ಬೆಳಗಾವಿ: ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಎರಡು ತಿಂಗಳು ಮಾತ್ರ ಇರುತ್ತದೆ. ಬಳಿಕ ಕಡಿಮೆಯಾಗಲಿದೆ ಎಂದು ಹೆಸ್ಕಾಂ (HESCOM) ಎಂಡಿ ಮೊಹಮ್ಮದ್ ರೋಷನ್ ಹೇಳಿದ್ದಾರೆ. ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಬೆಳಗಾವಿಯಲ್ಲಿ ಧರಣಿ ನಡೆಸುತ್ತಿರುವ ಕೈಗಾರಿಕೋದ್ಯಮಿಗಳ ಜೊತೆಗೆ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಬಿಲ್ ಪಾವತಿ ಬಗ್ಗೆ ಕೈಗಾರಿಕೋದ್ಯಮ ಮುಖಂಡರು ಚರ್ಚೆ ಮಾಡಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಹುಡುಕಿದ್ದು ಅದರಂತೆ ಬಿಲ್ ಪಾವತಿಗೆ ಅವಕಾಶ ನೀಡಲಾಗುವುದು. ಯಾವ ರೀತಿ ಪರಿಹಾರ ಕೊಡಬಹುದು ಎಂದು ಮತ್ತೆ ಸಭೆ ಮಾಡುತ್ತೇನೆ ಎಂದರು.
ಸಮಸ್ಯೆ ಪರಿಹಾರದ ಬಗ್ಗೆ ಮೇಲ್ಮಟ್ಟದಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ನಾಳೆ ಅಥವಾ ನಾಡಿದ್ದು ಸುದೀರ್ಘ ಚರ್ಚೆ ನಡೆಸಿ ನಮಗೆ ನಿರ್ದೇಶನ ನೀಡಬಹುದು ಎಂದು ಹೇಳಿದ ಹೆಸ್ಕಾಂ ಎಂಡಿ, ಎಫ್‌ಪಿಪಿಸಿಎ ಶುಲ್ಕ ಅಂತಾರಾಷ್ಟ್ರೀಯ ಟ್ರೆಂಡ್ಸ್ ಮೇಲೆ ಆಧಾರಿತವಾಗಿರುತ್ತದೆ. ಇಂಧನ ವೆಚ್ಚ ಹೊಂದಾಣಿಕೆ ಶುಲ್ಕ ಕಡಿಮೆ ಆಗುವ ಸಾಧ್ಯತೆ ಇದೆ. ಪರಿಹಾರ ಕಂಡುಕೊಳ್ಳಲು ಮೇಲ್ಮಟ್ಟದಲ್ಲಿ ಗಂಭೀರ ಚರ್ಚೆಗಳು ಆಗುತ್ತಿವೆ. ಅವರು ಕೊಟ್ಟ ಪರಿಹಾರದಂತೆ ಜಾರಿ ಮಾಡಲು ಸಿದ್ಧರಿದ್ದೇವೆ. ಎಲ್ಲರೂ ಬಿಲ್ ಕಟ್ಟಿ, ನಾವು ವಿದ್ಯುತ್ ಉತ್ಪಾದಕರಿಗೆ ಹಣ ನೀಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ನಾವು ನಷ್ಟ ಮಾಡಿ ನಿಮ್ಮನ್ನು ಲಾಭದಲ್ಲಿ ಇಡಬೇಕಾ: ಬಿಲ್ ಕಟ್ಟಿ ಎಂದ ಹೆಸ್ಕಾಂ ಎಂಡಿಗೆ ಕೈಗಾರಿಕೋದ್ಯಮಿಗಳ ಪ್ರಶ್ನೆ
ವಿದ್ಯುತ್ ಬಿಲ್ ಆನ್‌ಲೈನ್ ಪೇಮೆಂಟ್ ಸಮಸ್ಯೆ ವಿಚಾರವಾಗಿ ಮಾತನಾಡಿದ ಅವರು, ಸಾಫ್ಟ್‌ವೇರ್ ಬದಲಾವಣೆ ಹಿನ್ನೆಲೆ ಆನ್‌ಲೈನ್ ಪೇಮೆಂಟ್ ಆಗುತ್ತಿಲ್ಲ. ಹೆಸ್ಕಾಂ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೇಲೆ ಕ್ಲಿಕ್ ಮಾಡಿ ಕಟ್ಟಬಹುದು. ಕೆಇಆರ್‌ಸಿ ಆದೇಶ ನೀಡಿದ ದಿನದಿಂದ ಪರಿಷ್ಕೃತ ದರ ಅನ್ವಯವಾಗಿದೆ ಎಂದರು.
ಮಹಾರಾಷ್ಟ್ರದಲ್ಲಿ ದರ ಕಡಿಮೆ ಎಂದು ಕೈಗಾರಿಕೋದ್ಯಮಿಗಳ ಹೇಳಿಕೆ ವಿಚಾರವಾಗಿ ಮಾತನಾಡಿದ ಮೊಹಮ್ಮದ್ ರೋಷನ್, ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಕಡಿಮೆಯಿದೆ. ಫಿಕ್ಸಡ್ ಚಾರ್ಜಸ್, ಎನರ್ಜಿ ಚಾರ್ಜಸ್ ಕರ್ನಾಟಕದಲ್ಲಿ ಕಡಿಮೆ ಇದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:51 pm, Tue, 13 June 23