ಬಿಜೆಪಿ ವಿರುದ್ಧ ಚುನಾವಣಾ ಅಕ್ರಮ ಅಸ್ತ್ರ ಪ್ರಯೋಗಿಸಿದ ಕಾಂಗ್ರೆಸ್; ಸಿಎಂ ಸೇರಿ ಅನೇಕರ ವಿರುದ್ಧ ದೂರು
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಇತರ ನಾಯಕರು ಹೈಗ್ರೌಂಡ್ಸ್ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ.
ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಚುನಾವಣಾ ಅಕ್ರಮ ಆರೋಪ ಸಂಬಂಧ ಬೆಂಗಳೂರಿನಲ್ಲಿಂದು ಕಾಂಗ್ರೆಸ್ ನಾಯಕರು ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಇತರ ನಾಯಕರು ಹೈಗ್ರೌಂಡ್ಸ್ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಸಿಎಂ ಬಸವರಾಜ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ.
ಇನ್ನು ದೂರು ನೀಡಿದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಯ ನಡೆ ಗಮನಿಸುತ್ತೀದಿರಿ. ಸಿಎಂ ಬೊಮ್ಮಾಯಿ & ಅವರ ತಂಡ ಭ್ರಷ್ಟಾಚಾರದ ಪಿತಾಮಹ. ಬಿಜೆಪಿ ನಾಯಕರು ಮತದಾರರಿಗೆ ಆಮಿಷವೊಡ್ಡಲು ಹೊರಟಿದ್ದಾರೆ. 40% ಕಮಿಷನ್ ಮೂಲಕ ಸಾವಿರಾರು ಕೋಟಿ ಸಂಗ್ರಹ ಮಾಡಿದ್ದಾರೆ. ಒಂದು ಮತಕ್ಕೆ 6 ಸಾವಿರ ಕೊಡ್ತೀವಿ ಎಂದು ಜಾರಕಿಹೊಳಿ ಹೇಳಿದ್ದಾರೆ. ಶಾಸಕ ರಮೇಶ್ ಜಾರಕಿಹೊಳಿ ಆಮಿಷದ ವಿಡಿಯೋ ಕೂಡ ಇದೆ. ಈ ಸಂಬಂಧ ದಾಖಲೆ ಸಮೇತ ಪೊಲೀಸರಿಗೆ ದೂರು ನೀಡಿದ್ದೇವೆ. ಐಪಿಸಿ ಸೆಕ್ಷನ್ 171(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಪೊಲೀಸರು ಎಫ್ಐಆರ್ ದಾಖಲಿಸಿ ಬಂಧಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಹೈಗ್ರೌಂಡ್ಸ್ ಠಾಣೆ ಬಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಚುನಾವಣೆಯಲ್ಲಿ ಸೋಲ್ತೀವಿ ಅಂತ ಬಿಜೆಪಿಗೆ ಮನವರಿಕೆ ಆಗಿದೆ
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡು ಪ್ರತಿಕ್ರಿಯೆ ನೀಡಿದ್ದಾರೆ. ಭ್ರಷ್ಟಾಚಾರದಿಂದ ಅಗಾಧವಾದ ದುಡ್ಡು ಸಂಪಾದಿಸಿಬಿಟ್ಟಿದ್ದಾರೆ. ಚುನಾವಣೆಯಲ್ಲಿ ಸೋಲ್ತೀವಿ ಅಂತ ಬಿಜೆಪಿಗೆ ಮನವರಿಕೆ ಆಗಿದೆ. ಹೀಗಾಗಿ ಮತ್ತೆ ಅಧಿಕಾರಕ್ಕೆ ಬರಬೇಕೆಂದು ಹುನ್ನಾರ ಮಾಡ್ತಿದ್ದಾರೆ. ಬಿಜೆಪಿಯವರು ಒಂದು ಸಂಚು ರೂಪಿಸಿದ್ದಾರೆ. ಇದರಲ್ಲಿ ಜೆ.ಪಿ.ನಡ್ಡಾ, ನಳಿನ್ ಕುಮಾರ್ ಕಟೀಲು, ಬೊಮ್ಮಾಯಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇದ್ದಾರೆ. ಚುನಾವಣೆಯಲ್ಲಿ 30 ಸಾವಿರ ಕೋಟಿ ಖರ್ಚು ಮಾಡಲು ಈಗಾಗಲೇ ಬಿಜೆಪಿ ತೀರ್ಮಾನ ಮಾಡಿಬಿಟ್ಟಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಈ ಮಾತು ಹೇಳಿದ್ದಾರೆ. ನಡ್ಡಾ, ಕಟೀಲು, ಸಿಎಂಗೆ ಮಾಹಿತಿ ಇಲ್ಲದೇ ಹೇಳಲು ಸಾಧ್ಯವಿಲ್ಲ. ನ್ಯಾಯಸಮ್ಮತ ಚುನಾವಣೆ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲ. ಪ್ರಜಾಪ್ರಭುತ್ವ ಬುಡಮೇಲು ಮಾಡುವ ಹುನ್ನಾರ ನಡೆದಿದೆ. ಪ್ರಜಾಪ್ರಭುತ್ವ ನಾಶವಾಗುತ್ತೆ ಅಂತಾ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಕಾಂಗ್ರೆಸ್ಗೆ ಸಿಎಂ ತಿರುಗೇಟು
ಭಾರತದಲ್ಲಿ ಅಕ್ರಮ ಭ್ರಷ್ಟಾಚಾರಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್. ಇವರಿಂದ ನಾವು ಪಾಠ ಕಲಿಯಬೇಕಿಲ್ಲವೆಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಎಷ್ಟು ತಳಮಟ್ಟಕ್ಕೆ ಹೋಗಿದೆ ಅನ್ನೋದಕ್ಕೆ ಇದೇ ಉದಾಹರಣೆ. 2 ಸಾವಿರ ರೂ. ಕೊಡುವುದಾಗಿ ಕಾಂಗ್ರೆಸ್ ಓಪನ್ ಆಗಿ ಹೇಳಿದೆ. ಈ ಮಾನದಂಡ ಹಾಕಿದ್ರೆ ಅವರು ಸಹ ಅಪರಾಧಿಗಳೇ ಆಗ್ತಾರೆ. ಕಾಂಗ್ರೆಸ್ ಮತದಾರರಿಗೆ ಆಮಿಷ ತೊರಿಸಿದಂತೆ ಆಗುವುದಿಲ್ವಾ? ಕುಣಿಗಲ್ನಲ್ಲಿ ತಮ್ಮ ಫೋಟೋ ಇರುವ ಕುಕ್ಕರ್ ಕೊಟ್ಟಿದ್ದಾರೆ. ಕಮರ್ಷಿಯಲ್ ಟ್ಯಾಕ್ಸ್ನವರು ನಾಲ್ವರಿಗೆ ದಂಡ ಹಾಕಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಸೋಲ್ತೀವಿ ಅಂತಾ ಗ್ಯಾರಂಟಿ ಆಗಿದೆ. ಹೀಗಾಗಿ ದೂರು ಕೊಡೋದು ಇನ್ನೊಂದು ಎಲ್ಲಾ ಮಾಡ್ತಿದ್ದಾರೆ. ಪೊಲೀಸರು ಹಾಗೂ ಕಾನೂನು ಏನು ಬೇಕಾದರೂ ಕ್ರಮಕೈಗೊಳ್ಳಲಿ. ಈ ರೀತಿಯ ಕಂಪ್ಲೆಂಟ್ ನಾವು 100 ಕೊಡಬಹುದು. ಎಲ್ಲವನ್ನು ರಾಜ್ಯದ ಜನರು ತೀರ್ಮಾನ ಮಾಡ್ತಾರೆ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:42 pm, Wed, 25 January 23