
ಬೆಂಗಳೂರು, ಜನವರಿ 28: ಮನೆಗೆಲಸ ಮಾಡುತ್ತಿದ್ದಿದ್ದ ದಂಪತಿ ಅದೇ ಮನೆಯಲ್ಲಿ ಬರೋಬ್ಬರಿ 18 ಕೋಟಿ ರೂ. ಬೆಲೆ ಬಾಳುವ ವಸ್ತುಗಳನ್ನು ದೋಚಿ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ನಡೆದಿದೆ. ಯಮಲೂರಿನ ಬಿಲ್ಡರ್ ಶಿವಕುಮಾರ್ ಮನೆಯಲ್ಲಿ ಕಳ್ಳತನ ನಡೆದಿದ್ದು, 20 ದಿನದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ದಂಪತಿ ದಿನೇಶ್ ಮತ್ತು ಕಮಲಾ ಎಂಬವರೇ ಆರೋಪಿಗಳು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ ನಡೆಸಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದ್ದು, ಜನವರಿ 25ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಕಾಶ, ಮಯಾ ವಿಷ್ಣು ಎಂಬುವವರ ಮೂಲಕ ಶಿವಕುಮಾರ್ ಮನೆಯಲ್ಲಿ ಹೌಸ್ ಕೀಪಿಂಗ್ ಕೆಲಸಕ್ಕೆ ದಂಪತಿ ಸೇರಿದ್ದರು. ಜನವರಿ 25ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿಗಳು ನೆಲಮಹಡಿ, ಮೊದಲ ಮಹಡಿಯ ಬೆಡ್ ರೂಂಗಳ ಲಾಕರ್ ಮುರಿದು ಕಳ್ಳತನ ನಡೆಸಿದ್ದಾರೆ. 11.5 ಕೆ.ಜಿ ಚಿನ್ನ ಮತ್ತು ವಜ್ರ, 5 ಕೆಜಿ ಬೆಳ್ಳಿ, 11.5 ಲಕ್ಷ ನಗದು ಎಗರಿಸಿ ಎಸ್ಕೇಪ್ ಆಗಿದ್ದು, ಮನೆಯ ಇತರ ಕೆಲಸಗಾರರು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಅವರು ದೂರವಾಣಿ ಕರೆ ಮಾಡಿ ಮನೆಯವರಿಗೆ ವಿಷಯ ತಿಳಿಸಿದ್ದು, ಅವರು ಬಂದು ಪರೀಕ್ಷಿಸಿದಾಗ ಲಾಕರ್‌ಗಳನ್ನು ಕಬ್ಬಿಣದ ಸಲಾಕೆಯಿಂದ ಮುರಿದು ಕಳವು ಮಾಡಿರೋದು ಗೊತ್ತಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಾರತ್ತಹಳ್ಳಿ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರೆದ ದರೋಡೆ ಪ್ರಕರಣಗಳು; ಬೆಂಗಳೂರಿನಲ್ಲಿ ಗನ್ ತೋರಿಸಿ ಬಂಗಾರದ ಅಂಗಡಿ ಲೂಟಿ
ಮನೆ ಕಳ್ಳತನಕ್ಕೆ ಯತ್ನಿಸಿದ್ದ ಆರೋಪಿಗಳನ್ನು ಗ್ರಾಮಸ್ಥರೇ ಹಿಡಿದಿರುವ ಘಟನೆ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ ನಿನ್ನೆ ನಡೆದಿದೆ. ಆಂಧ್ರದಿಂದ ಬಂದಿದ್ದ ಕಳ್ಳಲರು ಮನೆಯೊಂದಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದರು. ಮಾಹಿತಿ ತಿಳಿದಿದ್ದೇ ತಡ ಮನೆ ಸುತ್ತುವರಿದ ಗ್ರಾಮಸ್ಥರು, ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳು ಆಂಧ್ರ ಪ್ರದೇಶದ ಚಿತ್ತೂರು ಮೂಲದವರು ಎನ್ನಲಾಗಿದೆ. ಕಳ್ಳರಿಂದ ಒಡವೆ, ಹಣ ಮತ್ತು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದ್ದು, tಉರುವೇಕೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.