AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್‌ ದರ ಏರಿಕೆ: ರಾಜ್ಯ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ, ಮಹಾರಾಷ್ಟ್ರದತ್ತ ಹೋಗುವ ಎಚ್ಚರಿಕೆ ನೀಡಿದ ಕೈಗಾರಿಕೆಗಳು

ಬೆಳಗಾವಿ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಣ್ಣ ಕೈಗಾರಿಕೆಗಳ ಸಂಘ ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಿವೆ. ಸರ್ಕಾರ ಸ್ಪಂದಿಸದಿದ್ರೇ ಮಹಾರಾಷ್ಟ್ರದತ್ತ ಮುಖ ಮಾಡುವುದಾಗಿ ಸರ್ಕಾರಕ್ಕೆ ಕೈಗಾರಿಕೆಗಳು ಎಚ್ಚರಿಕೆ ನೀಡಿವೆ.

ವಿದ್ಯುತ್‌ ದರ ಏರಿಕೆ: ರಾಜ್ಯ ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ, ಮಹಾರಾಷ್ಟ್ರದತ್ತ ಹೋಗುವ ಎಚ್ಚರಿಕೆ ನೀಡಿದ ಕೈಗಾರಿಕೆಗಳು
ಸಾಂದರ್ಭಿಕ ಚಿತ್ರ
ಆಯೇಷಾ ಬಾನು
|

Updated on:Jun 13, 2023 | 1:56 PM

Share

ಬೆಳಗಾವಿ: ಒಂದು ಕಡೆ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ಫ್ರೀ ಬಸ್ ಸೇವೆ ಪಡೆದು ಸಂತಸದಲ್ಲಿ ತೇಲಾಡುತ್ತಿದ್ದರೆ ಮತ್ತೊಂದೆಡೆ ವಿದ್ಯುತ್ ದರ ಹೆಚ್ಚಳ ಹಿನ್ನೆಲೆ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ವಿದ್ಯುತ್‌ ದರ ದಿಢೀರ್‌ ಏರಿಕೆಗೆ ಜನಸಾಮಾನ್ಯರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ವಿದ್ಯುತ್‌ ದರ ಹೆಚ್ಚಳ ಖಂಡಿಸಿ ಬೆಳಗಾವಿಯಲ್ಲಿ ಕೈಗಾರಿಕೋದ್ಯಮಿಗಳು ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಗೃಹಜ್ಯೋತಿ ಗ್ಯಾರಂಟಿ ಘೋಷಣೆ ಮಾಡಿದೆ. ಜನಸಾಮಾನ್ಯರಿಗೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದೆ. ಮತ್ತೊಂದೆಡೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಶಿಫಾರಸು ಮೇರೆಗೆ ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ದರ ಏರಿಸಿವೆ. ಇದರಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ನಡೆಸುವ ಕೈಗಾರಿಕೋದ್ಯಮಿಗಳು, ಸಣ್ಣ ಪುಟ್ಟ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಬೆಳಗಾವಿ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಹಾಗೂ ಸಣ್ಣ ಕೈಗಾರಿಕೆಗಳ ಸಂಘ ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಿವೆ.

ಇದನ್ನೂ ಓದಿ: ನಮ್ಮ ಸರ್ಕಾರ ವಿದ್ಯುತ್​ ದರ ಏರಿಕೆ ಮಾಡಿಲ್ಲ; ಇಂಧನ ಸಚಿವರ ಆರೋಪಕ್ಕೆ ಮಾಜಿ ಸಿಎಂ ಬೊಮ್ಮಾಯಿ ತಿರುಗೇಟು ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿವೆ. ಮೊದಲಿನ ಬಿಲ್‌ಗಿಂತ ಮೂರು ಪಟ್ಟು ಬಿಲ್ ಬಂದಿದೆ. ಕೂಡಲೇ ದರವನ್ನ ಸರ್ಕಾರ ಕಡಮೆ ಮಾಡಬೇಕು. ಫ್ರೀ ಕರೆಂಟ್ ಕೊಟ್ಟು ಅದರ ಹೊರೆಯನ್ನ ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಕೈಗಾರಿಕೋದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿವೆ. ಮಹಾರಾಷ್ಟ್ರ ಸರ್ಕಾರ ಎಲ್ಲಾ ಸೌಕರ್ಯ ಕೊಡುತ್ತೇವೆ ಬನ್ನಿ ಅಂತಾ ಆಹ್ವಾ ನೀಡ್ತಿದೆ. ಸರ್ಕಾರ ಸ್ಪಂದಿಸದಿದ್ರೇ ಮಹಾರಾಷ್ಟ್ರದತ್ತ ಮುಖ ಮಾಡುವುದಾಗಿ ಸರ್ಕಾರಕ್ಕೆ ಕೈಗಾರಿಕೆಗಳು ಎಚ್ಚರಿಕೆ ನೀಡಿವೆ. ಇನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದವು.

ಮಹಾರಾಷ್ಟ್ರಕ್ಕೆ ಹೋಗಲು ಹತ್ತು ವರ್ಷ ಬೇಕು

ಇನ್ನು ಮಹಾರಾಷ್ಟ್ರಕ್ಕೆ ವಲಸೆ ಹೋಗಲು ಬೆಳಗಾವಿ ಕೈಗಾರಿಕೋದ್ಯಮಿಗಳ ಚಿಂತನೆ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ದಿವಸದಲ್ಲಿ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಹೋಗಲು ಆಗಲ್ಲ. ಮಹಾರಾಷ್ಟ್ರಕ್ಕೆ ಹೋಗಲು ಹತ್ತು ವರ್ಷ ಬೇಕು. ತಕ್ಷಣ ಹೋಗೋಕೇ ಅದೇನು ಡಬ್ಬಾ ಅಂಗಡಿಯಾ ಚಹಾ ಅಂಗಡಿಯಾ?ಒಂದು ಕೈಗಾರಿಕೆ ಆಗಲು ಹತ್ತು ವರ್ಷ ಬೇಕಾಗುತ್ತದೆ. ಅದಕ್ಕೆ ಎಷ್ಟು ಶ್ರಮ, ಎಷ್ಟು ದುಡ್ಡು ಆಗುತ್ತೆ, ಹಾಗೇ ಹೋಗಲು ಆಗಲ್ಲ. ನೋಡೋಣ ವಿದ್ಯುತ್ ದರ ಏರಿಕೆ ಬಗ್ಗೆ ನಮಗೂ ಕನ್ಫ್ಯೂಸ್ ಇದೆ. ಮೂರು ಪಟ್ಟು ವಿದ್ಯುತ್ ಬಿಲ್ ಹೆಚ್ಚಾಗಿದೆ. ಏಕೆ ಹೆಚ್ಚಾಗಿದೆ ಎಂದು ಸಂಜೆಯವರೆಗೆ ತಿಳಿದುಕೊಂಡು ಹೇಳುತ್ತೇವೆ. ಅಷ್ಟು ಆಗಬಾರದು ಶೇಕಡ ಹತ್ತರಷ್ಟು ಏರಿಕೆ ಮಾತ್ರ ಮಾಡಿದ್ದಾರೆ. ಕೆಇಆರ್‌ಸಿ ಅವರು ಹತ್ತು ಪರ್ಸೆಂಟ್ ಮಾತ್ರ ಹೆಚ್ಚು ಮಾಡಿದ್ದಾರೆ. ಇಷ್ಟೇಕೆ ಹೆಚ್ಚಾಗಿದೆ ಎಂದು ನಮಗೂ ಕನ್ಫ್ಯೂಸ್ ಇದೆ ಎಂದರು.

ಯಾದಗಿರಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ

ಇನ್ನು ಯಾದಗಿರಿ ಜಿಲ್ಲೆಯ ಜನರಿಗೆ ವಿದ್ಯುತ್ ಬಿಲ್ ಏರಿಕೆ ಆಘಾತ ತಂದಿದೆ. ಪ್ರತಿ ತಿಂಗಳಿಗಿಂತ ದುಪ್ಪಟ್ಟು ಬಿಲ್ ಬಂದಿದ್ದಕ್ಕೆ ಯಾದಗಿರಿ ನಗರದ ಶಹಾಪುರಪೇಟೆ​ಯಲ್ಲಿ ಜನ ಆಕ್ರೋಶಗೊಂಡಿದ್ದಾರೆ. ಪ್ರತಿ ತಿಂಗಳು 800 ರೂ. ಬರ್ತಾಯಿದ್ದ ಬಿಲ್ ಈ ತಿಂಗಳು ಏಕಾಏಕಿ 2400 ಬಂದಿದೆ. ಮೂರು ಪಟ್ಟು ಬಿಲ್ ಜಾಸ್ತಿ ಬಂದಿದ್ದಕ್ಕೆ ಜನ ಗರಂ ಆಗಿದ್ದಾರೆ. ಸರ್ಕಾರ ವಿದ್ಯುತ್ ಫ್ರೀ ಅಂತ ಹೇಳಿ ನಮಗೆ ಬರೆ ಇಟ್ಟಿದೆ. ನಮಗೆ ಯಾವುದು ಫ್ರೀ ಬೇಡ, ಬಟ್ ಕರೆಂಟ್ ಬಿಲ್ ಕಮ್ಮಿ ಬರಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಯಾವ ಕಾರಣಕ್ಕೆ ಕರೆಂಟ್ ಬಿಲ್ ಜಾಸ್ತಿ ಬಂದಿದೆ ಅಂತ ಹೇಳಬೇಕು. ಪ್ರತಿ ಯೂನಿಟ್‌ಗೆ 7 ರೂ. ಆದ್ರು ಇಷ್ಟು ಬರಲ್ಲ. ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಮಾಹಿತಿ ಕೊಡ್ತಾಯಿಲ್ಲ. ನಾವು ಯಾವುದೇ ಕಾರಣಕ್ಕೂ ಬಿಲ್ ಕಟ್ಟಲ್ಲ ಎಂದು ಗುಡುಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 1:45 pm, Tue, 13 June 23