ಬೆಂಗಳೂರು: ಬೆಂಗಳೂರು ಹಾಗೂ ಕಾರವಾರ ನಡುವೆ ಸಂಚರಿಸುವ ರೈಲಿಗೆ ಪಂಚಗಂಗಾ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದ್ದು, ಕಾರವಾರ-ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್ ಪಾಸ್ಟ್ ರೈಲಿಗೆ ಪಂಚಗಂಗಾ ಎಕ್ಸ್‌ಪ್ರೆಸ್ ಎಂಬ ಹೆಸರಿಡುವುದಾಗಿ ತಿಳಿಸಿದೆ. ಉಡುಪಿ ಜಿಲ್ಲೆಯ 5 ಪ್ರಮುಖ ಪುಣ್ಯ ನದಿಗಳು ಸಂಗಮಿಸಿ ಸೃಷ್ಠಿಯಾಗುವ ಪಂಚಗಂಗಾವಳಿ ನದಿಯ ಹೆಸರನ್ನು ಆಧರಿಸಿ ಪಂಚಗಂಗಾ ಎಕ್ಸ್‌ಪ್ರೆಸ್ ಎಂಬ ಹೆಸರನ್ನು ಆರಿಸಲಾಗಿದ್ದು, ಬೆಂಗಳೂರು ಹಾಗೂ ಕಾರವಾರ ನಡುವಿನ ನೂತನ ರೈಲು ಈ ಹೆಸರಿನಲ್ಲಿ ಸಂಚರಿಸಲಿದೆ.
ಸಂಸದೆ ಶೋಭಾ ಕರಂದ್ಲಾಜೆ ಕೂಡಾ ಈ ಬಗ್ಗೆ ಮನವಿ ಸಲ್ಲಿಸಿದ್ದು, ಅದನ್ನೀಗ ಕೇಂದ್ರ ರೈಲ್ವೆ ಸಚಿವಾಲಯ ಪುರಸ್ಕರಿಸಿದೆ. ಇದೇ ವಿಚಾರದ ಕುರಿತಾಗಿ ನಿನ್ನೆ (ಶುಕ್ರವಾರ) ಸಂಸದೆ ಶೋಭಾ ಕರಂದ್ಲಾಜೆ ಮಾಧ್ಯಮ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಕರಾವಳಿಯ ಬಹುಮುಖ್ಯ ಪುಣ್ಯ ಕ್ಷೇತ್ರಗಳ ಮೂಲಕ ಹರಿಯುವ ಪಂಚಗಂಗಾ ನದಿ, ಜಿಲ್ಲೆಯ ತೀರ್ಥ ಕ್ಷೇತ್ರ, ಪ್ರವಾಸೊದ್ಯಮ, ಮೀನುಗಾರಿಕೆ, ಕೃಷಿ ಹಾಗೂ ಜನಜೀವನಕ್ಕೆ ಆಧಾರವಾಗಿದೆ. ಈ ಕಾರಣದಿಂದ ಬೆಂಗಳೂರು – ಕಾರವಾರ ರೈಲಿಗೆ ಪಂಚಗಂಗಾ ಎನ್ನುವ ಹೆಸರಿಡಬೇಕು ಎಂದು ಅನೇಕ ಸಮಯದ ಹಿಂದೆಯೇ ಅಂದಿನ ರೈಲ್ವೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿಯವರಿಗೆ ಮನವಿ ಸಲ್ಲಿಸಲಾಗಿತ್ತು ಎಂದಿದ್ದಾರೆ.
ಇದೀಗ ಜನರ ಅಪೇಕ್ಷೆಯನ್ನು ಗೌರವಿಸಿ, ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಪಂಚಗಂಗಾ ಎಕ್ಸ್‌ಪ್ರೆಸ್ ಎಂಬ ಹೆಸರನ್ನು ಕರಾವಳಿಯ ಜೀವನಾಡಿಯದ ಬೆಂಗಳೂರು-ಕಾರವಾರ ರೈಲಿಗೆ ನಾಮಕರಣ ಮಾಡಿದ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವಾಲಯಕ್ಕೆ ಧನ್ಯವಾದ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಕರಾವಳಿ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಸೇತು ಆಗಿರುವ ಕಾರವಾರ-ಬೆಂಗಳೂರು ವಯಾ ಪಡೀಲ್ ಬೈಪಾಸ್ ಸೂಪರ್ ಪಾಸ್ಟ್ ರೈಲು ಪ್ರತಿದಿನ ಓಡಾಡಲಿದ್ದು, ಇನ್ನುಮುಂದೆ ಅದನ್ನು ಪಂಚಗಂಗಾ ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತದೆ. ಕಾರವಾರ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಜನ ರೈಲನ್ನು ಸದುಪಯೋಗಪಡಿಸಿಕೊಳ್ಳಬೇಕು.. ಕಡಿಮೆ ಪ್ರಯಾಣ ದರ, ಸುಲಭ ಸಂಚಾರದ ಜತೆ ಮೂಲಭೂತ ಸೌಕರ್ಯಗಳು ರೈಲಿನಲ್ಲಿ ಇರುವ ಕಾರಣ ಬೆಂಗಳೂರಿಗೆ ಓಡಾಡುವ ಜನರು ಇದನ್ನು ಬಳಸಿ ಎಂದು ಶೋಭಾ ಕರಂದ್ಲಾಜೆ ಇದೇ ಸಂದರ್ಭದಲ್ಲಿ ಕರೆ ನೀಡಿದ್ದಾರೆ.
ಇದನ್ನೂ ಓದಿ:
ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣದಲ್ಲಿ ಭಾರತದ ಮೊದಲ ಸುರಂಗ ಅಕ್ವೇರಿಯಂ ಆರಂಭ