Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾವು ನಷ್ಟ ಮಾಡಿ ನಿಮ್ಮನ್ನು ಲಾಭದಲ್ಲಿ ಇಡಬೇಕಾ: ಬಿಲ್ ಕಟ್ಟಿ ಎಂದ ಹೆಸ್ಕಾಂ ಎಂಡಿಗೆ ಕೈಗಾರಿಕೋದ್ಯಮಿಗಳ ಪ್ರಶ್ನೆ

ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಕೈಗಾರಿಕೋದ್ಯಮಿಗಳ ಜೊತೆ ಹೆಸ್ಕಾಂ ಎಂಡಿ ಸಭೆ ನಡೆಸಿ ಮನವೋಲಿಸುವ ಯತ್ನ ನಡೆಸಿದ್ದಾರೆ.

ನಾವು ನಷ್ಟ ಮಾಡಿ ನಿಮ್ಮನ್ನು ಲಾಭದಲ್ಲಿ ಇಡಬೇಕಾ: ಬಿಲ್ ಕಟ್ಟಿ ಎಂದ ಹೆಸ್ಕಾಂ ಎಂಡಿಗೆ ಕೈಗಾರಿಕೋದ್ಯಮಿಗಳ ಪ್ರಶ್ನೆ
ವಿದ್ಯುತ್ ದರ ಹೆಚ್ಚಳ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದ ಹೆಸ್ಕಾಂ ಎಂಡಿ
Follow us
Rakesh Nayak Manchi
|

Updated on: Jun 13, 2023 | 7:19 PM

ಬೆಳಗಾವಿ: ವಿದ್ಯುತ್ ದರ ಹೆಚ್ಚಳ (Electricity Tariff Hike) ವಿರೋಧಿಸಿ ಬೆಳಗಾವಿಯಲ್ಲಿ (Belagavi) ಪ್ರತಿಭಟನೆ ನಡೆಸುತ್ತಿರುವ ಕೈಗಾರಿಕೋದ್ಯಮಿಗಳ ಜೊತೆ ಹೆಸ್ಕಾಂ (HESCOM) ಎಂಡಿ ಮೊಹಮ್ಮದ್ ರೋಶನ್ ಸಭೆ ನಡೆಸಿ ಮನವೋಲಿಸುವ ಯತ್ನ ನಡೆಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಈ ದರ ಕಡಿಮೆಯಾಗುತ್ತದೆ, ಸದ್ಯ ಬಿಲ್ ಕಟ್ಟಿ ಸಹಕರಿಸಿ ನಾವು ಸಹ ವಿದ್ಯುತ್ ಖರೀದಿಸಬೇಕಾಗುತ್ತದೆ ಎಂದು ಹೆಸ್ಕಾಂ ಎಂಡಿ  ಹೇಳಿದ್ದಾರೆ. ನಾವು ನಷ್ಟ ಮಾಡಿ ನಿಮ್ಮನ್ನು ಲಾಭದಲ್ಲಿ ಇಡಬೇಕಾ ಅಂತಾ ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜವಳಿ ಪ್ರಶ್ನಿಸಿದ್ದಾರೆ.

ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಬೆಳಗಾವಿ ಕೈಗಾರಿಕೋದ್ಯಮಿಗಳು ಪ್ರತಿಭಟನೆ ನಡೆಸುತ್ತಿರವ ಹಿನ್ನೆಲೆ ಇಂದು ಬೆಳಗಾವಿಗೆ ಭೇಟಿ ನೀಡಿದ ಹೆಸ್ಕಾಂ ಎಂಡಿ ಮೊಹಮ್ಮದ್ ರೋಶನ್ ಅವರು ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಸಭಾಂಗಣದಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದರು. ಈ ವೇಳೆ ವಿದ್ಯುತ್ ದರ ಏರಿಕೆ ಬಗ್ಗೆ ಮಾಹಿತಿ ನೀಡಿದ ಹೆಸ್ಕಾಂ ಎಂಡಿ, ಕೈಗಾರಿಕೋದ್ಯಮಿಗಳಿಗೆ ಇರುವ ಗೊಂದಲದ ಬಗ್ಗೆ ಮನವರಿಕೆಗೆ ಯತ್ನಿಸಿದರು.

ಇಷ್ಟೊಂದು ಬಿಲ್ ಕಟ್ಟಲು ಆಗಲ್ಲ ಎಂದ ಕೈಗಾರಿಕೋದ್ಯಮಿಗಳಿಗೆ, ವಿದ್ಯುತ್ ಬಿಲ್‌ನಲ್ಲಿ ಫ್ಯೂಯಲ್ ಕಾಸ್ಟ್ ಅಡ್ಜಸ್ಟ್‌ಮೆಂಟ್ ಹೆಚ್ಚಳ ಬಗ್ಗೆ ಎಂಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಇನ್ನೆರಡು ತಿಂಗಳಲ್ಲಿ ಈ ದರ ಕಡಿಮೆಯಾಗುತ್ತದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೋಲಿಸಿದರೆ ಕರ್ನಾಟಕದಲ್ಲಿ ವಿದ್ಯುತ್ ದರ ಕಡಿಮೆ ಇದೆ. ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ವಿದ್ಯುತ್ ದರ ಇದೆ. ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಫಿಕ್ಸಡ್ ಚಾರ್ಜ್ ಹೆಚ್ಚಿದೆ ಎಂದಿದ್ದಾರೆ.

ಇದನ್ನೂ ಓದಿ: ಆದಾಯ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸರ್ಕಾರ: ವಿದ್ಯುತ್‌, ಮದ್ಯ ಆಯ್ತು ಈಗ ಮತ್ತೊಂದು ದುಬಾರಿ?

ಹೆಸ್ಕಾಂ ಗ್ರಾಹಕನಿದ್ದಂತೆ, ವಿದ್ಯುತ್ ಉತ್ಪಾದಕರಿಗೆ ನಾವು ಹಣ ನೀಡಬೇಕಾಗುತ್ತದೆ. ಹೆಸ್ಕಾಂ ಸಹ ವಿದ್ಯುತ್ ಖರೀದಿಗಾಗಿ 2 ಸಾವಿರ ಕೋಟಿ ಕೊಡಬೇಕು. ಹೀಗಾಗಿ ಬಿಲ್ ಕಟ್ಟಿ ಸಹಕರಿಸಿ, ನಾವು ಸಹ ವಿದ್ಯುತ್ ಖರೀದಿಸಬೇಕಾಗುತ್ತದೆ ಎಂದು ಹೆಸ್ಕಾಂ ಎಂಡಿ ಮನವಿ ಮಾಡಿದ್ದಾರೆ. ಇದಕ್ಕೆ ಖಡಕ್ ಆಗಿ ಪ್ರಶ್ನಿಸಿದ ರೋಹನ್ ಜವಳಿ, ನಾವು ನಷ್ಟ ಮಾಡಿ ನಿಮ್ಮನ್ನು ಲಾಭದಲ್ಲಿ ಇಡಬೇಕಾ? 40 ರಿಂದ 60 ಪರ್ಸೆಂಟ್ ದರ ಹೆಚ್ಚಾದರೆ ಹಣ ಹೇಗೆ ಹೊಂದಿಸುವುದು ಎಂದು ಹೇಳಿದ್ದಾರೆ.

ಸಣ್ಣ ಕೈಗಾರಿಕೋದ್ಯಮಿಗಳಿಗೆ ಇಷ್ಟೊಂದು ಪ್ರಮಾಣದಲ್ಲಿ ವಿದ್ಯುತ್ ಬಿಲ್ ಕಟ್ಟಲು ತುಂಬಾ ಕಷ್ಟವಾಗುತ್ತಿದೆ. ನಾವು ನಿಮ್ಮ ಜೊತೆ ಇರುತ್ತೇವೆ, ಆದರೆ ಇಷ್ಟೊಂದು ದರ ಹೆಚ್ಚಳ ಮಾಡಿದರೆ ಕಟ್ಟಲು ಆಗಲ್ಲ. ನೀವು ಕನೆಕ್ಷನ್ ಕಟ್ ಮಾಡಿ, ನಮ್ಮ ಹಾಗೂ ಕಾರ್ಮಿಕರ ವೇತನ ನೀವೇ ಕೊಡಿ ಎಂದು ರೋಹನ್ ಜವಳಿ ಅವರು ಎಂಡಿ ಎದುರೇ ಅಸಮಾಧಾನ ಹೊರಹಾಕಿದ್ದಾರೆ.

ಕೈಗಾರಿಕೋದ್ಯಮಿಗಳನ್ನು ಸಮಾಧಾನಪಡಿಸಲು ಮುಂದಾದ ಹೆಸ್ಕಾಂ ಎಂಡಿ, ಎರಡು ತಿಂಗಳ ಬಳಿಕ ಎಫ್‌ಪಿಪಿಸಿಎ ಶುಲ್ಕ ಕಡಿಮೆ ಆಗುತ್ತದೆ. ನಾನು ನಿಮ್ಮ ಜೊತೆ ಪ್ರತ್ಯೇಕವಾಗಿ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು. ಅಲ್ಲದೆ, ಸರ್ಕಾರ 200 ಯೂನಿಟ್ ಫ್ರೀ ಮಾಡಿದ್ದು ಅದರ ಹೊರೆ ನಮ್ಮ ಮೇಲೆ ಬೀಳುತ್ತಾ ಎಂಬ ಕೈಗಾರಿಕೋದ್ಯಮಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಬ್ಸಿಡಿ ಮೂಲಕ ಎಸ್ಕಾಂಗಳಿಗೆ ಸರ್ಕಾರ ಹಣ ಪಾವತಿ ಮಾಡುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ವಿದ್ಯುತ್ ದರ ಏರಿಕೆಯನ್ನು ಮರುಪರಿಶೀಲಿಸುವಂತೆ ಸಿಎಂಗೆ ತನ್ವೀರ್ ಸೇಠ್ ಪತ್ರ

ಸಾರ್ವಜನಿಕರಿಗೆ ಉಚಿತ, ಉದ್ಯಮಿಗಳ ಪರದಾಟ

ಒಂದು ಕಡೆ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡಲಾಗಿದ್ದು, ಆಟೋ, ಕ್ಯಾಬ್ ಹಾಗೂ ಖಾಸಗಿ ಬಸ್​ ಮಾಲೀಕರಿಗೆ ಭಾರೀ ನಷ್ಟ ಎದುರಾಗಿದೆ. ಕೂಡಲೇ ಶಕ್ತಿ ಯೋಜನೆ ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ. ಇನ್ನೊಂದೆಡೆ, ಗ್ರಾಹಕರಿಗೆ ಷರತ್ತಿನ ಮೇಲೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಜುಲೈ ತಿಂಗಳಲ್ಲಿ ಆರಂಭವಾಗಲಿದೆ. ಇದಕ್ಕೂ ಮುನ್ನ ವಿದ್ಯುತ್ ದರದಲ್ಲಿ ಭಾರೀ ಹೆಚ್ಚಳ ಮಾಡಿರುವುದು ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳಿಗೆ ಹೊಡೆತ ಬಿದ್ದಿದೆ. ಸಣ್ಣ ಪುಟ್ಟ ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿದ್ಯುತ್ ದರ ಹೆಚ್ಚಳ ಖಂಡಿಸಿ ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಮೊದಲಿನ ಬಿಲ್‌ಗಿಂತ ಮೂರು ಪಟ್ಟು ಬಿಲ್ ಬಂದಿದೆ. ಕೂಡಲೇ ದರವನ್ನ ಸರ್ಕಾರ ಕಡಮೆ ಮಾಡಬೇಕು. ಫ್ರೀ ಕರೆಂಟ್ ಕೊಟ್ಟು ಅದರ ಹೊರೆಯನ್ನ ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಬೆಳಗಾವಿಯಲ್ಲಿ ಕೈಗಾರಿಕೋದ್ಯಮಿಗಳು ಆಕ್ರೋಶ ಹೊರಹಾಕಿವೆ. ಅಲ್ಲದೆ, ಮಹಾರಾಷ್ಟ್ರ ಸರ್ಕಾರ ಎಲ್ಲಾ ಸೌಕರ್ಯ ಕೊಡುತ್ತೇವೆ ಬನ್ನಿ ಅಂತಾ ಆಹ್ವಾನ ನೀಡುತ್ತಿವೆ. ಸರ್ಕಾರ ಸ್ಪಂದಿಸದಿದ್ದರೆ ಮಹಾರಾಷ್ಟ್ರದತ್ತ ಮುಖ ಮಾಡುವುದಾಗಿ ಎಚ್ಚರಿಕೆ ನೀಡಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ