AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಕರೆಂಟ್ ಕಟ್ ಆಗುತ್ತೆ ಅಂತ ನೀವ್ಯಾಕೆ ಚಿಂತೆ ಮಾಡ್ತೀರಿ? ಅದು ನಿಮ್ಮ ಡ್ಯೂಟಿಯಲ್ಲ: ಬಿಜೆಪಿ ಆರೋಪಕ್ಕೆ ಖಡಕ್​​ ಉತ್ತರ ನೀಡಿದ ಸತೀಶ್ ಜಾರಕಿಹೊಳಿ

ಸಚಿವ ಸತೀಶ್ ಜಾರಕಿಹೊಳಿ ರಾಜ್ಯ ರಾಜಕಾರಣದ ಬಿಸಿ ವಿಷಯಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟಿದ್ದು ಎಂದ ಅವರು, ಸುವರ್ಣಸೌಧದ ವಿದ್ಯುತ್ ಬಿಲ್ ದೊಡ್ಡದಲ್ಲ. ರಸ್ತೆ ಗುಂಡಿ ಸಮಸ್ಯೆಗೆ ಪಾಲಿಕೆಯಲ್ಲಿರುವ ಬಿಜೆಪಿ ಹೊಣೆ. ಕಾವೇರಿ ಹಿತ ಕಾಯಲು ಪ್ರಯತ್ನ. ಕಬ್ಬು ದರದಲ್ಲಿ ಏಕರೂಪ ಅಸಾಧ್ಯ, ಇಳುವರಿ ಆಧಾರ ಎಂದರು. ಬಿಜೆಪಿಗೆ ಖಡಕ್ ತಿರುಗೇಟು ನೀಡಿದರು.

ಕರೆಂಟ್ ಕಟ್ ಆಗುತ್ತೆ ಅಂತ ನೀವ್ಯಾಕೆ ಚಿಂತೆ ಮಾಡ್ತೀರಿ? ಅದು ನಿಮ್ಮ ಡ್ಯೂಟಿಯಲ್ಲ: ಬಿಜೆಪಿ ಆರೋಪಕ್ಕೆ ಖಡಕ್​​ ಉತ್ತರ ನೀಡಿದ ಸತೀಶ್ ಜಾರಕಿಹೊಳಿ
, ಸಚಿವ ಸತೀಶ್ ಜಾರಕಿಹೊಳಿ
ಸಹದೇವ್​ ಮಾನೆ
| Edited By: |

Updated on:Nov 14, 2026 | 5:09 PM

Share

ಚಿಕ್ಕೋಡಿ , ನ.14: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಚಿವ ಸಂಪುಟ ವಿಸ್ತರಣೆ, ಬೆಳಗಾವಿಯ ಸುವರ್ಣ ವಿಧಾನಸೌಧದ ವಿದ್ಯುತ್ ಬಿಲ್ ಬಾಕಿ, ಕಾವೇರಿ ನದಿ ನೀರು ಹಂಚಿಕೆ ಹಾಗೂ ಕಬ್ಬಿನ ದರ ನಿಗದಿ ವಿಚಾರವಾಗಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಬಿಜೆಪಿಗೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಹಾಗೂ ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿ (ಸ್ಟೇಜ್‌ನಲ್ಲಿ) ನಾವಿಲ್ಲ. ಅದನ್ನು ಮುಖ್ಯಮಂತ್ರಿಗಳನ್ನೇ ಕೇಳಬೇಕು. ನಾವು ಹೈಕಮಾಂಡ್ ರೂಲ್ಸ್ ಫಾಲೋ ಮಾಡುತ್ತೇವೆ ಅಷ್ಟೇ” ಎಂದು ಸ್ಪಷ್ಟಪಡಿಸಿದರು.

ಸುವರ್ಣ ವಿಧಾನಸೌಧದ ವಿದ್ಯುತ್ ಬಿಲ್ ಬಾಕಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, “ರಾಜ್ಯದ ಐದು ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿವಿಧ ಇಲಾಖೆಗಳಿಂದ ಒಟ್ಟು 10 ಸಾವಿರ ಕೋಟಿ ರೂಪಾಯಿ ಬಾಕಿಯಿದೆ. ಅದರಲ್ಲಿ ನಮ್ಮ ಸುವರ್ಣಸೌಧದ್ದು ಬರೀ 11 ಲಕ್ಷ ರೂಪಾಯಿ ಮಾತ್ರ ಬಾಕಿಯಿದೆ” ಎಂದರು. ವಿದ್ಯುತ್ ಕಟ್ ಆಗುತ್ತೆ ಅಂತ ನೀವ್ಯಾಕೆ ಚಿಂತೆ ಮಾಡುತ್ತೀರಿ? ಅದನ್ನು ನೋಡಿಕೊಳ್ಳಲು ಅಧಿಕಾರಿಗಳಿದ್ದಾರೆ, ಸರ್ಕಾರವಿದೆ. ಅದು ನಿಮ್ಮ ಡ್ಯೂಟಿಯಲ್ಲ” ತಿರುಗೇಟು ನೀಡಿದರು.

ರಸ್ತೆ ಗುಂಡಿ ವಿವಾದ: ಬಿಜೆಪಿ ಶಾಸಕರಿಗೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ

ಬೆಳಗಾವಿಯಲ್ಲಿ ರಸ್ತೆ ಗುಂಡಿ ಮುಚ್ಚದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿರುವ ಬಿಜೆಪಿ ಶಾಸಕರ ವಿರುದ್ಧ ಕಿಡಿಕಾರಿದ ಸಚಿವರು, “ರಸ್ತೆ ಗುಂಡಿ ಮುಚ್ಚುವುದು ಮಹಾನಗರ ಪಾಲಿಕೆಯ ಜವಾಬ್ದಾರಿ. ಪಾಲಿಕೆಯಲ್ಲಿ ಈಗ ಯಾರ ಆಡಳಿತವಿದೆ? ಬಿಜೆಪಿಯವರ ಆಡಳಿತವೇ ಇದೆ” ಎಂದು ತಿರುಗೇಟು ನೀಡಿದರು. “ಬಿಜೆಪಿ ಸರ್ಕಾರ ಇದ್ದಾಗ ದಕ್ಷಿಣ ಕರ್ನಾಟಕಕ್ಕೆ ಶೇ. 70ರಷ್ಟು ಅನುದಾನ ತೆಗೆದುಕೊಂಡು ಹೋಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಶಾಸಕರಿದ್ದರೂ ಅನುದಾನ ಕೊಟ್ಟಿಲ್ಲ. ಈಗ ಪ್ರತಿಯೊಂದಕ್ಕೂ ರಾಷ್ಟ್ರಪತಿ, ರಾಜ್ಯಪಾಲರಿಗೆ ಪತ್ರ ಬರೆಯುತ್ತಾರೆ. ಕೇಂದ್ರದಿಂದ ಬರಬೇಕಿದ್ದ ಜಲ ಜೀವನ್ ಮಿಷನ್ (JJM) ಯೋಜನೆಯ 10 ಸಾವಿರ ಕೋಟಿ ರೂಪಾಯಿ ಅನುದಾನ ಇನ್ನೂ ಬಂದಿಲ್ಲ. ಮೊದಲು ಅದನ್ನು ಕೊಡಿಸಲಿ” ಎಂದು ಆಗ್ರಹಿಸಿದರು. ಅಲ್ಲದೆ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತೆರಿಗೆ ಸೋರಿಕೆ ತಡೆಗಟ್ಟಲು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದರು.

ಇದನ್ನೂ ಓದಿ: ಪಿಂಕ್​​ ಲೈನ್ ಮೆಟ್ರೋದಲ್ಲಿ ಡಿಕೆ ಶಿವಕುಮಾರ್​ ಪ್ರಯಾಣ: ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ ಪ್ರಯಾಣಿಕರು

ಕಾವೇರಿ ನೀರು ಮತ್ತು ಕಬ್ಬಿನ ದರ ನಿಗದಿ ಕುರಿತು ಸಚಿವರು ಹೇಳಿದ್ದೇನು?

“ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಎಲ್ಲರಿಗೂ ಪ್ರಶ್ನಿಸುವ ಹಾಗೂ ಕೇಳುವ ಹಕ್ಕಿದೆ. ರಾಜ್ಯದ ಹಿತಾಸಕ್ತಿ ಕಾಯಲು ನಮಗೆ ಎಷ್ಟು ಅವಕಾಶವಿದೆಯೋ ಅಷ್ಟು ಪ್ರಯತ್ನ ಮಾಡುತ್ತೇವೆ” ಎಂದು ಹೇಳಿದರು. ಕಬ್ಬು ಬೆಳೆಗಾರರ ದರ ನಿಗದಿ ಕುರಿತು ಮಾತನಾಡಿದ ಅವರು, “ಮೊದಲಿನಿಂದಲೂ ರೈತರ ಹೋರಾಟವಿತ್ತು. ನಾವು ಸಕ್ಕರೆ ಬೆಲೆ 45 ರೂ. ಬೇಸ್ ಇಟ್ಟುಕೊಂಡು 3,600 ರೂ. ದರ ನಿಗದಿ ಮಾಡಿದ್ದೆವು. ಈಗ 50 ರೂ. ಆಧಾರದ ಮೇಲೆ ದರ ಘೋಷಣೆಯಾಗಿದ್ದು, 50 ರೂಪಾಯಿಗಿಂತ ಮೇಲ್ಪಟ್ಟು ಸಕ್ಕರೆ ಮಾರಾಟವಾದರೆ ಟನ್‌ಗೆ 4,000 ರೂ. ದರ ಸಿಗಲಿದೆ. ಎಲ್ಲಾ ಕಾರ್ಖಾನೆಗಳು ಲಾಭಾಂಶದ ಸೂತ್ರವನ್ನೇ ಅನುಸರಿಸುತ್ತಿವೆ. ಕಬ್ಬಿನ ರಿಕವರಿ (ಇಳುವರಿ) ಆಧಾರದ ಮೇಲೆ ದರ ನೀಡಲಾಗುತ್ತದೆಯೇ ಹೊರತು, ರಾಜ್ಯಾದ್ಯಂತ ಏಕರೂಪದ ದರ ನೀಡಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Sat, 14 November 26

Follow Us
ಸಹದೇವ್​ ಮಾನೆ
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More