ಸರ್ಕಾರದ ಮುಖ್ಯಕಾರ್ಯದರ್ಶಿ ವಿರುದ್ಧ ಲಂಚ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಸಿಸಿಬಿ ವಶಕ್ಕೆ

ಮುಡಾ (MUDA) ಹಗರಣ ಬಯಲಿಗೆಳೆದ ಪ್ರಸಿದ್ಧಿಯಾದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇದೀಗ ರಾಜ್ಯ ಸರ್ಕಾರದ ವಿರುದ್ಧ ಕೋಟ್ಯಾಂತರ ರೂಪಾಯಿ ಲಂಚ ಆರೋಪ ಮಾಡಿದ್ದು, ಇದು ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಇದೀಗ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.

ಸರ್ಕಾರದ ಮುಖ್ಯಕಾರ್ಯದರ್ಶಿ ವಿರುದ್ಧ ಲಂಚ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ಸಿಸಿಬಿ ವಶಕ್ಕೆ
ಸ್ನೇಹಮಯಿ ಕೃಷ್ಣ
Edited By:

Updated on: Feb 20, 2026 | 4:03 PM

ಬೆಂಗಳೂರು/ಮೈಸೂರು, (ಫೆಬ್ರವರಿ 20): ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ (Shalini Rajaneesh) ವಿರುದ್ಧ ಕೋಟ್ಯಾಂತರ ರೂಪಾಯಿ ಲಂಚ (Bribe) ಆರೋಪ ಮಾಡಿದ ಸಾಮಾಜಿಕ ಕಾರ್ಯಕರ್ತ ಸ್ನೇಹಮಹಿ ಕೃಷ್ಣ  (snehamayi krishna) ವಿರುದ್ಧ ದೂರು ದಾಖಲಾಗಿದ್ದು, ಇದರ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಸ್ನೇಹಮಹಿ ಕೃಷ್ಣ ಅವರನ್ನು  ಬಂಧಿಸಿದ್ದಾರೆ.  ಮೂಡಾ ಮಾಜಿ ಆಯುಕ್ತ ಡಿಬಿ ನಟೇಶ್ ಬಡ್ತಿ ಪಡೆಯಲು ಶಾಲಿನಿ ರಜನೀಶ್ ಗೆ ಲಂಚ ನೀಡಿದ್ದಾರೆ ಎಂದು ಸ್ನೇಹಮಯಿಕೃಷ್ಣ ಗಂಭೀರ ಆರೋಪ ಮಾಡಿದ್ದರು. ಈ ಆರೋಪ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ನಟೇಶ್ ದೂರು ನೀಡಿದ್ದು, ಈ ದೂರಿನ ಅನ್ವಯ ಸಿಸಿಬಿಯ ಸೈಬರ್ ಕ್ರೈಮ್ ಠಾಣೆಯಲ್ಲಿ ಎಫ್​​ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಸಿಸಿಬಿ ಅಧಿಕಾರಿಗಳು ಸ್ನೇಹಮಯಿ ಕೃಷ್ಣನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ದ್ವನಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಪಪ್ರಚಾರ ಮಾಡಿದ್ದ ಆರೋಪ ಮೇಲೆ ಮೊದಲು ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದೆ. ಬಳಿಕ ಅವರನ್ನು ಅರೆಸ್ಟ್ ಮಾಡಿದೆ. ಮತ್ತೊಂದೆಡೆ ನ್ಯಾಯಾಲಯದಲ್ಲಿ ಸರ್ಚ್ ವಾರಂಟ್ ಪಡೆದು, ಸ್ನೇಹಮಯಿ ಕೃಷ್ಣ ಅವರ ಮೈಸೂರು ನಿವಾಸದ ಮೇಲೆ ಬೆಂಗಳೂರು ಸಿಸಿಬಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ.

ಇದನ್ನೂ ನೋಡಿ: ಸರ್ಕಾರದ ಮುಖ್ಯ ಕಾರ್ಯದರ್ಶಿ ವಿರುದ್ಧವೂ 1.60 ಕೋಟಿ ರೂ. ಲಂಚ: ಸಂಚಲನ ಮೂಡಿಸಿದ ಸ್ನೇಹಮಯಿ ಕೃಷ್ಣ ಆರೋಪ

ಸ್ನೇಹಮಯಿ ಕೃಷ್ಣ ಬಂಧನ ಬಗ್ಗೆ ಸಿಸಿಬಿ ಪತ್ರಿಕಾ ಪ್ರಕಟಣೆ

ಇನ್ನು ಸ್ನೇಹಮಯಿ ಕೃಷ್ಣ ಬಂಧನದ ಬಗ್ಗೆ ಸಿಸಿಬಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸ್ನೇಹಮಯಿ ಕೃಷ್ಣನನ್ನು ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದೆ. ದೂರದಾರರಾದ ಡಿ.ಬಿ ನಟೇಶ್ ಕೆಎಎಸ್ ಹಿರಿಯ ಅಧಿಕಾರಿ ಹಾಗೂ ಈ ಹಿಂದೆ MUDA ಆಯುಕ್ತರು ನೀಡಿದ ದೂರಿನ ಮೇರೆಗೆ, ಮೈಸೂರು ನಿವಾಸಿ ಶ್ರೀ ಸ್ನೇಹಮಯಿ ಕೃಷ್ಣ ಎಂಬವರು ತಮ್ಮ ಫೇಸ್‌ಬುಕ್ ಖಾತೆಯ ಮೂಲಕ ದೂರದಾರರ ಫೋಟೋ ಹಾಗೂ ನಕಲಿ ದಾಖಲೆಗಳನ್ನು ಹಾಗೂ ಧ್ವನಿ ಕ್ಲಿಪ್ ಅನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಿ ದೂರದಾರರನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿರುವ ಕುರಿತು ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಿನಾಂಕ 18.02.2026 ರಂದು ಪ್ರಕರಣ ದಾಖಲಾಗಿ ತನಿಖೆ ಕೈಗೊಳ್ಳಲಾಗಿದೆ.

ತನಿಖೆ ವೇಳೆ ತನಿಖಾಧಿಕಾರಿಗಳು ದೂರದಾರರಿಂದ ಹಾಗೂ ಸಾಮಾಜಿಕ ಜಾಲತಾಣದಿಂದ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದ ಧ್ವನಿ ಕ್ಲಿಪ್ ಕುರಿತು ತನಿಖೆ ನಡೆಸಿದ್ದಾರೆ. ಮಾನ್ಯ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಆರೋಪಿಯ ಮನೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಶೋಧ ಕಾರ್ಯ ನಡೆಸಲಾಗಿದೆ. ಇದಲ್ಲದೆ, ಈ ಪ್ರಕರಣದ ಆರೋಪಿ ಸ್ನೇಹಮಯಿ ಕೃಷ್ಣ ಮೈಸೂರು ಅವರಿಗೆ ನೋಟಿಸ್ ಜಾರಿ ಮಾಡಿ ಆರೋಪಿಯನ್ನು ಠಾಣೆಗೆ ಹಾಜರುಪಡಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ

ಮುಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಬಡ್ತಿ ಪಡೆಯುವುದಕ್ಕಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ಗೆ ಲಂಚ ನೀಡಿದ್ದಾರೆಂದು ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು. ಈ ಸಂಬಂಧ ನಟೇಶ್ ದೂರು ನೀಡಿದ್ದರು. ತನ್ನದಲ್ಲದ ಧ್ವನಿಯನ್ನು ಮೈಸೂರಿನಲ್ಲಿ ನಕಲಿ ಆಡಿಯೋ ಸೃಷ್ಟಿಸಿ ಜಾಲತಾಣದಲ್ಲಿ ಹಾಕಿ ಅಪಪ್ರಚಾರ ಮಾಡಿದ್ದಾರೆಂದು ಆರೋಪಿಸಿ ಸಿಸಿಬಿಗೆ ದೂರು ನೀಡಿದ್ದರು. ಈ ಸಂಬಂಧ ಬಿಎನ್​​ಎಸ್ 335, 336, 340​​ & 66D, 66C ಐಟಿ ಆ್ಯಕ್ಟ್ ಅಡಿ ಸೈಬರ್​ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್​​ಐಆರ್​ ದಾಖಲಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Fri, 20 February 26