ಯುದ್ಧದ ಎಫೆಕ್ಟ್: ಗ್ಯಾಸ್ ಅಭಾವದ ಬೆನ್ನಲ್ಲೇ ರೋಗಿಗಳಿಗೂ ಶಾಕ್, ಈ ವಾರದಿಂದಲೇ ಔಷಧ ಬೆಲೆ ಏರಿಕೆ

ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮ ಸಂಕಷ್ಟಕ್ಕೀಡಾಗಿದೆ. ಇದರ ಬೆನ್ನಲ್ಲೇ ಜಾಗತಿಕ ಯುದ್ಧದ ಎಫೆಕ್ಟ್‌ನಿಂದಾಗಿ ಏಪ್ರಿಲ್‌ನಿಂದ ಅಗತ್ಯ ಔಷಧಗಳ ಬೆಲೆ ಶೇ 15-20 ರಷ್ಟು ಏರಿಕೆಯಾಗುವ ಆತಂಕ ಶುರುವಾಗಿದೆ. ಯಾವೆಲ್ಲ ಔಷಧಗಳು ದುಬಾರಿಯಾಗಲಿವೆ ಎಂಬ ಮಾಹಿತಿ ಇಲ್ಲಿದೆ.

ಯುದ್ಧದ ಎಫೆಕ್ಟ್: ಗ್ಯಾಸ್ ಅಭಾವದ ಬೆನ್ನಲ್ಲೇ ರೋಗಿಗಳಿಗೂ ಶಾಕ್, ಈ ವಾರದಿಂದಲೇ ಔಷಧ ಬೆಲೆ ಏರಿಕೆ
ಸಾಂದರ್ಭಿಕ ಚಿತ್ರ
Image Credit source: tv9
Edited By:

Updated on: Apr 01, 2026 | 7:23 PM

ಬೆಂಗಳೂರು, ಏಪ್ರಿಲ್ 1: ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ಜಾಗತಿಕ ಪೂರೈಕೆ ಸರಪಳಿಯ (Supply Chain) ಮೇಲೆ ತೀವ್ರ ಪರಿಣಾಮ ಬೀರಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ವಾರಗಳಿಂದ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ (Commercial LPG) ತೀವ್ರ ಕೊರತೆ ಎದುರಾಗಿದೆ. ಇದರ ನೇರ ಪರಿಣಾಮ ಹೋಟೆಲ್ ಉದ್ಯಮದ ಮೇಲೆ ಬಿದ್ದಿದ್ದು, ಹೋಟೆಲ್‌ಗಳು ಪರದಾಡುವಂತಾಗಿದೆ. ಈ ಸಂಕಷ್ಟದ ನಡುವೆಯೇ ಈಗ ಔಷಧಗಳ ಬೆಲೆಯೂ ಏರಿಕೆಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಸಾಮಾನ್ಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಔಷಧಗಳ ಮೇಲೆ ಯುದ್ಧದ ಕರಿನೆರಳು

ಕಚ್ಚಾ ತೈಲ ಮತ್ತು ಪೆಟ್ರೋಕೆಮಿಕಲ್ಸ್‌ ಬೆಲೆ ಏರಿಕೆಯಾಗಿರುವುದರಿಂದ ಮಾತ್ರೆಗಳ ಪ್ಯಾಕೇಜಿಂಗ್‌ಗೆ ಬಳಸುವ ಫಾಯಿಲ್ಸ್ ತಯಾರಿಕೆ ವೆಚ್ಚ ಹೆಚ್ಚಾಗಿದೆ. ಈ ಕಾರಣದಿಂದಾಗಿ ಏಪ್ರಿಲ್ ಮೊದಲ ವಾರದಿಂದ ಔಷಧಗಳ ದರ ಶೇ 15 ರಿಂದ 20 ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಯಾವೆಲ್ಲ ಔಷಧಗಳ ಬೆಲೆ ಏರಿಕೆ?

ಪ್ಯಾರಸಿಟಮಾಲ್, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಗ್ಯಾಸ್ಟ್ರಿಕ್ ಮಾತ್ರೆಗಳು ಹಾಗೂ ಕೆಮ್ಮಿನ ಸಿರಪ್ ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಅಗತ್ಯ ಔಷಧಗಳ ಬೆಲೆ ಏರಿಕೆಯಾಗಲಿದೆ. ಇದರೊಂದಿಗೆ ಸೌಂದರ್ಯವರ್ಧಕಗಳು (Cosmetics) ಮತ್ತು ಮಕ್ಕಳ ಉತ್ಪನ್ನಗಳ ಬೆಲೆಯೂ ಹೆಚ್ಚಾಗಲಿದೆ ಎಂದು ಬೆಂಗಳೂರು ನಗರ ಡ್ರಗ್ಸ್ ಅಂಡ್ ಕೆಮಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಮಾಯಣ್ಣ ತಿಳಿಸಿದ್ದಾರೆ.

ಔಷಧ ಬೆಲೆ ಏರಿಕೆ ಬಗ್ಗೆ ಆರೋಗ್ಯ ಸಚಿವರು ಹೇಳಿದ್ದೇನು?

ಔಷಧ ದರ ಏರಿಕೆ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಔಷಧ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಪಾಲಿಸಿಯ ಮೇಲೆ ಅವಲಂಬಿತವಾಗಿದೆ. ಯುದ್ಧದ ಎಫೆಕ್ಟ್‌ನಿಂದ ದರ ಏರಿಕೆಯಾದರೆ ಅದು ನಮ್ಮ ಕೈಯಲ್ಲಿ ಇಲ್ಲ. ಆದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಔಷಧದ ಕೊರತೆಯಾಗದಂತೆ ನಾವು ಕ್ರಮ ಕೈಗೊಳ್ಳುತ್ತೇವೆ. ಹೆಚ್ಚಿನ ದರ ನೀಡಿಯಾದರೂ ಔಷಧ ಖರೀದಿ ಮಾಡಿ ಜನರಿಗೆ ತಲುಪಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್, ಎಲ್​ಪಿಜಿ, ನ್ಯಾಚುರಲ್ ಗ್ಯಾಸ್ ಪೂರೈಕೆ ಹೇಗಿದೆ? ಸರ್ಕಾರದಿಂದ ಮಾಹಿತಿ

ಒಟ್ಟಿನಲ್ಲಿ ವಾಣಿಜ್ಯ ಗ್ಯಾಸ್ ಕೊರತೆ ಬಳಿಕ ಈಗ ಔಷಧಗಳ ಬೆಲೆ ಏರಿಕೆ ಬಿಸಿ ಜನರಿಗೆ ತಟ್ಟಲಿದ್ದು, ಮುಂದಿನ ದಿನಗಳಲ್ಲಿ ಏನೆಲ್ಲ ಸಮಸ್ಯೆಯಾಗಲಿದೆ ಎಂದು ಕಾದು ನೋಡಬೇಕಿದೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us