ದೇವನಹಳ್ಳಿ, ಜುಲೈ 14: ಜಮೀನಿನಲ್ಲಿ ಲೈಸೆನ್ಸ್ ಪಡೆಯದೆ ಸ್ಫೋಟಕಗಳನ್ನು ಬಳಸಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ಮಾಡುತ್ತಿರುವ ಆರೋಪದಡಿ ದಾಖಲಾದ ಎಫ್ಐಆರ್ ಸಂಬಂಧ ಚಿಕ್ಕಜಾಲ ಠಾಣಾ ಪೊಲೀಸರು ಆರ್ಆರ್ ನಗರದ ಬಿಜೆಪಿ ಶಾಸಕ ಎನ್ ಮುನಿರತ್ನ (N Munirathna) ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ನೋಟಿಸ್ ಕೊಟ್ಟ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ತಾಕೀತು ಮಾಡಲಾಗಿದೆ.
ಅಕ್ರಮ ಗಣಿಗಾರಿಕೆ ಆರೋಪ ಸಂಬಂಧ ಶಾಸಕ ಮುನಿರತ್ನ ವಿರುದ್ಧ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಎಪ್ಐಆರ್ ದಾಖಲಾಗಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ಇನ್ಸ್ಪೆಕ್ಟರ್ ಅವರು ನೋಟಿಸ್ ಜಾರಿ ಮಾಡಿದ್ದು, ಇಂದು ಅಥವಾ ನಾಳೆ ಮುನಿರತ್ನ ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಪ್ರಕರಣ ಸಂಬಂಧ ಈಗಾಗಲೇ ಮೂವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಇದನ್ನೂ ಓದಿ: ಜಿಲೆಟಿನ್ ಸ್ಫೋಟಿಸಲು ಲೈಸೆನ್ಸ್ ಇದೆ, ಅದು ಗಣಿಗಾರಿಕೆ ಅಲ್ಲ: ಶಾಸಕ ಮುನಿರತ್ನ ಸ್ಪಷ್ಟನೆ
ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಸ್ಫೋಟಿಸಿದ ಆರೋಪದಡಿ ಯಲಹಂಕ ತಹಶೀಲ್ದಾರ್ ಅನಿಲ್ ಅರಳೋಕರ್ ಅವರು ನೀಡಿದ ದೂರಿನ ಅನ್ವಯ ಚಿಕ್ಕಜಾಲ ಠಾಣಾ ಪೊಲೀಸರು ಶಾಸಕ ಮುನಿರತ್ನ, ಆನಂದನ್, ಗಣೇಶ್, ರಾಧಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಸ್ಫೋಟಕ ಕಾಯ್ದೆ 1884 US 9B(1b) , ಕರ್ನಾಟಕ ಭೂ ಕಂದಾಯ ಕಾಯ್ದೆ 1964ರಡಿ ಕೇಸ್ ದಾಖಲಾಗಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಸಂಬಂಧ ಪ್ರತಿಕ್ರಿಯೆ ನೀಡಿದ ಮುನಿರತ್ನ, ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ. ಗಣಿಗಾರಿಕೆ ಮಾಡಿದರೆ ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕು. ಮನೆ ಕಟ್ಟುವುದಕ್ಕೆ ಹಿಟಾಚಿ ಮೂಲಕ ಪಾಯ ತೆಗೆಯುತ್ತಿದ್ದೇನೆ. ಜಿಲೆಟಿನ್ ಸ್ಫೋಟಿಸಲು ಲೈಸೆನ್ಸ್ ಇದೆ, ಅದು ಗಣಿಗಾರಿಕೆ ಅಲ್ಲ. ಅದು ಖರೀದಿಸಿದ ಭೂಮಿ, ಸ್ವಂತ ಭೂಮಿ ಅಲ್ಲ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ