ಮುದೇನೂರು: ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥ ಕೇಸ್‌, ಚಿಕಿತ್ಸೆ ಫಲಿಸದೆ ಮತ್ತೊಬ್ಬ ವ್ಯಕ್ತಿ ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Nov 05, 2022 | 10:00 PM

ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥ ಕೇಸ್​ಗೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಇಂದು (ನ. 05) ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ.

ಮುದೇನೂರು: ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥ ಕೇಸ್‌, ಚಿಕಿತ್ಸೆ ಫಲಿಸದೆ ಮತ್ತೊಬ್ಬ ವ್ಯಕ್ತಿ ಸಾವು
ಮೃತ ವ್ಯಕ್ತಿ ವಿಠ್ಠಲ ಗುಡಿಹಿಂದ
Follow us on

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರಿನಲ್ಲಿ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥ ಕೇಸ್​ಗೆ ಸಂಬಂಧಿಸಿದಂತೆ ಚಿಕಿತ್ಸೆ ಫಲಿಸದೆ ಇಂದು (ನ. 05) ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ವಾಂತಿ ಭೇದಿ ತೀವ್ರವಾಗಿ ಕಿಡ್ನಿ ವೈಫಲ್ಯವಾಗಿದ್ದು, ಚಿಕಿತ್ಸೆ ಫಲಿಸದೆ ಮುದೇನೂರು ಗ್ರಾಮದ ವಿಠ್ಠಲ ಗುಡಿಹಿಂದ (45) ಮೃತಪಟ್ಟಿದ್ದಾರೆ. ಪ್ರಕರಣವಾದಾಗಿಂದ ಬಾಗಲಕೋಟೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಠ್ಠಲ, ಜಿಲ್ಲಾಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಆಂಬುಲೆನ್ಸ್​ನಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆಯ 3ಕ್ಕೆ ಏರಿದೆ. ಗ್ರಾಮದ 186 ಮಂದಿ ಅಸ್ವಸ್ಥರಾಗಿದ್ದರು.  ಈ ಪೈಕಿ 12 ಬಾಲಕರು, 8 ಬಾಲಕಿಯರು ಸೇರಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿರುವ 94 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬಹುತೇಕರನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.

ಕುಡಿಯುವ ನೀರಿಗೆ ಚರಂಡಿ ನೀರು ಬೆರೆತಿದ್ದು ಇದಕ್ಕೆ ಕಾರಣ: ಡಾ.ಮಹೇಶ ಕೋಣಿ

ಗ್ರಾಮದ ಶಿವಪ್ಪ ಯಂಡಿಗೇರಿ ಮತ್ತು ನಿಂಗಪ್ಪ ಹಾವಳ್ಳಿ ಕಲುಷಿತ ನೀರು ಸೇವನೆಯ ನಂತರ ಕಾಣಿಸಿಕೊಂಡ ಆರೋಗ್ಯ ವೈಪರಿತ್ಯದಿಂದ ಮೃತಪಟ್ಟಿದ್ದರು. ಬಹುತೇಕ ಗ್ರಾಮಸ್ಥರು ನಿತ್ರಾಣರಾಗಿದ್ದರು. ಊರಿನಲ್ಲಿ ಉತ್ಸಾಹವೇ ಇಲ್ಲದ ನೀರಸ ವಾತಾವರಣ ನೆಲೆಸಿತ್ತು. ಗ್ರಾಮದ ನೂರಕ್ಕೂ ಹೆಚ್ಚು ಮಂದಿಯ ಅನಾರೋಗ್ಯಕ್ಕೆ ಕಲುಷಿತ ಕುಡಿಯುವ ನೀರು ಮುಖ್ಯ ಕಾರಣ. ನೀರು ಪೂರೈಕೆ ಮಾಡಲೆಂದು ಅಳವಡಿಸಿದ್ದ ಪೈಪ್ ಒಡೆದು, ಅದಕ್ಕೆ ಚರಂಡಿ ನೀರು ಬೆರೆತಿದ್ದು ಪರಿಸ್ಥಿತಿ ಈ ಪ್ರಮಾಣದಲ್ಲಿ ವಿಷಮಿಸಲು ಕಾರಣವಾಯಿತು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಮಹೇಶ ಕೋಣಿ ತಿಳಿಸಿದ್ದಾರೆ.

ಪರಿಹಾರ ಗೊಂದಲ:

ವಾಂತಿ ಬೇಧಿಯಿಂದ ಮೃತಪಟ್ಟ ಗ್ರಾಮದ ಶಿವಪ್ಪ ಯಂಡಿಗೇರಿ (70) ಅವರ ಕುಟುಂಬಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ₹ 10 ಲಕ್ಷ ಬಿಡುಗಡೆ ಮಾಡಿದ್ದಾರೆ. ಆದರೆ ಐದು ದಿನಗಳಿಂದಲೂ ಗ್ರಾಮದ ಹಲವರಲ್ಲಿ ವಾಂತಿ-ಬೇಧಿ ಕಾಣಿಸಿದ್ದು, ಇದೇ ಕಾರಣಕ್ಕೆ ಸರಸ್ವತಿ ಎನ್ನುವವರು ಮೃತಪಟ್ಟಿದ್ದರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಈ ಸಾವನ್ನು ವಯೋಸಹಜ ಎಂದು ನಮೂದಿಸಿತ್ತು. ಇದೀಗ ಸರಸ್ವತಿ ಅವರ ಕುಟುಂಬಕ್ಕೂ ಸರ್ಕಾರವು ಪರಿಹಾರ ಘೋಷಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:56 pm, Sat, 5 November 22