ಹೊಸಕೋಟೆ: ಜಮೀನು ವಿಚಾರಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ದೊಡ್ಡಗಟ್ಟಿಗನಹಬ್ಬೆ ಗ್ರಾಮದಲ್ಲಿ ನಡೆದಿದೆ. ಜಮೀನಿಗೆ ಕಲ್ಲು ಹಾಕುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದೆ.
ಗ್ರಾಮದ ಜಮೀನಿನಲ್ಲಿ ಗೋದಾಮು ನಿರ್ಮಾಣ ಸಂಬಂಧ ಖಾಸಗಿ ಜಮೀನಿಗೆ ಕಲ್ಲು ಹಾಕುವ ವಿಚಾರವಾಗಿ ಕಿರಿಕ್ ನಡೆದಿತ್ತು. ಈ ವೇಳೆ ಸಚಿವ ಎಂಟಿಬಿ ನಾಗರಾಜ್ ಆಪ್ತ, ಬಿಜೆಪಿ ಮುಖಂಡ ಜನಾರ್ದನ್, ಹೊಸಕೋಟೆಯ ಕಾಂಗ್ರೆಸ್ ಮುಖಂಡ ಸುನಿಲ್ ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿ ದರ್ಪ ಮೆರೆದಿರುವ ಆರೋಪ ಕೇಳಿ ಬಂದಿದೆ. 2 ಸಲ ಗಾಳಿಯಲ್ಲಿ, 4 ಸಲ ಭೂಮಿಗೆ ಗುಂಡುಹಾರಿಸಿದ್ದಾರಂತೆ. 6 ಸಲ ಫೈರಿಂಗ್ ಮಾಡಿದ್ರೂ ಅದೃಷ್ಟವಶಾತ್ ಸಾವು-ನೋವು ಸಂಭವಿಸಿಲ್ಲ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈಗಾಗಲೇ ಫೈರ್ ಮಾಡಿದ ಗುಂಡುಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಮುಖಂಡನ ಮೇಲೆ ಗುಂಡು ಹಾರಿಸಲು ಯತ್ನ ಹಿನ್ನೆಲೆ ಸ್ಥಳಕ್ಕೆ ಸ್ಥಳೀಯ ಶಾಸಕ ಶರತ್ ಬಚ್ಚೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಜೊತೆಗೆ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಎಸ್‌ಪಿ ಪುರುಷೋತ್ತಮ್, ಹೊಸಕೋಟೆ ಡಿವೈಎಸ್‌ಪಿ ಉಮಾಶಂಕರ್ ಭೇಟಿ ನೀಡಿದ್ದಾರೆ.
ಕೆರೆಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರುಪಾಲು
ನೆಲಮಂಗಲ: ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿ ನೀರು ಪಾಲಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕುದುರೆಗೆರೆ ಕೆರೆಯಲ್ಲಿ ನಡೆದಿದೆ. ತೋಟದಗುಡ್ಡದಹಳ್ಳಿ ತೇಜಸ್ (15)ಮೃತ ವಿದ್ಯಾರ್ಥಿ. ಕೆರೆಯ ಆಳ ತಿಳಿಯದೆ ಮಂಜುನಾಥನಗರ ಸರ್ಕಾರಿ ಶಾಲೆಯ 5 ವಿದ್ಯಾರ್ಥಿಗಳ ಟೀಮ್ ಈಜಲು ಹೋಗಿದ್ದರು. ಈ ಪೈಕಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದು, ನಾಲ್ಕು ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Published On - 5:18 pm, Fri, 22 July 22