ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ(Ramesh Jarkiholi) ಒಂದು ವೋಟ್‌ಗೆ 6 ಸಾವಿರ ರೂ. ಕೊಡ್ತೀನಿ ಎಂದು ಹೇಳಿಕೆ ನೀಡಿದ್ದ ಬಗ್ಗೆ ಕಾಂಗ್ರೆಸ್ ನಾಯಕರು ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ದೂರು ದಾಖಲಾದ ಬೆನ್ನಲ್ಲೆ ಈ ಹೇಳಿಕೆ ಬಗ್ಗೆ ಬೆಳಗಾವಿ ನಗರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ತುರ್ತು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.
ನಾನು ವೋಟ್‌ಗೆ ಹಣ ಕೊಡುತ್ತೇನೆ ಎಂದು ಹೇಳಿಲ್ಲ. ನಾನು ಆರು ಬಾರಿ ಶಾಸಕನಾಗಿದ್ದೇನೆ, ನನಗೆ ಕಾನೂನು ಅರಿವು ಇದೆ. ಯಾವ ಅಭ್ಯರ್ಥಿ ಪರವಾಗಿ ನಾನು ಹೇಳಿಲ್ಲ. ಕಾರ್ಯಕ್ರಮದಲ್ಲಿ ಏನು ಮಾತನಾಡಿದ್ದೇನೆ ಎಂಬುವುದು ಗೊತ್ತಿಲ್ಲ. ಬೆಳಗಾವಿ ಗ್ರಾಮೀಣ ಶಾಸಕರು ಓಪನ್ ಆಗಿಯೇ ಆಮಿಷ ನೀಡಿಲ್ವಾ? ಅಂತಹ ಸಣ್ಣ ರಾಜಕಾರಣ ಮಾಡಬಾರದು. ಡಿಕೆ ಶಿವಕುಮಾರ್‌ಗೆ ರಮೇಶ್ ಜಾರಕಿಹೊಳಿ ಬಗ್ಗೆ ಹೆದರಿಕೆ ಇದೆಯಲ್ಲ ಸಂತೋಷ. ಅವರಿಗೆ ಮೋದಿ, ಅಮಿತ್ ಶಾ ಬಗ್ಗೆ ಎಷ್ಟು ಹೆದರಿಕೆ ಇರಬಹುದು. ಕಳೆದ ಬಾರಿ ನಾನು ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದಾಗ ನನ್ನ ಮಾತು ಕೇಳಿ ವೋಟ್ ಹಾಕಿದ್ದಾರೆ. ಈಗಿನ ಶಾಸಕರು ತಮ್ಮ ಅಧಿಕಾರದ ದರ್ಪದಿಂದ ಬೆಂಗಳೂರು, ದೆಹಲಿ ಓಡಾಟದಲ್ಲಿ ಜನರನ್ನ ಮರೆತರು. ಆರು ಸಾವಿರದಿಂದ ಹತ್ತು ಸಾವಿರ ಕೋಟಿ ಖರ್ಚು ಆಗಲಿ ಅಂತಾ ಬೇರೆ ಉದ್ದೇಶಕ್ಕೆ ಹೇಳಿದೀನಿ. ಅಲ್ಲಿ ಮೂಲಭೂತ ಸೌಕರ್ಯಕ್ಕೆ ಹಣ ಕೊಡುವುದಾಗಿ ಹೇಳಿದೀನಿ.
ಇದನ್ನೂ ಓದಿ: ಬಿಜೆಪಿ ವಿರುದ್ಧ ಚುನಾವಣಾ ಅಕ್ರಮ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್; ಸಿಎಂ ಸೇರಿ ಅನೇಕರ ವಿರುದ್ಧ ದೂರು
ಅಷ್ಟು ಕೆಳ ಮಟ್ಟಕ್ಕೆ ಹೋಗಬಾರದು ಅಂತಾ ನಾವು ಕೇಸ್ ಕೊಟ್ಟಿಲ್ಲ. ನನ್ನ ಒಬ್ಬನೇ ಮೇಲೆ ಕೇಸ್ ಮಾಡಬಹುದಿತ್ತು. ಮುಖ್ಯಮಂತ್ರಿ ಮೇಲೆ ಯಾಕೆ? ಬೆಳಗಾವಿ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್‌ಗೆ ಬೇರೆ ಕ್ಷೇತ್ರ ಕಾಣಿಸುತ್ತಿಲ್ವಾ? ನಾನು ಹೇಳಿದ ಹೇಳಿಕೆ ಟ್ವಿಸ್ಟ್ ಆಗಿದೆ ನಾನು ಅಭಿವೃದ್ಧಿಗಾಗಿ ಹಣ ಕೊಡ್ತೀನಿ ಅಂದಿದ್ದೇನೆ. ನಾನು ವೋಟ್‌ಗೆ ಹಣ ಕೊಡ್ತೀನಿ ಅಂದಿಲ್ಲ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಟಾರ್ಗೆಟ್ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿಕೆಶಿಗೆ ನನ್ನ ಒಬ್ಬನದ್ದೇ ಹೆದರಿಕೆ ಇದೆ, ಅವನನ್ನ ಮುಗಿಸುತ್ತೇನೆ ಅಂತಾ ಹೆದರಿಕೆ ಇದೆ. ನಾನೊಬ್ಬನೇ ಅವನನ್ನ ಎದುರಿಸುವವ. ಇಂತಹ ನೂರು ಸಿಡಿ ಬರಲಿ ನಾನು ಗಟ್ಟಿ ಇದ್ದೇನೆ. ನನ್ನ ಕೇಸ್ ಬಿಡುವುದಿಲ್ಲ ಸಿಬಿಐಗೆ ಕೊಡಿಸುತ್ತೇನೆ ಎಂದರು.
ಇನ್ಮುಂದೆ ಡಿಕೆಶಿಯ ವೈಯಕ್ತಿಕ ವಿಚಾರ ಮಾತನಾಡಬೇಕಾಗುತ್ತದೆ. ಡಿ.ಕೆ.ಶಿವಕುಮಾರ್ ನನ್ನ ವೈಯಕ್ತಿಕ ಜೀವನ ಹಾಳು ಮಾಡಿದ್ದಾನೆ. ಸಿಡಿ ಪ್ರಕರಣವನ್ನು ಸಿಬಿಐಗೆ ಕೊಡಿಸುತ್ತೇನೆ. ಸಿಡಿ ಕೇಸ್ನಲ್ಲಿ ಮಹಾನಾಯಕನ ಕೈವಾಡ ಇರುವ ಸಾಕ್ಷ್ಯ ಇದೆ. ಈ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಚರ್ಚಿಸಿದ್ದೇನೆ. ಸಿಡಿ ಇಟ್ಟು ಕೆಲಸ ಮಾಡ್ತೀನಿ ಎಂದಿರುವ ಸಂಭಾಷಣೆ ಇದೆ. ಸಿಡಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದೇನೆ. ಸಿಡಿ ಕೇಸ್ನ ಇಬ್ಬರು ಆರೋಪಿಗಳು ಶಿರಾ, ದೇವನಹಳ್ಳಿಯವರು.
ದೇವನಹಳ್ಳಿಯವನ ಮನೆ ಮೇಲೆ ದಾಳಿಯಾದಾಗ 90-110 ಸಿಡಿ ಸಿಕ್ಕಿವೆ.ಇಡೀ ರಾಜ್ಯದ ಜನರ ಸಿಡಿಗಳು ಸಿಕ್ಕಿವೆ. ಮುಂದಿನ ವಾರ ದೆಹಲಿಗೆ ಹೋಗಿ ಅಮಿತ್ ಶಾ ಭೇಟಿಯಾಗುತ್ತೇನೆ. ಬಹಳಷ್ಟು ಜನರನ್ನು ಬ್ಲ್ಯಾಕ್ಮೇಲ್ ಮಾಡಲು ರೆಡಿಯಾಗಿದ್ದಾನೆ. ಇಂತಹ ನೂರು ಸಿಡಿ ಬರಲಿ ನಾನು ಗಟ್ಟಿ ಇದ್ದೇನೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:24 pm, Wed, 25 January 23