ ಜಿಲ್ಲಾಧಿಕಾರಿ ಅವರ ಬಳಿ ಸೋಮವಾರ ಹೋಗಿದ್ದಾರೆ. ಆದ್ರೇ ಆಗಲೇ ಯುವತಿ ಮಿಸ್ಸಿಂಗ್ ಕೇಸ್ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಾರಣ ಎಸ್‌ಪಿ ಅವರು ಎಪಿಎಂಸಿ ಠಾಣೆಗೆ ಇಬ್ಬರನ್ನೂ ಕಳುಹಿಸಿಕೊಟ್ಟಿದ್ದಾರೆ.
ಈ ವೇಳೆ ಯುವತಿ ಮತ್ತು ಯುವಕನ ಹೇಳಿಕೆ ಪಡೆದುಕೊಂಡ ಪೊಲೀಸರು, ಯುವತಿಯ ತಂದೆ ತಾಯಿ ಹಾಗೂ ಯುವಕನ ಕುಟುಂಬಸ್ಥರನ್ನ ಕರೆಯಿಸಿದ್ದಾರೆ. ಈ ವೇಳೆ ಯುವತಿಯ ತಾಯಿ ಹಾಗೂ ತಂದೆ, ಮಗಳನ್ನ ಮನೆಗೆ ಬರುವಂತೆ ಕೇಳಿಕೊಂಡರು. ಆದ್ರೇ ಯುವತಿ ಬರಲ್ಲಾ ಅಂತಾ ಹೇಳಿದ್ದಾಳೆ. ಇನ್ನು ಯುವಕ, ತಮಗೆ ಜೀವ ಬೆದರಿಕೆ ಇದ್ದು ರಕ್ಷಣೆ ಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾನೆ. ಇತ್ತ ಯುವತಿ ಕೂಡ ಆತನ ಜತೆಗೆ ಹೋಗುತ್ತೇನೆ ಅಂತಾ ಹೇಳಿದ್ದರಿಂದ ಎರಡೂ ಮನೆಯ ಕುಟುಂಬಸ್ಥರು, ಮಕ್ಕಳು ತಮ್ಮ ಪಾಲಿಗೆ ಸತ್ತರು ಅಂತಾ ವಾಪಾಸ್ ಆಗಿದ್ದಾರೆ.
ಅಷ್ಟಕ್ಕೂ ಈ ಜೋಡಿಗೆ ಲವ್ ಆಗಿದ್ದು ಯಾವಾಗ ಅಂದ್ರೇ ಅದು 2020 ಲಾಕ್ ಡೌನ್ ಸಂದರ್ಭದಲ್ಲಿ. ಹೌದು ಗ್ಯಾರೇಜ್ ಕೆಲಸ ಮಾಡುತ್ತಿದ್ದ ಪ್ರಕಾಶ್, ಯುವತಿ ಸಂಜೆ ವೇಳೆ ತಮ್ಮ ಗ್ಯಾರೇಜ್ ಮುಂದೆ ಓಡಾಡುವುದನ್ನ ಗಮನಿಸಿದ್ದಾನೆ. ಇದಾದ ಬಳಿಕ ಆಕೆಯ ಹಿಂದೆ ಬಿದ್ದ ಪ್ರಕಾಶ್ ಆಕೆಯನ್ನು ತನ್ನ ಪ್ರೀತಿಯಲ್ಲಿ ಬೀಳಿಸಿದ್ದಾನೆ. ಈ ವಿಚಾರ ಕಳೆದ ವರ್ಷ ಯುವತಿಯ ಅಣ್ಣನಿಗೆ ಗೊತ್ತಾಗಿ, ಮನೆಯಲ್ಲಿ ಆತ ಹೇಳಿದ್ದಾನೆ.
ಆಗ ಸ್ವಪ್ನಾಗೆ ಮನೆಯಲ್ಲಿ ಹೊಡೆದುಬಡಿದು, ಬೇರೆ ಯುವಕನ ಜತೆಗೆ ಮದುವೆ ಮಾಡಲು ಮುಂದಾಗಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಪ್ರಕಾಶ್ ಕಳೆದ ವಾರ ಯುವತಿಯನ್ನ ಓಡಿಸಿಕೊಂಡು ಬಂದು ಮದುವೆಯಾಗಿದ್ದಾನೆ. ಇದೀಗ ಯುವತಿ ಮನೆಯವರು ಜೀವ ಬೆದರಿಕೆ ಹಾಕುತ್ತಿದ್ದು ತಮಗೆ ರಕ್ಷಣೆ ಕೊಡಿ, ಇಬ್ಬರಲ್ಲಿ ಯಾರಿಗೆ ಎನೇ ಆದ್ರೂ ಅದಕ್ಕೆ ಯುವತಿಯ ಮನೆಯವರೇ ಕಾರಣ. ಜಾತಿ ಬೇರೆ ಬೇರೆ ಆಗಿದ್ದರಿಂದ ತಮ್ಮ ಮದುವೆಗೆ ವಿರೋಧ ಮಾಡಿದ್ದಾರೆ. ಹೀಗಾಗಿ ಓಡಿ ಬಂದು ಮದುವೆಯಾಗಿದ್ದೇವೆ ಅಂತಾ ಹೇಳ್ತಿದ್ದಾರೆ.
ಒಟ್ಟಾರೆ ಲಾಕ್ ಡೌನ್ ಸಮಯದಲ್ಲಿ ಪ್ರೀತಿಯಾಗಿ ಇದೀಗ ಆ ಪ್ರೀತಿ ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದಾರೆ. ಇನ್ನು ಯುವಕನ ಮೇಲೆ ನಾಲ್ಕು ಕೇಸ್ ಗಳಿದ್ದು ಆತ ಸರಿಯಿಲ್ಲ ಎಂಬ ಆರೋಪವನ್ನು ಕುಟುಂಬಸ್ಥರು ಮಾಡುತ್ತಿದ್ದಾರೆ. ಯುವಕ ಇದನ್ನ ಅಲ್ಲಗಳೆದಿದ್ದಾನೆ.
ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ