ಮುಂಗಾರು ವಿಳಂಬದಿಂದ ಹಲವು ಜಿಲ್ಲೆಗಳಲ್ಲಿ ಸಂಕಷ್ಟ: ಮೋಡ ಬಿತ್ತನೆಗೆ ಕಾದು ನೋಡುವ ತಂತ್ರ
ಮುಂಗಾರು ವಿಳಂಬದಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಸಂಕಷ್ಟ ಎದುರಾಗಿದೆ. ಜೂನ್ 15ರ ವರೆಗೆ ಕಾದುನೋಡುವ ದಾರಿಯನ್ನು ಸರ್ಕಾರ ಹಿಡಿದಿದೆ. ಎರಡು ದಿನಗಳಲ್ಲಿ ಮಳೆ ಬಾರದಿದ್ದಲ್ಲಿ ಮೋಡ ಬಿತ್ತನೆ ಬಗ್ಗೆ ನಿರ್ಧರಿಸಲಿದ್ದಾರೆ.
ಬೆಳಗಾವಿ: ಮುಂಗಾರು (Monsoon Rain) ವಿಳಂಬದಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಸಂಕಷ್ಟ ಎದುರಾಗಿದ್ದು, ಮೋಡ ಬಿತ್ತನೆಗೆ (Cloud seeding) ಜೂನ್ 15ರ ವರೆಗೆ ಕಾದುನೋಡುವ ನಿರ್ಧಾರಕ್ಕೆ ಸರ್ಕಾರ ಬಂದಿದೆ. ಈ ಬಗ್ಗೆ ಬೆಳಗಾವಿಯಲ್ಲಿ (Belagavi) ಮಾತನಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Chaluvarayaswamy), ಜೂನ್ 15ರಂದು ಸಚಿವ ಸಂಪುಟ ಸಭೆ ಇದೆ. ಅಲ್ಲಿವರೆಗೂ ಮಳೆಯಾಗದಿದ್ದರೆ ಸಂಪುಟದಲ್ಲಿ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಮಳೆಯಾಗದ ಹಿನ್ನೆಲೆ ಬೆಳಗಾವಿ ತಾಲೂಕಿನಲ್ಲಿ ಭತ್ತ ಬಿತ್ತನೆ ಮಾಡಿದ ರೈತರಿಗೆ ಸಂಕಷ್ಟ ಎದುರಾಗಿದೆ. ಒಂದು ವೇಳೆ ಮಳೆಯಾಗದಿದ್ದರೆ ಅವರ ಸಹಾಯಕ್ಕೆ ಸರ್ಕಾರ ಬರುತ್ತದೆಯೇ ಎಂದು ಸುದ್ದಿಗಾರರು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವರು, ನೋಡೋಣ ನಾನು ಬೆಂಗಳೂರು ತಲುಪುವುದರೊಳಗೆ ಮಳೆ ಬರುತ್ತದೆ ಅಂತ ಅಂದುಕೊಂಡಿದ್ದೇನೆ, ವಿಶ್ವಾಸ ಇಡೋಣ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಕೈ ಕೊಟ್ಟ ಮುಂಗಾರು; ಆಕಾಶದತ್ತ ರೈತರ ಚಿತ್ತ, ಉತ್ತಮ ಮಳೆಯಾಗದಿದ್ದರೆ ಕೃಷಿ ಚಟುವಟಿಕೆ ಕಷ್ಟ
ಎಫ್ಆರ್ಪಿ ದರ ಕೇಂದ್ರದಿಂದಲೇ ಜಾರಿ ಆಗುತ್ತಿದೆ. ನಾವೇನೆನೋ ಚಿಂತನೆ ಮಾಡುತ್ತೇವೆ, ಇದಕ್ಕೆ ಸ್ವಲ್ಪ ಸಮಯ ಕೊಡಬೇಕು. ಕಾಲಾವಕಾಶ ತಗೆದುಕೊಂಡು ಎಲ್ಲವನ್ನೂ ಸರಿ ಮಾಡುತ್ತೇವೆ ಎಂದರು. ಎಪಿಎಂಸಿ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರೈತವಿರೋಧಿ ಮೂರು ಕಾಯ್ದೆಗಳ ಕುರಿತು ಚರ್ಚಿಸಿ ಪರಿಶೀಲನೆ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ನಿಗದಿತ ಸಮಯಕ್ಕಿಂತ ಬೇಗ ಕಬ್ಬು ಕಟಾವು ಮಾಡಲು ಮುಂದಾಗಿದ್ದಾರೆ. ಮಹಾರಾಷ್ಟ್ರ ಮಾದರಿಯಲ್ಲಿ ಇಲ್ಲೂ ಸಹ ಕಮೀಟಿ ಮಾಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಬ್ಬು ಕಟಾವಿಗೆ ಸಂಬಂಧಿಸಿದಂತೆ ಸಕ್ಕರೆ ಸಚಿವರ ನೇತೃತ್ವದಲ್ಲಿ ಕಮೀಟಿ ಇದೆ. ರೈತರು ಸ್ವಯಂಪ್ರೇರಿತವಾಗಿ ಕಬ್ಬು ಕಟಾವಿಗೆ ಬೇಗ ಹೋಗುತ್ತಾರೆ. ಕಾರ್ಖಾನೆಯವರು ಸಫಿಷಿಯಂಟ್ ಕಬ್ಬು ಸಿಗದಿದ್ದಾಗ ಈ ರೀತಿ ಅನ್ಯಾಯ ಆಗುತ್ತದೆ, ಅದರ ಬಗ್ಗೆ ವಿಚಾರಣೆ ಮಾಡುತ್ತೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ