ಕಳೆದ 25 ವರ್ಷಗಳಿಂದ ಚಿಕ್ಕೋಡಿ ಜಿಲ್ಲೆಗಾಗಿ (Chikodi) ಹೋರಾಟ ನಡೆದಿದೆ. ಆದರೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಪ್ರತ್ಯೇಕ ಜಿಲ್ಲಾ ಹೋರಾಟದ (Separate district) ಅಸ್ತ್ರ ಮುಂದಿಟ್ಟುಕೊಂಡು ಅಖಾಡಕ್ಕೆ ಧುಮುಕಿದ್ದಾರೆ. ಚಿಕ್ಕೋಡಿ ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಮುಂದಾಳತ್ವದಲ್ಲಿ ನಿನ್ನೆ ನಡೆದ ಪ್ರತಿಭಟನೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೌದು… ಬೆಳಗಾವಿ (belagavi) ರಾಜ್ಯದ ಅತಿ ದೊಡ್ದ ಜಿಲ್ಲೆ. ಎರಡೂವರೆ ಲೋಕಸಭೆ, 18 ವಿಧಾನಸಭಾ ಮತಕ್ಷೇತ್ರಗಳು, ಎರಡು ವಿಧಾನ ಪರಿಷತ್ ಮತಕ್ಷೇತ್ರಗಳನ್ನು ಹೊಂದಿದ ಜಿಲ್ಲೆ ಇದಾಗಿದೆ. ಈ ಜಿಲ್ಲೆಯನ್ನ ಇಬ್ಭಾಗ ಮಾಡಿ ಎರಡು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎನ್ನುವುದು ಇಲ್ಲಿನ ಜನರ 25 ವರ್ಷಗಳ ನಿರಂತರ ಬೇಡಿಕೆ. ಜಿ.ಎಚ್. ಪಟೇಲ್‌ರ ಕಾಲದಲ್ಲಿ 1997 ರಲ್ಲಿ 7 ಜಿಲ್ಲೆ ಬಾಗಲಕೋಟ, ಗದಗ, ಹಾವೇರಿ, ಚಾಮರಾಜನಗರ ಜೊತೆಗೆ ಚಿಕ್ಕೋಡಿ ಕೂಡ ಪ್ರತ್ಯೇಕ ಜಿಲ್ಲೆ ಘೋಷಣೆಯಾಗುವುದಿತ್ತು.
ಆದರೆ ಈ ಭಾಗದ ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆಯಿಂದಾಗಿ ಚಿಕ್ಕೋಡಿ ಇನ್ನೂ ಜಿಲ್ಲೆಯಾಗದೇ ಉಳಿದಿದೆ. ಹೀಗಾಗಿ ಚಿಕ್ಕೋಡಿಯಲ್ಲಿ ಚಿಕ್ಕೋಡಿ ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ, ಚಿಂಚಲಿಯ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ನೂರಾರು ಜನರು ಭಾಗಿಯಾಗಿದ್ದರು. ಪ್ರತಿಭಟನೆ ಚಿಕ್ಕೋಡಿಯ ಬಸ್ ಸ್ಟ್ಯಾಂಡ್‌ನ ಮಹಾವೀರ ವೃತ್ತದಿಂದ ಆರಂಭಗೊಂಡು ಬಸವೇಶ್ವರ ವೃತ್ತದವರೆಗೂ ಸಾಗಿತು.
ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಚಿಕ್ಕೋಡಿಯ ಯಡೂರ ಗ್ರಾಮದಿಂದ ಡಿಸೆಂಬರ್ 23 ರಂದು ಐದು ಸಾವಿರಕ್ಕೂ ಅಧಿಕ ಜನ ಬೆಳಗಾವಿಗೆ ತೆರಳಿ ಸಿಎಂ ಹಾಗೂ ಸ್ಪೀಕರ್‌ಗೆ ಮನವಿ ನೀಡಲಾಗುವುದೆಂದು ಶಾಸಕ ಗಣೇಶ ಹುಕ್ಕೇರಿ ತಿಳಿಸಿದ್ರು. ಅಧಿವೇಶನ ಸಮೀಪಿಸುತ್ತಿದ್ದಂತೆ (winter session) ಮತ್ತೆ ಮುನ್ನೆಲೆಗೆ ಬಂದಿರೋ ಜಿಲ್ಲಾ ಹೋರಾಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Also Read:
ಬೊಮ್ಮಾಯಿ ಸರ್ಕಾರದ ಕೊನೆಯ ಅಧಿವೇಶನ ಬೆಳಗಾವಿಯಲ್ಲಿ
ಇನ್ನು 25 ವರ್ಷಗಳಿಂದ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕೆಂದು ಅನೇಕರು ಹೋರಾಟಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಸರ್ಕಾರದವರಾಗಲಿ ಇದಕ್ಕೆ ಪೂರಕವಾಗಿ ಸ್ಪಂದಿಸಿಲ್ಲ. ನಾವು ಈ ಹೋರಾಟದ ಪರ ಬಹಳಷ್ಟು ಗಟ್ಟಿಮುಟ್ಟಾಗಿ ನಿಂತುಕೊಳ್ತೇವೆ. ಆದರೆ ಈ ಭಾಗದ ಶಾಸಕರ ಮೂಲಕ ಈ ಹೋರಾಟವು ಅಂತ್ಯಗೊಳ್ಳಬೇಕೆಂಬುದು ನಮ್ಮ ಆಶಯವಾಗಿದೆ. ಕಡಿಮೆ ಜನಸಂಖ್ಯೆಯುಳ್ಳ ನಗರವಾದ ವಿಜಯನಗರವನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಿದರು. ಅದೇ ಮಾದರಿಯಲ್ಲಿ ನಾವು ಸಹ ಹೋರಾಟ ಮಾಡಬೇಕಿದೆ.
ಬೆಳಗಾವಿ ಜಿಲ್ಲೆ ಬಹುದೊಡ್ಡ ಜಿಲ್ಲೆಯಾಗಿದೆ. ಅಥಣಿ ಭಾಗದ ಜನರು ತಮ್ಮ ಕೆಲಸಗಳಿಗೆ ಬೆಳಗಾವಿಯನ್ನೆ ಅವಲಂಬಿಸಬೇಕಾಗಿದೆ. ಆದರೆ ಬೆಳಗಾವಿಗೆ ಹೋಗಿ ಬರಲು ಗಡಿಭಾಗದ ಜನರು ತಮ್ಮ ಅಮೂಲ್ಯ ಸಮಯವನ್ನೆ ಹಾಳುಮಾಡಿಕೊಳ್ಳುವ ಸಂದರ್ಭ ಬಂದೊದಗಿದೆ. ಹೀಗಾಗಿ ಗಡಿಭಾಗದ ಜನರಿಗೆ ಇದರಿಂದಾಗಿ ಖರ್ಚುವೆಚ್ಚದ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲರ ಹಿತದೃಷ್ಟಿಯಿಂದ ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕೆಂದು ಚಿಂಚಲಿಯ ಅಲ್ಲಮಪ್ರಭು ಶ್ರೀಗಳು ಹೇಳಿದ್ರು.
ಒಟ್ಟಿನಲ್ಲಿ ಕಳೆದ 25 ವರ್ಷಗಳಿಂದಲೂ ಚಿಕ್ಕೋಡಿ ಜಿಲ್ಲೆಗಾಗಿ ಹೋರಾಟ ಮುಂದುವರೆದಿದೆ. ಚಿಕ್ಕೋಡಿ ಜಿಲ್ಲೆಯಾದರೆ, ಗಡಿಭಾಗದ ಜನರಿಗೆ ಹಾಗೂ ಬಹುತೇಕರಿಗೆ ಅನುಕೂಲವಾಗುವುದಂತೂ ಸುಳ್ಳಲ್ಲ. ಆದ್ರೆ ಚಿಕ್ಕೋಡಿ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟ ರಾಜಕೀಯ ಗಾಳವಾಗುತ್ತಿರುವುದು ದುರ್ದೈವವೇ ಸರಿ.
ವರದಿ: ವಿನಾಯಕ್ ಗುರವ್, ಟಿವಿ 9, ಚಿಕ್ಕೋಡಿ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:45 am, Fri, 16 December 22