ಬೆಂಗಳೂರು, ಮಾರ್ಚ್.02: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಘಟನೆ ನಡೆದ ಬೆನ್ನಲ್ಲೇ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಬಾಂಬ್ ಸ್ಫೋಟ ಸಂಭವಿಸಿದ್ದು ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸದ್ಯ ಈ ಘಟನೆ ಸಂಬಂಧ ಸ್ಫೋಟಕ ಮಾಹಿತಿಯೊಂದು ಹೊರ ಬಿದ್ದಿದೆ. ರಾಜ್ಯದಲ್ಲಿ ಈ ಹಿಂದೆ ನಡೆದಿದ್ದ ಸ್ಫೋಟಗಳಿಗೂ ಈಗಿನ ಸ್ಫೋಟಕ್ಕೂ ಸಾಮ್ಯತೆ ಇದೆ ಎಂಬ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸರು ಈ ಹಿಂದೆ ನಡೆದಿರುವ ಸ್ಫೋಟಗಳು ಹಾಗೂ ರಾಮೇಶ್ವರಂ ಕೆಫೆ ಸ್ಫೋಟ ನಡುವಿನ ಸಾಮ್ಯತೆ ಬಗ್ಗೆ ಪರಿಶೀಲನೆ ನಡೆಸಿದ್ದು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೂ ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಇದೆ ಎಂಬ ಅಂಶವನ್ನು ಪತ್ತೆ ಹಚ್ಚಿದ್ದಾರೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಳಸಿದ್ದ ಸ್ಫೋಟಕ ಸಾಮಗ್ರಿಯನ್ನೇ ರಾಮೇಶ್ವರಂ ಕೆಫೆ ಸ್ಫೋಟದಲ್ಲೂ ಬಳಕೆ ಮಾಡಲಾಗಿದೆ.
ಎರಡೂ ಕಡೆ ನಡೆದ ಸ್ಫೋಟದ ವೇಳೆ ಹೊರಸೂಸಿರುವ ಹೊಗೆ ಒಂದೇ ಮಾದರಿಯಲ್ಲಿದೆ. ಈ ಎರಡೂ ಸ್ಫೋಟಗಳಲ್ಲೂ ಒಂದೇ ಮಾದರಿಯ ವಸ್ತುಗಳ ಬಳಕೆ ಮಾಡಲಾಗಿದೆ. ಎರಡೂ ಕಡೆ ಬ್ಯಾಟರಿ, ಡಿಟೊನೇಟರ್ಗಳು, ನಟ್ಟು, ಬೋಲ್ಟ್ ಬಳಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತಷ್ಟು ಚುರುಕಾಗಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಕ್ ಮತ್ತು ಸಹಚರರನ್ನು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಸದ್ಯ ಶಾರಿಕ್ ಌಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್: ಈವರೆಗೆ ಏನೆಲ್ಲಾ ಬೆಳವಣಿಗೆಗಳು ಆಯ್ತು? ಇಲ್ಲಿದೆ ವಿವರ
ಇನ್ನು ನಿನ್ನೆಯಿಂದ ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಐಎಸ್ಡಿ, ಎನ್ಐಎ ಬಳಿಕ ರಾಮೇಶ್ವರಂ ಕೆಫೆಗೆ ತಡರಾತ್ರಿ ಕೇಂದ್ರ ಗುಪ್ತಚರ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಯಾಂಪಲ್ಸ್ ಸಂಗ್ರಹ ಮಾಡಿದೆ. ಪ್ರಕರಣದ ಗಂಭೀರತೆ ಅರಿತು ಕೇಂದ್ರ ತನಿಖಾ ತಂಡಗಳು ಭೇಟಿ ನೀಡಿವೆ. ಎಫ್ಎಸ್ಎಲ್ ತಂಡ, ಸೋಕೊ ಟೀಂ, ಬಾಂಬ್ ಸ್ಕ್ವಾಡ್ ಭೇಟಿ ನೀಡಿ ಸ್ಯಾಂಪಲ್ಸ್ ಸಂಗ್ರಹ ಮಾಡುತ್ತಿದೆ.
ಪೊಲೀಸರು, ವಿವಿಧ ತನಿಖಾ ಸಂಸ್ಥೆಗಳಿಂದ ತನಿಖೆ ಚುರುಕುಗೊಂಡಿದೆ. ತನಿಖಾ ತಂಡಗಳು ಇಡೀ ರಾತ್ರಿ ತನಿಖೆ ನಡೆಸಿವೆ. ಘಟನೆ ಸಂಬಂಧ ಆರೋಪಿಗಳ ಗುರುತು ಪತ್ತೆಗಾಗಿ ತನಿಖೆ ಮುಂದುವರಿದಿದೆ. ಘಟನಾ ಸ್ಥಳದ ಬಳಿಯ ಸಿಸಿಟಿವಿಯಲ್ಲಿ ಆರೋಪಿಯ ಚಲನವಲನ ದೃಶ್ಯ ಸೆರೆಯಾಗಿದೆ. ಆರೋಪಿಯ ಗುರುತು ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಸದ್ಯ ಈ ಹಿಂದೆ UAPA ಪ್ರಕರಣದಲ್ಲಿ ಭಾಗಿಯಾಗಿದ್ದ ಹಾಗೂ ಪ್ರಕರಣದ ಆರೋಪಿಗಳ ಜೊತೆ ಸಂಪರ್ಕದಲ್ಲಿದ್ದವರ ವಿಚಾರಣೆ ನಡೆಯುತ್ತಿದೆ.
ಆರೋಪಿಯ ಕೃತ್ಯದ ಪ್ಯಾಟ್ರನ್ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಆದರೆ ಆರೋಪಿ ಯಾರು ಎಂಬುದು ಮಾತ್ರ ಖಚಿತಗೊಂಡಿಲ್ಲ. ಘಟನಾ ಸ್ಥಳದ ಬಗ್ಗೆ ಪಕ್ಕಾ ಮಾಹಿತಿ ಇದ್ದವನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ರಾಮೇಶ್ವರಂ ಕೆಫೆಯಲ್ಲಿನ ಸಿಟಿಟಿವಿ ಹೊರತುಪಡಿಸಿ ಬೇರೆಲ್ಲೂ ಆರೋಪಿ ಸಿಕ್ಕಿ ಬಿದ್ದಿಲ್ಲಾ. ಫುಟ್ಪಾತ್ ಮೇಲೆ ನಡೆದಿದ್ದರೆ ಸಿಸಿಟಿವಿಯಲ್ಲಿ ಆರೋಪಿ ದೃಶ್ಯ ಸೆರೆಯಾಗ್ತಿತ್ತು. ಬಾಂಬ್ ಇಟ್ಟವನು ನೇರ ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಕೆಫೆ ನಂತ್ರ ನೂರು ಮೀಟರ್ ಹೋಗಿರುವ ಬಗ್ಗೆಯೂ ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ. ಈ ಮೊದಲೇ ಸಿಸಿಟಿವಿಯಲ್ಲೆಲ್ಲಿ ಇದೆ. ಹೇಗೆ ತಪ್ಪಿಸಿಕೊಳ್ಳಬೇಕು ಎಂಬ ಪ್ಲಾನ್ ಮಾಡಿಕೊಂಡೇ ಬಾಂಬ್ ಇಟ್ಟಿರುವ ಶಂಕೆ ವ್ಯಕ್ತವಾಗಿದೆ.
ರಾತ್ರಿ ಐದಕ್ಕೂ ಹೆಚ್ಚು ಜನರಿಂದ ಮಾಹಿತಿ ಪಡೆಯುವ ಕೆಲಸ ಮಾಡಿರುವ ತನಿಖಾ ತಂಡಗಳು, ಕೃತ್ಯದ ಸಮಯದಲ್ಲಿ ಅನುಮಾನ ರೀತಿಯಲ್ಲಿ ಬಂದಿದ್ದ ಫೋನ್ಗಳು, ನಿನ್ನೆ ಕೃತ್ಯದ ಸಮಯದಲ್ಲಿ ಸ್ಪಾಟ್ ನಲ್ಲಿ ಇದ್ದ, ಈಗ ಸ್ವಿಚ್ ಆಫ್ ಆಗಿರುವ ಫೋನ್ ನಂಬರ್ಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:57 am, Sat, 2 March 24