ಆನೇಕಲ್​: 4 ವರ್ಷದ ಬಾಲಕಿ ಮೇಲೆ ಮಲತಂದೆ ಕ್ರೌರ್ಯ; ಸಿಗರೇಟ್​ನಿಂದ ಸುಟ್ಟು ವಿಕೃತಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 17, 2024 | 4:56 PM

ಬೆಂಗಳೂರಿನ ಗಿರಿನಗರದಲ್ಲಿ ತಾಯಿ ಮತ್ತು ಪ್ರಿಯಕರ ಸೇರಿ ಮಗುವಿನ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣ ಮಾಸುವ ಮುನ್ನವೇ ಆನೇಕಲ್​ನಲ್ಲಿಯೇ ಮತ್ತೊಂದು ಅಂತಹುದೇ ಘಟನೆ ನಡೆದಿದೆ. ನಾಲ್ಕು ವರ್ಷದ ಬಾಲಕಿ ಮೇಲೆ ಮಗುವಿನ ಮಲತಂದೆ ನಿರಂತರವಾಗಿ ಹಲ್ಲೆ ನಡೆಸಿದ್ದು, ವಾಟರ್ ಹೀಟರ್ ಮತ್ತು ಸಿಗರೇಟ್​ನಿಂದ ಸುಟ್ಟು ಅಮಾನವೀಯತೆ ಮೆರೆದಿದ್ದಾನೆ.‌

ಆನೇಕಲ್​: 4 ವರ್ಷದ ಬಾಲಕಿ ಮೇಲೆ ಮಲತಂದೆ ಕ್ರೌರ್ಯ; ಸಿಗರೇಟ್​ನಿಂದ ಸುಟ್ಟು ವಿಕೃತಿ
ಹೆಬ್ಬಗೋಡಿಯಲ್ಲಿ ಮಗುವಿನ ಮೇಲೆ ಮಲತಂದೆ ಹಲ್ಲೆ
Follow us on

ಬೆಂಗಳೂರು ಗ್ರಾಮಾಂತರ, ಮಾ.17: ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿಯಲ್ಲಿ(Hebbagodi). ಸುಮಾರು 4 ವರ್ಷ ವಯಸ್ಸಿನ ದಿಶಾ ಎಂಬ ಮಗುವಿನ ಮೇಲೆ ಮಲತಂದೆ ಮಂಜುನಾಥ್ ಎಂಬಾತ ಕುಡಿದ ಮತ್ತಿನಲ್ಲಿ ವಾಟರ್ ಹೀಟರ್ ಮತ್ತು ಸಿಗರೇಟ್​ನಿಂದ ಸುಟ್ಟು ಕ್ರೌರ್ಯ ಮೆರೆದಿದ್ದಾನೆ. ಮಾತ್ರವಲ್ಲದೆ ಕುಕ್ಕರ್​ನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಮಲತಂದೆ ಹಲ್ಲೆ ನಡೆಸಿದ್ದು, ಹೆತ್ತ ತಾಯಿ ಮಂಜುಳಾ ಈ ಬಗ್ಗೆ ಚಕಾರವೆತ್ತಿಲ್ಲ. ಆದ್ರೆ, ಪುಟ್ಟ ಮಗುವಿನ ಮೇಲಿನ ಕ್ರೌರ್ಯ ಕಂಡು ರೋಸಿ ಹೋದ ಸ್ಥಳೀಯರು, ಮಾ.15 ರ ರಾತ್ರಿ ಮಲತಂದೆ ಮಂಜುನಾಥನಿಗೆ ಧರ್ಮದೇಟು ನೀಡಿ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಇನ್ನು ಮೂಲತಃ ಚಿಕ್ಕಬಳ್ಳಾಪುರ ಮೂಲದ ಮಲತಂದೆ ಮಂಜುನಾಥ್, ಪತಿ ಅಕಾಲಿಕ ಸಾವಿನಿಂದ ಇಬ್ಬರು ಮಕ್ಕಳ ಜೊತೆ ಒಂಟಿಯಾಗಿದ್ದ ಮಂಜುಳಾ ಜೊತೆ ವಾಸವಾಗಿದ್ದಾನೆ. ಕುಡಿತದ ಚಟ ಜೊತೆಗೆ ತಮ್ಮ ಖಾಸಗಿ ಕ್ಷಣಗಳಿಗೆ ಮಗು ಅಡ್ಡಿಯೆಂದು ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಎಣ್ಣೆ ಹೊಡೆಯಲು ಸ್ನಾಕ್ಸ್, ಸಿಗರೇಟ್ ತರಲು ರಾತ್ರಿ ವೇಳೆ ಮಗುವನ್ನು ಹೊರಗಡೆ ಕಳುಹಿಸುತ್ತಿದ್ದ. ಮಗು ಒಪ್ಪದಿದ್ದರೆ ಸಿಗರೇಟ್, ಹೀಟರ್ ಮತ್ತು ಕುಕ್ಕರ್ ಹೀಗೆ ಕೈಗೆ ಸಿಕ್ಕಿದ ವಸ್ತುಗಳಿಂದ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಮೊನ್ನೆ ಸಹ ಹಲ್ಲೆ ‌ನಡೆಸುತ್ತಿದ್ದಾಗ ಸ್ಥಳೀಯರು ಮಲತಂದೆಗೆ ಧರ್ಮದೇಟು ನೀಡಿ ಮಗುವನ್ನು ರಕ್ಷಣೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನಲ್ಲೊಂದು ಅಮಾನುಷ ಕೃತ್ಯ, ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಹಲ್ಲೆ

ಒಟ್ಟಿನಲ್ಲಿ ಮಕ್ಕಳಿಲ್ಲ ಎಂದು ಅದೆಷ್ಟೋ ಮಂದಿ ತಾಯಂದಿರುವ ಪರಿತಪಿಸುತ್ತಿದ್ದಾರೆ. ಆದ್ರೆ, ಇಲ್ಲಿ ಮಲತಂದೆ ಪುಟ್ಟ ಬಾಲಕಿ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದು, ತಾಯಿ ಹಲ್ಲೆ ಮಾಡಲು ಸಹಕರಿಸಿದ್ದಾಳೆ. ಸದ್ಯ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಸಧ್ಯ ಮಗುವನ್ನು ಡಿಸಿಪಿಓ ಸುಪರ್ದಿಗೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ