ವಿದ್ಯುತ್ ದರ ಏರಿಕೆಯನ್ನು ಮರುಪರಿಶೀಲಿಸುವಂತೆ ಸಿಎಂಗೆ ತನ್ವೀರ್ ಸೇಠ್ ಪತ್ರ

ವಿದ್ಯುತ್ ದರ ಏರಿಕೆಯನ್ನು ಮರು ಪರಿಶೀಲನೆ ಮಾಡುವಂತೆ ಕಾಂಗ್ರೆಸ್​ ಹಿರಿಯ ಶಾಸಕ ತನ್ವೀರ್ ಸೇಠ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ವಿದ್ಯುತ್ ದರ ಏರಿಕೆಯನ್ನು ಮರುಪರಿಶೀಲಿಸುವಂತೆ ಸಿಎಂಗೆ ತನ್ವೀರ್ ಸೇಠ್ ಪತ್ರ
ಶಾಸಕ ತನ್ವೀರ್ ಸೇಠ್
Follow us
ವಿವೇಕ ಬಿರಾದಾರ
|

Updated on: Jun 13, 2023 | 7:53 AM

ಮೈಸೂರು: ವಿದ್ಯುತ್​ ದರ ಏರಿಕೆಯಿಂದ (Electricity Bill Hike) ರಾಜ್ಯದ ಜನರು ಹೈರಾಣಾಗಿದ್ದಾರೆ. ಈ ಹಿನ್ನೆಲೆ ಜನರು ರಾಜ್ಯ ಸರ್ಕಾರ ಮತ್ತು ಎಸ್ಕಾಂಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವ್ಯಾಪಾರಸ್ಥರು ಪ್ರತಿಭಟನೆ ಮಾಡುತ್ತಿದ್ದಾರೆ. ಹೀಗಾಗಿ ವಿದ್ಯುತ್ ದರ ಏರಿಕೆಯನ್ನು ಮರು ಪರಿಶೀಲನೆ ಮಾಡುವಂತೆ ಕಾಂಗ್ರೆಸ್​ ಹಿರಿಯ ಶಾಸಕ ತನ್ವೀರ್ ಸೇಠ್ (Tanveer Seth) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramiah) ಅವರಿಗೆ ಪತ್ರ ಬರೆದಿದ್ದಾರೆ. ಎರಡು ಪುಟಗಳ ಪತ್ರ ಬರೆದು ವಿದ್ಯುತ್ ದರ ಏರಿಕೆಯನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ “ರಾಜ್ಯದಲ್ಲಿ ಕಾಂಗ್ರೆಸ್ ಪ್ರಚಂಡ ಜಯಗಳಿಸಿದೆ. ಸರ್ಕಾರ ರಚನೆಯಾದ ದಿನವೇ 5 ಗ್ಯಾರಂಟಿ ಘೋಷಣೆ ಮಾಡಲಾಗಿದೆ. ಗ್ಯಾರಂಟಿಗಳಲ್ಲಿ ಒಂದಾದ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆಗೆ ವ್ಯತಿರಿಕ್ತವೆಂಬಂತೆ ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಯಿಂದ ರಾಜ್ಯದ ಎಲ್ಲಾ ನಿಗಮಗಳಲ್ಲಿ ವಿದ್ಯುತ್ ದರ ಹೆಚ್ಚಿಸಲಾಗಿದೆ”.

ಇದನ್ನೂ ಓದಿ: ವಿದ್ಯುತ್ ದರ ಏರಿಕೆ ಬಗ್ಗೆ ಟೀಕೆ: ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸ್ಪಷ್ಟನೆ

“ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಚೇತರಿಸಿಕೊಳ್ಳದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಸ್ತುತ ಸರ್ಕಾರ ಘೋಷಿಸಿರುವ 200 ಯೂನಿಟ್ ಉಚಿತ ಸೌಲಭ್ಯವನ್ನು ಜನ ಸಾಮಾನ್ಯರಿಗೆ ನೀಡಿ ಕಿತ್ತುಕೊಂಡಂತಾಗಿದೆ. ವಿದ್ಯುತ್ ದರ ಏರಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ವಿದ್ಯುತ್ ಬೆಲೆ ಏರಿಕೆ ಆದೇಶವನ್ನು ಪರಿಶೀಲಿಸಿ. ಜನಸಾಮಾನ್ಯರಿಗೆ ಹೊರೆಯಾಗದ ರೀತಿಯಲ್ಲಿ ಜಾರಿಗೊಳಿಸಿ” ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಕೈಗಾರಿಕೋದ್ಯಮಿಗಳಿಂದ ಮೌನ ಪ್ರತಿಭಟನೆಗೆ ಕರೆ

ಬೆಳಗಾವಿ: ವಿದ್ಯುತ್ ದರ ಏರಿಕೆ ಖಂಡಿಸಿ ಕೈಗಾರಿಕೋದ್ಯಮಿಗಳಿಂದ ಇಂದು (ಜೂ.13) ಚನ್ನಮ್ಮ ವೃತ್ತದಿಂದ ಮೌನ ಪ್ರತಿಭಟನೆ ನಡೆಸಲಾಗುವುದು ಎಂದು ಬೆಳಗಾವಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಹೇಮಂತ್ ಪೋರವಾಲ್​ ಹೇಳಿದರು.

ಉದ್ಯಮಿಗಳ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದ ಬೆಲೆ ಏರಿಕೆಗಿಂತ ಈ ವರ್ಷ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ ವಿದ್ಯುತ್ ದರ ಏರಿಸಿದ್ದು ಖಂಡನೀಯ. ಈಗಾಗಲೇ ಕೊವಿಡ್​ನಿಂದ ಕೈಗಾರಿಕೋದ್ಯಮದ ಮೇಲೆ ಹೊಡೆತ ಬಿದ್ದಿದೆ. ಹೀಗಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನ ಮಾಡಿದ್ದೇವೆ ಎಂದರು.

ಬೆಳಗಾವಿ ಕೈಗಾರಿಕಾ & ವಾಣಿಜ್ಯೋದ್ಯಮ ಸಂಸ್ಥೆ, ಸಣ್ಣ ಕೈಗಾರಿಕೆಗಳ ಸಂಘ ಪ್ರತಿಭಟನೆಗೆ ಕರೆ ನೀಡಿದೆ. ಬೆಳಗಾವಿ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಹೇಮಂತ್ ಪೋರವಾಲ್, ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ರೋಹನ್ ಜವಳಿ ಸೇರಿ ಹಲವು ಉದ್ಯಮಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ವಿದ್ಯುತ್ ದರ ತಗ್ಗಿಸದಿದ್ದರೆ ಮಹಾರಾಷ್ಟ್ರಕ್ಕೆ ವಲಸೆ ಹೋಗುವ ಎಚ್ಚರಿಕೆ ನೀಡಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ