ಬೆಳಗಾವಿ: ಗಣೇಶೋತ್ಸವದಲ್ಲಿ ಡಿಜೆಗೆ ಅವಕಾಶ ಮಾಡಿಕೊಡಿ. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಹೇಳುತ್ತಿದ್ದೇನೆ. ಡಿಜೆಯನ್ನು ಹಚ್ಚಿ ಮೆರವಣಿಗೆ ಮಾಡಿ ಯಾರು ತಡೀತಾರೆ ನೋಡೋಣ. ಅಕಸ್ಮಾತ್ ತಡೆದ್ರೆ ಪೊಲೀಸ್ ಠಾಣೆ ಎದುರು ಗಣೇಶನ ಇಟ್ಟುಕೊಂಡು ಧರಣಿ ಮಾಡಿ ಎಂದು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಪ್ರಮೋದ್ ಮುತಾಲಿಕ್ ಕರೆ ನೀಡಿದರು. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸೌಂಡ್ ಸಿಸ್ಟಮ್, ಲೈಟಿಂಗ್‌ನವರಿಗೆ ಯಾವದೇ ರೀತಿಯ ನಿರ್ಬಂಧ ಹಾಕಬಾರದು. ಸೌಂಡ್ ಸಿಸ್ಟಮ್, ಲೈಟಿಂಗ್‌ನವರು ಸಾಲಸೋಲ ಮಾಡಿ ಕಷ್ಟ ಅನುಭವಿಸಿದ್ದಾರೆ. ಸ್ವತಂತ್ರವಾಗಿ ಆಚರಣೆಗೆ ಅವಕಾಶ ಕೊಡಿ ಅವರ ಹೊಟ್ಟೆ ಮೇಲೆ ಕಲ್ಲು ಹಾಕಬೇಡಿ. ಎಂದು ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಡಿಜೆ ಸೀಜ್ ಮಾಡ್ತೀವಿ ಅನ್ನೋ ಹೆದರಿಸುವ ಪ್ರಕ್ರಿಯೆ ಮಾಡಬಾರದು. ಸುಪ್ರೀಂಕೋರ್ಟ್ ಆಜ್ಞೆ ಬಗ್ಗೆ ನೀವು ಹೇಳುವುದಾದರೆ, ಅದೇ ಸುಪ್ರೀಂಕೋರ್ಟ್ ಪ್ರತಿ ದಿವಸ ಮಸೀದಿಗಳಲ್ಲಿ ಐದು ಬಾರಿ ನಮಾಜ್ ಮಾಡೋದು ಎಷ್ಟು ಕಿರಿಕಿರಿ ಆಗ್ತಿದೆ. ಒಂದೇ ಒಂದು ಮಸೀದಿಯ ಮೈಕ್ ಕೆಳಗಿಳಿಸಿ ಸೀಜ್ ಮಾಡಿದ್ದು ತೋರಿಸಿ. ನಿಮ್ಮ ಕಾನೂನು ಹಿಂದೂಗಳಿಗೆ ಮಾತ್ರ ಆಗುತ್ತಾ? ಮುಸ್ಲಿಮರಿಗೆ ಇಲ್ವಾ ಎಂದು ಪ್ರಶ್ನಿಸಿದರು.
Published On - 9:43 am, Thu, 1 September 22