ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡನಲ್ಲಾಳ ಗ್ರಾಮದ ಮೋಹನ ಎಂಬಾತ ಕಳೆದ ಮೂರು ವರ್ಷಗಳ ಹಿಂದೆ ಕೊರೊನಾ ಸಂಧರ್ಭದಲ್ಲಿ ನೆರೆಯ ಆಂಧ್ರದಿಂದ ಭವಾನಿ ಎನ್ನುವ ಹುಡುಗಿಯನ್ನ ಮನೆಯವರ ಒಪ್ಪಿಗೆಯಂತೆ ಮದುವೆ ಮಾಡಿಕೊಂಡಿದ್ದ. 3ವರ್ಷಗಳಾಗುವುದರೊಳಗೆ ಹೆಂಡತಿಗೆ ವರದಕ್ಷಿಣೆ ಕೊಟ್ಟಿಲ್ಲವೆಂದು ಕಿರುಕುಳ ಕೊಡಲು ಶುರು ಮಾಡಿದ್ದಾನೆ. ಈ ಕಾರಣಕ್ಕೆ ತವರು ಮನೆಯವರು ಅಳಿಯನ ಮನೆ ಬಳಿಗೆ ಬಂದು ಪ್ರಶ್ನಿಸಿದ್ದಾರೆ. ಈ ವೇಳೆ ಎರಡು ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದಿದ್ದು ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪ್ರಶ್ನೆ ಮಾಡಿದ ಬಾವ ಮೈದನ ಮೇಲೆ ಮೋಹನ ಹಲ್ಲೆ ಮಾಡಿ ಕಾಲು ಮುರಿದಿದ್ದಾನಂತೆ.
ಮೊದಲಿಗೆ ಗ್ರಾಮದಲ್ಲಿ ಬಾವ ಮೈದ ಸೇರಿದಂತೆ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದು ಹಲ್ಲೆಗೊಳಗಾದವರು ಹೊಸಕೋಟೆ ಸರ್ಕಾರಿ ಆಸ್ವತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ವೇಳೆ ಆಸ್ವತ್ರೆ ಬಳಿಗೂ ಬಂದ ಅಳಿಯ ಮೋಹನ್ ಮತ್ತು ಆತನ ಕುಟುಂಬಸ್ಥರು ಆಸ್ವತ್ರೆ ಬಳಿಯಿದ್ದ ಮಹಿಳೆಯ ಕುಟುಂಬಸ್ಥರ ಮೇಲೆ ಮತ್ತೆ ಹಲ್ಲೆ ಮಾಡಿದ್ದು ಅಡ್ಡ ಬಂದ ಮಾವ ಜರ್ನಾಧನ್ ಅವರಿಗೆ ಚಾಕುವಿನಿಂದ ಇರಿದು ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಹಲ್ಲೆಯಿಂದ ಗಾಯಗೊಂಡ ಮಹಿಳೆಯ ಕುಟುಂಬಸ್ಥರು ಹೊಸಕೋಟೆ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ವತ್ರೆಗೆ ದಾಖಲಾಗಿದ್ದಾರೆ. ಇನ್ನು ಮೋಹನ್ ಇತ್ತೀಚೆಗೆ ಬೇರೆಯವರ ಜೊತೆಯಲ್ಲಿ ಅನೈತಿಕ ಸಂಬಂಧಗಳನ್ನ ಹೊಂದಿದ್ದು ಅದನ್ನ ಪ್ರಶ್ನಿಸಿದಕ್ಕೆ ನಮ್ಮ ಹುಡುಗಿಗೆ ಕಿರುಕುಳ ನೀಡಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ:ಪ್ಯಾರಿಸ್ ರೈಲು ನಿಲ್ದಾಣದಲ್ಲಿ ದುಷ್ಕರ್ಮಿಯಿಂದ 6 ಮಂದಿಗೆ ಚಾಕು ಇರಿತ
ಒಟ್ಟಾರೆ ಮದುವೆಯಾಗಿ ನೂರು ವರ್ಷ ಸುಖ ಸಂಸಾರ ನಡೆಸಬೇಕಿದ್ದ ಮಹಿಳೆ, ಗಂಡನ ಮದುವೆಯಾದ ಮೂರು ವರ್ಷಕ್ಕೆ ವಿಲನ್ ಆಗಿ ಬದಲಾಗಿದ್ದು ನಿಜಕ್ಕೂ ವಿಪರ್ಯಾಸ. ಇನ್ನು ಈ ಸಂಬಂಧ ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:08 am, Sun, 22 January 23