ಬೆಳಗಾವಿ, ಜುಲೈ 27: ಉಡುಪಿಯಲ್ಲಿ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಎಚ್ಚೆತ್ತ ಬೆಳಗಾವಿ (Belagavi) ಜಿಲ್ಲಾಡಳಿತವು ಜಲಪಾತದ ಸಮೀಪ ಪ್ರವಾಸಿಗರು ಹೋಗುವುದನ್ನು ನಿರ್ಬಂಧಿಸಿದೆ. ಆದರೆ ದೂರದಿಂದ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದ್ದು, ಪೊಲೀಸರು ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಇನ್ನು, ಮುಂಜಾಗ್ರತಾ ಕ್ರಮಗಳ ಬಗ್ಗೆ ಚಿಕ್ಕೋಡಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಬೆಳಗಾವಿ ಜಿಲ್ಲೆ, ಮಹಾರಾಷ್ಟ್ರದಲ್ಲಿ ಸತತ ಒಂದು ವಾರದಿಂದ ಮಳೆ ಆಗುತ್ತಿದೆ. ಜೀವಹಾನಿ, ಮನೆಹಾನಿ ಆದರೆ ಕೂಡಲೇ ಪರಿಹಾರ ನೀಡಲು ಸೂಚನೆ ನೀಡಲಾಗಿದೆ. ನದಿ ತೀರದಲ್ಲಿರುವವರು ಮುಂಚಿತವಾಗಿ ಕಾಳಜಿ ಕೇಂದ್ರಕ್ಕೆ ತೆರಳಬೇಕು. ಬಾರವಾಡ ಗ್ರಾಮದಲ್ಲಿ ಎರಡು ಕುಟುಂಬ ಸ್ಥಳಾಂತರ ಮಾಡಲಾಗಿದೆ ಎಂದರು.
ಇದನ್ನೂ ಓದಿ: ದೇವಾಲಯಕ್ಕೆಂದು ಬಂದು ಜಲಪಾತಕ್ಕೆ ಬಿದ್ದ ಯುವಕ: ಪತ್ತೆಯಾಗದ ಶರತ್ ಮೃತದೇಹ, ಕಾರ್ಯಚರಣೆ ಸ್ಥಗಿತ
ಎಲ್ಲಾ ಇಲಾಖೆಗಳ ಅಧಿಕಾರಿಗಳ ಮಧ್ಯೆ ಸಮನ್ವಯತೆ ಇರಬೇಕು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಜನರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ. ಬೆಳೆ ಹಾನಿ ಆದ ರೈತರಿಗೆ SDRF, NDRF ನಿಯಮದಡಿ ಪರಿಹಾರ ನೀಡಲಾಗುವುದು. ಮಳೆಯಿಂದಾದ ಹಾನಿಗೆ ಪರಿಹಾರ ನೀಡಲು ಹಣದ ಕೊರತೆ ಇಲ್ಲ. ಮನೆ ಬಿದ್ದವರಿಗೆ ಸದ್ಯ ಎನ್‌ಡಿಆರ್‌ಎಫ್ ನಿಯಮಾವಳಿ ಪರಿಹಾರ ನೀಡಲಾಗುವುದು ಎಂದರು.
ಕೆಳಹಂತದ ಸೇತುವೆಗಳ ಬಳಿ ಎತ್ತರದ ಸೇತುವೆ ಬೇಗ ಕಾಮಗಾರಿ ಮಾಡುತ್ತಾರೆ. ಶಿಥಿಲಾವ್ಯಸ್ಥೆಯ ಶಾಲೆ, ಆಸ್ಪತ್ರೆಗಳ ದುರಸ್ತಿಗೆ ಸೂಚನೆ ನೀಡಲಾಗಿದೆ ಎಂದು ಅಂಜುಮ್ ಪರ್ವೇಜ್ ಹೇಳಿದರು. ಮಹಾರಾಷ್ಟ್ರದ ಯಾವುದೇ ಡ್ಯಾಂಗಳು ಭರ್ತಿ ಆಗಿಲ್ಲ, ಸದ್ಯಕ್ಕೆ ನೀರು ಬಿಡುಗಡೆ ಮಾಡುತ್ತಿಲ್ಲ, ಮಹಾರಾಷ್ಟ್ರದ ಅಧಿಕಾರಿಗಳ ಜೊತೆ ಮೂರು ಹೊತ್ತು ಸಂಪರ್ಕದಲ್ಲಿ ಇದ್ದೇವೆ. ನಮ್ಮ ಜಲಸಂಪನ್ಮೂಲ ಇಲಾಖೆ ಅಧಿಕಾರಿ ಅಲ್ಲಿಗೆ ಹೋಗುತ್ತಾರೆ. 2019ರಲ್ಲಿ ಪ್ರವಾಹದಿಂದ ಪಾಠ ಕಲಿತಿದ್ದು, ಅದರ ಅನುಭವ ಮೇಲೆ ಅಂತಹ ಪರಿಸ್ಥಿತಿ ಆಗಲು ಬಿಡಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ