ಬೆಳಗಾವಿ: ಚಾಲಕನ ನಿಯಂತ್ರಣತಪ್ಪಿ ಕಾಲುವೆಗೆ ಕಾರು ಪಲ್ಟಿಯಾಗಿದ್ದು ಇಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಬಳಿ ನಡೆದಿದೆ. ಮಹಾದೇವ ಚಿಗರಿ(26), ಸುರೇಶ್ ಬಡಚಿ(27) ಮೃತರು.
MH 05 AB 6674 ನಂಬರ್ನ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣತಪ್ಪಿ ಹಲ್ಯಾಳ ಏತ ನೀರಾವರಿ ಕಾಲುವೆಗೆ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದು ಶ್ರೀಕಾಂತ್ ನಡುವಿನಮನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಬಂದು ಕಾರ್ಯಾಚರಣೆ ನಡೆಸಿ ಕಾರನ್ನು ಕಾಲುವೆಯಿಂದ ಮೇಲೆತ್ತಿದ್ದಾರೆ. ಕೃಷ್ಣಾ ನದಿ ನೀರು ಹೆಚ್ಚಾಗಿ ಹರಿಯುವ ಹಿನ್ನೆಲೆ ಕಾಲುವೆಗೆ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದೆ. ಘಟನೆಯಲ್ಲಿ ಚಾಲಕನ ನಿರ್ಲಕ್ಷವೇ ಕಾರಣ ಎಂದು ತಿಳಿದುಬಂದಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಓಮ್ನಿ ವ್ಯಾನ್ ಮೇಲೆ ಉರುಳಿದ ಲಾರಿ, ಓಮ್ನಿಯಲ್ಲಿದ್ದ ವ್ಯಕ್ತಿ ಸಾವು
ಮಂಗಳೂರು ಹೊರವಲಯದ ಸುರತ್ಕಲ್ ಪ್ರದೇಶದಲ್ಲಿ ದುರ್ಘಟನೆಯೊಂದು ನಡೆದಿದೆ. ಉಡುಪಿ ಕಡೆಗೆ ಗೋಣಿ ಚೀಲಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ಬೇಕ್ ಹಾಕಿದಾಗ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಎಡಭಾಗಕ್ಕೆ ಮಗುಚಿ ಬಿದ್ದಿದೆ. ರಸ್ತೆ ಪಕ್ಕದಲ್ಲೇ ನಿಂತಿದ್ದ ಓಮಿನಿ ಕಾರ್ ಮೇಲೆ ಲಾರಿ ಬಿದ್ದಿದ್ದು ಲಾರಿ ಅಡಿಗೆ ಸಿಲುಕಿದ್ದ ಓಮಿನಿ ಕಾರ್ ನಲ್ಲಿದ್ದ ಚಿತ್ರಾಪುರ ನಿವಾಸಿ ಲೋಕೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಆದ್ರೆ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೆಟ್ರೋ ಸ್ಟೇಷನ್ಗೆ ಗುದ್ದಿದ ನ್ಯಾನೋ ಕಾರು
ಬೆಂಗಳೂರಿನ ವಿಧಾನಸೌಧ ಮೆಟ್ರೋ ಸ್ಟೇಷನ್ಗೆ ನ್ಯಾನೋ ಕಾರು ಗುದ್ದಿದ್ದು ಕಾರು ಗುದ್ದಿದ್ದ ರಭಸಕ್ಕೆ ಮೂರು ಟಯರ್ ಬ್ಲಾಸ್ಟ್ ಆಗಿದೆ. ವಿಧಾನಸೌಧದಿಂದ ಬಿಬಿಎಂಪಿ ಕೇಂದ್ರ ಕಚೇರಿ ಕಡೆಗೆ ಹೋಗುವಾಗ ಘಟನೆ ನಡೆದಿದೆ. ಬಿಬಿಎಂಪಿ ಸಿಬ್ಬಂದಿ ವಿಜಯ್ ಕುಮಾರ್ ಅನ್ನೋರಿಗೆ ಸೇರಿದ ಕಾರು ಇದಾಗಿದ್ದು ಫುಟ್‌ಪಾತ್ ಪ್ರವೇಶಿಸಿ ಮೆಟ್ರೋ ಕಂಪೌಂಡ್ ಗೆ ಕಾರು ಗುದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಬ್ಬನ್ ಪಾರ್ಕ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಗಲಾಟೆ ವೇಳೆ ಬ್ಲೇಡ್ನಿಂದ ಹಲ್ಲೆ
ಜೂಜಾಟದ ವಿಚಾರವಾಗಿ 1000 ರೂಪಾಯಿಗೆ ಗಲಾಟೆ ನಡೆದಿದ್ದು ಬ್ಲೇಡ್ ನಿಂದ ಹಲ್ಲೆ ನಡೆಸಿ ಇಬ್ಬರು ಯುವಕರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಸಂಕೇಶ್ವರ ಪಟ್ಟಣದ ವಡ್ಡರ ಗಲ್ಲಿಯ ನಿವಾಸಿಗಳಾದ ಸಂತೋಷ ವಡ್ಡರ (25) ಹಾಗೂ ಪರಶುರಾಮ ವಡ್ಡರ (28) ಹಲ್ಲೆಗೊಳಗಾದ ವ್ಯಕ್ತಿಗಳು.
ಹಲ್ಲೆಕೋರ ದೇವದಾಸ್ ಹುದಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಗೊಳಗಾದ ಇಬ್ಬರು ಯುವಕರಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ಮಾಡಿ ಪರಾರಿಯಾದ ದೇವದಾಸ್ ನನ್ನ ಪೊಲೀಸರು ಬಂಧಿಸಿದ್ದಾರೆ. ಘಟನೆ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 5:22 pm, Fri, 8 July 22