ಬೆಂಗಳೂರು: ರಾಸುಗಳನ್ನು ಕಾಡುತ್ತಿರುವ ಚರ್ಮಗಂಟು ಸಾಂಕ್ರಾಮಿಕ ರೋಗಭೀತಿಯ (Lumpy Skin Disease) ಹಿನ್ನೆಲೆಯಲ್ಲಿ ಈ ಬಾರಿ ದೊಡ್ಡಬಳ್ಳಾಪುರ ತಾಲ್ಲೂಕು ಘಾಟಿ ಸುಬ್ರಹ್ಮಣ್ಯದ (Ghati Subramanya) ದನಗಳ ಜಾತ್ರೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ನಿಷೇಧಿಸಿದ್ದರು. ಆದರೆ ಈ ನಿರ್ಬಂಧವನ್ನು ರೈತರು ತಿರಸ್ಕರಿಸಿದ್ದು, ರೋಗಭೀತಿಯ ನಡುವೆ ಸ್ವಯಂಪ್ರೇರಿತರಾಗಿ ಜಾತ್ರೆ ನಡೆಸಲು ಮುಂದಾಗಿದ್ದಾರೆ. ನಿರ್ಬಂಧ ಮಾಡಿರುವುದಾಗಿ ನೋಟಿಸ್ ನೀಡಿದರೂ ರೈತರು ಹಿಂದೆ ಸರಿಯಲಿಲ್ಲ. ಹೀಗಾಗಿ ಸ್ಥಳದಿಂದ ರೈತರನ್ನು ಹೊರಗೆ ಕಳಿಸಲು ನೂರಾರು ಪೊಲೀಸರನ್ನು ನಿಯೋಜಿಸಲಾಯಿತು. ಪೊಲೀಸರ ಮಾತಿಗೂ ರೈತರು ಕಿವಿಗೊಡಲಿಲ್ಲ.
‘ಎತ್ತುಗಳನ್ನು ಸಾಕಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡಿದ್ದೇವೆ. ಒಂದು ತಿಂಗಳ ಹಿಂದೆ, ಡಿಸೆಂಬರ್ನಲ್ಲಿಯೇ ಜಾತ್ರೆ ನಡೆಯಬೇಕಿತ್ತು. ಚರ್ಮಗಂಟು ರೋಗ ಹೆಚ್ಚಾಗಿದ್ದರಿಂದ ಜಿಲ್ಲಾಧಿಕಾರಿ ಅವಕಾಶ ಕೊಟ್ಟಿರಲಿಲ್ಲ. ಸಂಕ್ರಾಂತಿ ನಂತರ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದರು. ಅದರಂತೆ ನಾವು ಜಾತ್ರೆ ನಡೆಸಲು ಬಂದಿದ್ದೇವೆ’ ಎಂದು ರೈತರು ಅಲವತ್ತುಕೊಂಡರು.
ದಕ್ಷಿಣ ಭಾರತದ ಪ್ರಸಿದ್ಧ ದನಗಳ ಜಾತ್ರೆ
ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವಕ್ಕೂ ಮೊದಲು ದನಗಳ ಜಾತ್ರೆ ನಡೆಯುವುದು ವಾಡಿಕೆ. ದಕ್ಷಿಣ ಭಾರತದ ಪ್ರಸಿದ್ಧ ದನಗಳ ಜಾತ್ರೆಗಳಲ್ಲಿ ಇದೂ ಒಂದು. ಕರ್ನಾಟಕದ ವಿವಿಧ ಜಿಲ್ಲೆಗಳು ಮತ್ತು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ರೈತರು ಜಾತ್ರೆಗೆ ಬರುತ್ತಾರೆ. ಕೃಷಿ ಕೆಲಸಕ್ಕಾಗಿ ಎತ್ತುಗಳನ್ನು ಖರೀದಿಸುವ, ಮಾರುವ ವಹಿವಾಟು ಭರಾಟೆಯಿಂದ ನಡೆಯುತ್ತದೆ.
ಕಳೆದ ಡಿ 20ರಿಂದ ದನಗಳ ಜಾತ್ರೆ ನಡೆಯಬೇಕಿತ್ತು. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದನಗಳಿಗೆ ಚರ್ಮಗಂಟು ರೋಗ ಜಾಸ್ತಿಯಿದ್ದ ಕಾರಣದಿಂದ ದನಗಳ ಜಾತ್ರೆ ಮತ್ತು ಸಾಗಾಣಿಕೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ನವೆಂಬರ್ 30ರಿಂದ ಜನವರಿ 31ರವರೆಗೆ ನಿರ್ಬಂಧ ಆದೇಶ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದರು. ಜಾತ್ರೆಗೆಂದು ದನಗಳನ್ನು ಸಿದ್ಧಪಡಿಸಿದ್ದ ರೈತರು ಆರ್ಥಿಕವಾಗಿ ನಷ್ಟವಾಗುವ ಭೀತಿಯಿಂದ ಎತ್ತುಗಳನ್ನು ಜಾತ್ರೆಗೆ ಹೊಡೆದುಕೊಂಡು ಬಂದಿದ್ದಾರೆ. ಜನವರಿ 23ರ ವರೆಗೂ ದನಗಳ ಜಾತ್ರೆ ನಡೆಸಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
‘ಜಿಲ್ಲಾಧಿಕಾರಿ ಅನುಮತಿಯಿಲ್ಲದೆ ಜಾತ್ರೆ ನಡೆಸುವುದು ತಪ್ಪಾಗುತ್ತದೆ. ಘಾಟಿ ದೇವಾಲಯದಿಂದ ಜಾತ್ರೆಗೆ ಆಗಮಿಸಿರುವ ರೈತರಿಗೆ ಯಾವುದೇ ರೀತಿಯ ಸೌಲಭ್ಯ ನೀಡಲು ಸಾಧ್ಯವಿಲ್ಲ. ಜಿಲ್ಲಾಡಳಿತದ ಕಾಳಜಿಯನ್ನು ರೈತರು ಅರ್ಥ ಮಾಡಿಕೊಳ್ಳಬೇಕು’ ಎಂದು ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಡಿ.ನಾಗರಾಜ್ ವಿನಂತಿಸಿದ್ದಾರೆ.
Published On - 1:23 pm, Fri, 20 January 23