ಬೆಳಗಾವಿ: ರಾಜ್ಯದ ಬೆಳಗಾವಿ, ಬಾಗಲಕೋಟ, ಧಾರವಾಡ, ಗದಗ ಜಿಲ್ಲೆಯ ಜೀವನಾಡಿಯಾದ ಮಲಪ್ರಭೆ (Malaprabha River) ಇದೀಗ ಖಾಲಿಯಾಗಿದ್ದಾಳೆ. ಹೌದು ಇದರಿಂದ ಬೈಲಹೊಂಗಲ, ಸವದತ್ತಿ, ಹುಬ್ಬಳ್ಳಿ, ಧಾರವಾಡಕ್ಕೆ ನೀರಿನ ಅಭಾವವಾಗುವ ಚಿಂತೆ ಎದುರಾಗಿದೆ. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ನವಿಲು ತೀರ್ಥ ಜಲಾಶಯ ಬಹುತೇಕ ಖಾಲಿಯಾಗಿದ್ದು, 37.7 ಟಿಎಂಸಿ ಸಾಮರ್ಥ್ಯದ ಜಲಾಶಯ ಸಂಪೂರ್ಣ ಖಾಲಿಯಾಗಿದ್ದು, 4 ಟಿಎಂಸಿ ನೀರು ಬಾಕಿ ಉಳಿದಿದೆ. ಇನ್ನೊಂದು ವಾರದಲ್ಲಿ ಮಳೆ ಆಗದಿದ್ರೆ, ಜಿಲ್ಲೆಯ ಜನರಿಗೆ ಕಂಟಕ ಕಾದಿದೆ. ಈಗಾಗಲೇ ಜೀವ ಜಲಕ್ಕೆ ಹಾಹಾಕಾರ ಶುರುವಾಗಿದ್ದು, ಕೃಪೆ ತೋರು ವರುಣ ಎಂದು ಬೇಡುವ ಸ್ಥಿತಿ ನಿರ್ಮಾಣವಾಗಿದೆ.
ಜೂನ್ 13ನೇ ತಾರೀಖು ಬಂದರೂ ಮುಂಗಾರು ಮಳೆಯ ಸುಳಿವೇ ಇಲ್ಲದಂತಾಗಿದೆ. ಮುಂಗಾರು ಮಳೆಯ ವಿಳಂಬ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಲಕಂಟಕ ಎದುರಾಗಿದೆ. ಹೌದು ಉತ್ತರ ಕರ್ನಾಟಕದಲ್ಲಿ ಬರಗಾಲ ಛಾಯೆ ಮೂಡಿದೆ. ಬೆಳಗಾವಿ ಜಿಲ್ಲೆಯ ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಹಿರಣ್ಯಕೇಶಿ, ವೇದಗಂಗಾ, ದೂಧ್ ಗಂಗಾ, ಮಾರ್ಕಂಡೇಯ ಹೀಗೆ ಏಳಕ್ಕೆ ಏಳು ನದಿಗಳು ಬತ್ತುವ ಆತಂಕ ಎದುರಾಗಿದೆ.
ಇದನ್ನೂ ಓದಿ:ರಕ್ಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ: ಬೆಳಗಾವಿ ನಗರಕ್ಕೆ ನೀರು ಪೂರೈಕೆ ವ್ಯತ್ಯಯ
ಈ ಮಧ್ಯೆ ಜೂ.13 ರಂದು ಬೆಳಗಾವಿಗೆ ಆಗಮಿಸಿದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಮುಂಗಾರು ಸಿದ್ಧತೆ ಪರಿಶೀಲನೆ ಸಭೆ ನಡೆಸಿದ್ದರು. ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ, ‘ಬೆಳಗಾವಿ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಮಳೆ ಕಡಿಮೆ ಆಗಿದೆ. ವಿಜಯಪುರ ಹಾವೇರಿ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಝೀರೋ ಪರ್ಸೆಂಟ್ ಇದೆ. ಜೂನ್ ಮೊದಲನೆಯ ವಾರವೇ ಮಳೆಯಾಗುವ ನಿರೀಕ್ಷೆ ಇತ್ತು. ಹವಾಮಾನ ವೈಪರೀತ್ಯದಿಂದ ಮಳೆ ಆಗಿಲ್ಲ. ಮಳೆ ಆಗದ ಹಿನ್ನೆಲೆಯಲ್ಲಿ ಬಿತ್ತನೆ ವಿಳಂಬ ಆಗಿದೆ. ಮಳೆ ಆದ ಬಳಿಕ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮಾಡುತ್ತೇವೆ. ಮಳೆ ಆಧಾರದ ಮೇಲೆ ಗೊಬ್ಬರ ಬಿತ್ತನೆ ಬೀಜಗಳು ಎಲ್ಲಾ ಜಿಲ್ಲೆಯಲ್ಲಿ ಸ್ಟಾಕ್ ಇದೆ. ಯಾವುದೇ ಜಿಲ್ಲೆಯಲ್ಲಿ ಕೊರತೆ ಇಲ್ಲ. ಬೆಳಗಾವಿ ಒಂದು ಬಿಟ್ಟರೆ ಎಲ್ಲಾ ಜಿಲ್ಲೆಗಳಲ್ಲಿ ಶೇಕಡ 30 ರಿಂದ 40ರಷ್ಟು ಮಳೆ ಕೊರತೆ ಇದೆ. ಬೆಳಗಾವಿಯಲ್ಲಿ ಮಾತ್ರ ಶೇಕಡ 20ರಷ್ಟು ಮಳೆ ಕೊರತೆ ಇದೆ. ಈಗಾಗಲೇ ಬೆಳಗಾವಿಯ ಕೆಲವು ಕಡೆ ಬಿತ್ತನೆ ಆಗುತ್ತಿದೆ. ವಾರದೊಳಗೆ ಮಳೆ ಬಂದ್ರೆ, ಸಂಪೂರ್ಣ ಬಿತ್ತನೆ ಬೀಜ ಕೊಡಲು ತಯಾರಿದ್ದೇವೆ ಎಂದಿದ್ದರು.
ಬೆಳಗಾವಿ ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿ ಹನಿ ನೀರಿಗಾಗಿ ಹಾಹಾಕಾರ ಎದುರಾಗಿದೆ. ಅದರಲ್ಲೂ ಬೆಳಗಾವಿ ತಾಲೂಕಿನ ಯಳ್ಳೂರು, ಶಹಾಪುರ, ವಡಗಾವಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭತ್ತವೇ ಪ್ರಮುಖ ಬೆಳೆ. ಬೆಳಗಾವಿ ತಾಲೂಕಿನ 2 ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಬಾಸುಮತಿ ಇಂದ್ರಾಣಿ ತಳಿಯ ಭತ್ತ ಬೆಳೆಯಲಾಗುತ್ತೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಮಳೆ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಸಾವಿರಾರು ರೈತರು ಮೇ ಆರಂಭದಲ್ಲಿ ಭತ್ತ ಬಿತ್ತನೆ ಮಾಡಿದ್ದರು. ಎಕರೆಗೆ ಹದಿನೈದರಿಂದ ಇಪ್ಪತ್ತು ಸಾವಿರ ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಭತ್ತ ಚಿಗುರೊಡೆದಿದ್ದು ಇನ್ನೆರಡು ದಿನಗಳಲ್ಲಿ ಮಳೆ ಬರದಿದ್ರೆ, ಒಣಗಿ ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ.
ಇದನ್ನೂ ಓದಿ:Mandya News: ಮಳೆಗಾಗಿ ಕೆಆರ್ಎಸ್ ಡ್ಯಾಂ ಮುಂಭಾಗ ವಿಶೇಷ ಪೂಜೆ: ಶಾಸಕ ರಮೇಶ್ ಬಂಡಿಸಿದ್ದೇಗೌಡ ಭಾಗಿ
ಒಂದು ವೇಳೆ ಮಳೆ ಬಾರದಿದ್ರೆ ಭತ್ತ ಬಿತ್ತನೆ ಮಾಡಿ ಮಳೆಯಾಗದೇ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಬರ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ‘ನಾನು ಬೆಂಗಳೂರು ತಲುಪುವ ವೇಳೆಗೆ ಮಳೆ ಬರುತ್ತೆ ಅಂತಾ ಅಂದುಕೊಂಡಿದ್ದೀನಿ ವಿಶ್ವಾಸ ಇಡೋಣ ಎಂದಿದ್ದಾರೆ. ಇನ್ನು ನಿರ್ದಿಷ್ಟ ಅವಧಿಯಲ್ಲಿ ಮಳೆಯಾಗದಿದ್ದರೆ ಕೃತಕ ಮಳೆ ಸೃಷ್ಟಿ(ಮೋಡ ಬಿತ್ತನೆ) ಮಾಡ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಚೆಲುವರಾಯಸ್ವಾಮಿ, ‘ಸರ್ಕಾರ ಮುಂದೆ ಯೋಚನೆ ಮಾಡಬೇಕಾಗುತ್ತೆ. ಜೂನ್ 15ರಂದು ಸಚಿವ ಸಂಪುಟ ಸಭೆ ಇದೆ. ಅಲ್ಲಿವರೆಗೂ ಮಳೆಯಾಗದಿದ್ದರೆ, ಮೋಡ ಬಿತ್ತನೆ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ಮಾಡ್ತೀವಿ’ ಎಂದಿದ್ದರು.
ಇನ್ನೆರಡು ದಿನಗಳಲ್ಲಿ ಮಳೆಯಾಗದಿದ್ದರೆ ಜನ ಜೀವನ ದುಸ್ತರವಾಗಲಿದೆ. ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ರಾಕಸಕೊಪ್ಪ, ಹಿಡಕಲ್ ಜಲಾಶಯ ಪಾತಾಳ ಮಟ್ಟ ತಲುಪಿದ್ದು, ಕುಡಿಯುವ ನೀರಿಗೆ ತೀವ್ರ ಅಭಾವ ಎದುರಾಗಲಿದೆ. ಇನ್ನು ಇಂದು ಕೂಡ ಮಳೆಯಾಗದಿದ್ದರೆ ಜೂನ್ 15ರಂದು ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಕೃಷಿ ಸಚಿವರು ಹೇಳಿದ್ದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ