ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ (Uttara Karnataka) ಎಂದೇ ಪರಿಗಣಿಸಲ್ಪಟ್ಟು ಈ ಭಾಗದ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ಹಾಡಿ ಅಭಿವೃದ್ಧಿಗೆ ಅನುಕೂಲ ಆಗಲಿ ಅಂತಾ ಬೆಳಗಾವಿಯಲ್ಲಿ ಸುವರ್ಣ ಸೌಧವನ್ನ (Belagavi Suvarna Soudha) ನಿರ್ಮಾಣ ಮಾಡಲಾಯಿತು. ಮಹಾರಾಷ್ಟ್ರ ಸರ್ಕಾರವೂ ಗಡಿ ವಿವಾದ ವಿಚಾರವಾಗಿ ಸದಾ ತಕರಾರು ತೆಗೆಯುತ್ತಿದ್ದಕ್ಕೆ ಮತ್ತು ಬೆಳಗಾವಿಯ ಎಂಇಎಸ್ ಪುಂಡರಿಗೆ ಬಿಸಿ ಮುಟ್ಟಿಸಲು, ಜೊತೆಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸಂದೇಶ ಸಾರಲು ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ ಪುಂಡರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಈ ಶಕ್ತಿ ಸೌಧವನ್ನ ನಿರ್ಮಾಣ ಮಾಡಿ ಇಂದಿಗೆ ಬರೋಬ್ಬರಿ ಹತ್ತು ವರ್ಷ ತುಂಬಿದೆ. ಆದರೆ ಹತ್ತರ ಸಂಭ್ರಮ ಎಲ್ಲಿಯೂ ಕಾಣಿಸುತ್ತಿಲ್ಲ ಸುವರ್ಣ ಸೌಧ ಇದೆ ಅನ್ನೋದನ್ನೂ ಮರೆತು ಬಿಡ್ತಾ ರಾಜ್ಯ ಸರ್ಕಾರ ಅನ್ನೋ ಮಟ್ಟಿಗೆ ನಿರ್ಲಕ್ಷ್ಯ ರಾಚುತ್ತಿದೆ. ಇದೆಲ್ಲದರ ನಡುವೆ ಬೆಳಗಾವಿಯ ಸುವರ್ಣ ಸೌಧದ ಇಂದಿನ ಚಿತ್ರಣವನ್ನ ನೋಡಿದ್ರೇ ಭೂತದ ಬಂಗಲೆಯಾಗಿ ಈ ಶಕ್ತಿ ಸೌಧ ಮಾರ್ಪಡುತ್ತಿದೆಯಾ ಅಂತಾನೂ ಜನ ಮಾತನಾಡಿಕೊಳ್ಳುವ ಮಟ್ಟಿಗೆ ಕಟ್ಟಡದ ಪರಿಸ್ಥಿತಿ ಇದೆ…
ಸುವರ್ಣ ಸೌಧ ನಿರ್ಮಾಣದ ಹಿನ್ನೆಲೆ ಎನು? ಯಾವ ಉದ್ದೇಶಕ್ಕೆ ಸೌಧ ನಿರ್ಮಾಣ ಆಯ್ತು…!
2006ರ ಬಿಜೆಪಿ-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ನಡೆಸಲು ಪ್ಲ್ಯಾನ್ ಮಾಡಿ, ಅದರಂತೆ ಡಿಸೆಂಬರ್ ನಲ್ಲಿ ಚಳಿಗಾಲ ಅಧಿವೇಶನವನ್ನ ನಡೆಸಿದ್ದರು. 2006ರಲ್ಲಿ ಬೆಳಗಾವಿಯಲ್ಲಿ ಮೊದಲ ವಿಧಾನಮಂಡಲ ಅಧಿವೇಶನ ನಗರದ ಕೆಎಲ್ಇ ಸಂಸ್ಥೆಯ ಜೆಎನ್ಎಂಸಿ ಆವರಣದಲ್ಲಿ ನಡೆಯುತ್ತೆ. ಇದೇವೇಳೆ, ಮಹಾರಾಷ್ಟ್ರ ಸರ್ಕಾರವೂ ಗಡಿ ವಿವಾದ ವಿಚಾರವಾಗಿ ಸದಾ ತಕರಾರು ತೆಗೆಯುತ್ತಲೇ ಇತ್ತು. ಅದಕ್ಕೆ ಬಿಸಿ ಮುಟ್ಟಿಸಲು, ಜತೆಗೆ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಸಂದೇಶ ಸಾರಲು ಇಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸುವ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಯಿತು.
ಸುವರ್ಣ ಸೌಧ ನಿರ್ಮಾಣಕ್ಕೆ ಅಸ್ತು ಎಲ್ಲೆಲ್ಲಿ ಶಂಕುಸ್ಥಾಪನೆ ಕಾರ್ಯ…
2007ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಎಚ್.ಡಿ ಕುಮಾರಸ್ವಾಮಿ ಅವರು ಬೆಳಗಾವಿಯ ವ್ಯಾಕ್ಸಿನ್ ಡಿಪೋದಲ್ಲಿ ಸುವರ್ಣ ಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಆದ್ರೇ ವ್ಯಾಕ್ಸಿನ್ ಡಿಪೋದಲ್ಲಿ ಬಹಳಷ್ಟು ಅರಣ್ಯವಿದ್ದು ಈ ಅರಣ್ಯ ಸಂಪತ್ತು ಹಾಳಾಗುತ್ತೆ ಅಂತಾ ಸುವರ್ಣಸೌಧ ನಿರ್ಮಾಣಕ್ಕೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾದ ಕಾರಣ ಅಲ್ಲಿ ಸೌಧ ಸ್ಥಾಪನೆ ವಿಚಾರವನ್ನ ಕೈಬಿಡಲಾಯಿತು.
ಇದೆಲ್ಲದರ ನಡುವೆ 2008ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಅಂದಿನ ಸ್ಪೀಕರ್ ಜಗದೀಶ ಶೆಟ್ಟರ್ ನೇತೃತ್ವದ ಸಮಿತಿ ಬೆಳಗಾವಿ ತಾಲೂಜಿನ ಹಲಗಾ ಬಸ್ತವಾಡ ಗ್ರಾಮಗಳ ಬಳಿಯ ಜಾಗ ಪರಿಶೀಲನೆ ಮಾಡಿ ಅಲ್ಲಿ ಸುವರ್ಣ ಸೌಧ ನಿರ್ಮಾಣಕ್ಕೆ ಜಾಗ ಅಂತಿಮಗೊಳಿಸಿತು. 2009ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತೊಮ್ಮೆ ಸುವರ್ಣಸೌಧ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ಸುವರ್ಣ ಸೌಧವನ್ನ 2012ರ ಅಕ್ಟೋಬರ್ 11ರಂದು ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಉದ್ಘಾಟನೆ ಮಾಡಿದ್ರು. ಈ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲರೂ ಕೂಡ ಭಾಗಿಯಾಗಿದ್ದರು.
ಸುವರ್ಣ ಸೌಧದ ವಿಸ್ತೀರ್ಣ ಹಾಗೂ ಖರ್ಚು ವೆಚ್ಚ ಎಷ್ಟು ಗೊತ್ತಾ…
ಬೆಳಗಾವಿಯ ಸುವರ್ಣ ಸೌಧವನ್ನ ಬರೋಬ್ಬರಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 127 ಎಕರೆ ವಿಸ್ತೀರ್ಣದಲ್ಲಿ ಸುವರ್ಣ ಸೌಧ ನಿರ್ಮಾಣವಾಗಿದೆ. 2007 ರಿಂದ 2012ರ ವರೆಗೆ ಕಟ್ಟಡದ ನಿರ್ಮಾಣದ ಕಾರ್ಯ ನಡೆದಿದ್ದು, 4+1 ಅಂತಸ್ತು ಸೌಧ ಹೊಂದಿದೆ. 300 ಜನ ಏಕಕಾಲದಲ್ಲಿ ಕುಳಿತುಕೊಳ್ಳಬಹುದಾದ ವಿಧಾನಸಭೆ ಹಾಲ್ ಸಹ ಇದೆ. ನೂರು ಜನ ಕುಳಿತುಕೊಳ್ಳಬಹುದಾದ ಪರಿಷತ್ ಹಾಲ್ ಹಾಗೂ 450 ಜನ ಸಾಮರ್ಥ್ಯದ ಸೆಂಟ್ರಲ್ ಹಾಲ್, 38 ಸಚಿವರ ಪ್ರತ್ಯೇಕ ಕೊಠಡಿಗಳು, ಸಭೆ ನಡೆಸಲು 14 ಸಭಾಂಗಣ ಇವೆ. ಬ್ಯಾಂಕ್ವೆಟ್ ಹಾಲ್, ಸಚಿವಾಲಯ ಸಿಬ್ಬಂದಿಗೆ ಕೊಠಡಿ, ಶಾಸಕಾಂಗ ಸಭೆ ನಡೆಸಲು ಪ್ರತ್ಯೇಕ ಕೊಠಡಿಗಳನ್ನು ಸೌಧ ಒಳಗೊಂಡಿದೆ.
ಬೆಳಗಾವಿಯ ಸುವರ್ಣ ಸೌಧದ ನಿರ್ವಹಣೆಗೆ ಒಂದು ವರ್ಷಕ್ಕೆ 5 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. 2.5 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನ ನಿರ್ವಹಣೆ, ಸ್ವಚ್ಛತೆ ಹಾಗೂ 2.5. ಕೋಟಿ ವೆಚ್ಚದಲ್ಲಿ ವಿದ್ಯುತ್ ಬಿಲ್, ಇತರೆ ನಿರ್ವಹಣೆ ಖರ್ಚು ಮಾಡಲಾಗುತ್ತಿದೆ. 10 ವರ್ಷದಲ್ಲಿ 8 ಅಧಿವೇಶ ನಡೆಸಿದ ರಾಜ್ಯ ಸರ್ಕಾರ, 80 ದಿನಗಳ ಅಧಿವೇಶನ ನಡೆಸಿದೆ. ಅಂದರೆ ಒಂದೊಂದು ಅಧಿವೇಶನವೂ ಕೇವಲ 10 ದಿನಕ್ಕೆ ಸಿಮೀತವಾಗಿದೆ. ಕೊವಿಡ್ ನೆಪದಲ್ಲಿ 2 ವರ್ಷ ಅಧಿವೇಶನ ನಡೆದಿಲ್ಲ. ಸದ್ಯ ಸುವರ್ಣ ಸೌಧದಲ್ಲಿ ರಾಜ್ಯ ಮಾಹಿತಿ ಆಯೋಗದ ಕಚೇರಿ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಪ್ರಾದೇಶಿಕ ಕಚೇರಿ ಹಾಗೂ ಜಿಲ್ಲಾ ಮಟ್ಟದ 22 ಕಚೇರಿಗಳು ಕೆಲಸ ನಿರ್ವಿಸುತ್ತಿವೆ. ಒಂದು ಅಂಚೆ ಕಚೇರಿ, ಒಂದು ಬ್ಯಾಂಕ್ ಸಹ ಕಾರ್ಯಗತವಾಗಿದೆ.
ಸುವರ್ಣಸೌಧಕ್ಕೆ 10 ವರ್ಷ ಕಳೆದ್ರೂ ಈಡೇರದ ಬೇಡಿಕೆಗಳು…
ಬೆಳಗಾವಿಯಲ್ಲಿ ಸುವರ್ಣ ಸೌಧ ನಿರ್ಮಾಣವಾದ ಸಂದರ್ಭದಲ್ಲಿ ಇಡೀ ಉತ್ತರ ಕರ್ನಾಟಕದ ಜನ ಸಂಭ್ರಮಿಸಿದ್ದರು. ನಮ್ಮ ಸಮಸ್ಯೆಗಳು ಇನ್ನು ಮುಂದೆ ಶೀಘ್ರವೇ ಇತ್ಯರ್ಥವಾಗುತ್ತದೆ. ನಮಗೂ ಒಂದು ಶಕ್ತಿ ಕೇಂದ್ರ ಸಿಕ್ಕಿತು ಎಂದು ಹರ್ಷಿಸಿದ್ದರು. ಆದರೆ ಸೌಧ ನಿರ್ಮಾಣದ ಬಳಿಕ ಬಂದ ಸರ್ಕಾರಗಳು ಸೌಧಕ್ಕೆ ಶಕ್ತಿ ತುಂಬಲೇ ಇಲ್ಲ. ಕೇವಲ ಭರವಸೆಯಲ್ಲಿಯೇ ಕಾಲ ಕಳೆದವು. ಸುವರ್ಣ ಸೌಧ ಕೇವಲ ಕಟ್ಟಡವಾಗಿಯೇ ಉಳಿಯಿತು ಹೊರತು ಶಕ್ತಿ ಕೇಂದ್ರ ಆಗಲೇ ಇಲ್ಲ. ಸೌಧಕ್ಕೆ ಕಚೇರಿ ಸ್ಥಳಾಂತರ ಮಾಡಿ ಎಂದು ಎಷ್ಟೇ ಸಲ ಹೋರಾಟ ಮಾಡಿದರೂ ಸರ್ಕಾರ ಈ ಬಗ್ಗೆ ತಲೆ ಕೆಡಸಿಕೊಂಡಿಲ್ಲ. ಈಗ ಜನರ ಗಮನ ಸೆಳೆಯಲು ಸೌಧದಲ್ಲಿ ರಾಣಿ ಚನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದೆ. ಇದು ಭಾವನಾತ್ಮಕವಾಗಿ ಸೆಳೆಯುವ ಯತ್ನ ಮಾತ್ರವೇ ಆಗಿದೆ ಅಂತಿದ್ದಾರೆ ಕನ್ನಡಪರ ಹೋರಾಟಗಾರರು. ಇದು ವಾಸ್ತವೂ ಹೌದು. (ವರದಿ: ಸಹದೇವ ಮಾನೆ, ಟಿವಿ 9, ಬೆಳಗಾವಿ)