ಜಿಲೆಟಿನ್ ಸ್ಫೋಟಿಸಲು ಲೈಸೆನ್ಸ್ ಇದೆ, ಅದು ಗಣಿಗಾರಿಕೆ ಅಲ್ಲ: ಶಾಸಕ ಮುನಿರತ್ನ ಸ್ಪಷ್ಟನೆ
ಸ್ಫೋಟಕ ವಸ್ತುಗಳನ್ನು ಬಳಸಿ ಕಲ್ಲು ಬಂಡೆ ಹೊರ ತೆಗೆಯುತ್ತಿದ್ದಾರೆ ಎಂಬ ದೂರಿನ ಅನ್ವಯ ಶಾಸಕ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ಡಿಸಿಪಿ ಲಕ್ಷ್ಮೀ ಪ್ರಸಾದ್ ಹೇಳಿದ್ದಾರೆ. ಆದರೆ, ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ ಎಂದು ಮುನಿರತ್ನ ಹೇಳಿದ್ದಾರೆ.
ಬೆಂಗಳೂರು: ಮನೆ ಕಟ್ಟುವುದಕ್ಕೆ ಹಿಟಾಚಿ ಮೂಲಕ ಪಾಯ ತೆಗೆಯುತ್ತಿದ್ದೇನೆ ಎಂದು ಆರ್ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎನ್ ಮುನಿರತ್ನ (N Munirathna) ಹೇಳಿದ್ದಾರೆ. ಅನುಮತಿ ಪಡೆಯದೆ ಅಕ್ರಮವಾಗಿ ಜಿಲೆಟಿನ್ ಸ್ಫೋಟಿಸಿದ ಆರೋಪದಡಿ ಎಫ್ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ. ಗಣಿಗಾರಿಕೆ (Mining) ಮಾಡಿದರೆ ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕು. ಮನೆ ಕಟ್ಟುವುದಕ್ಕೆ ಹಿಟಾಚಿ ಮೂಲಕ ಪಾಯ ತೆಗೆಯುತ್ತಿದ್ದೇನೆ. ಜಿಲೆಟಿನ್ ಸ್ಫೋಟಿಸಲು ಲೈಸೆನ್ಸ್ ಇದೆ, ಅದು ಗಣಿಗಾರಿಕೆ ಅಲ್ಲ. ಅದು ಖರೀದಿಸಿದ ಭೂಮಿ, ಸ್ವಂತ ಭೂಮಿ ಅಲ್ಲ ಎಂದರು.
ಇನ್ನು ಎಫ್ಐಆರ್ ದಾಖಲಾಗಿರುವ ಬಗ್ಗೆ ಮಾತನಾಡಿದ ಈಶಾನ್ಯ ವಿಭಾಗದ ಡಿಸಿಪಿ ಲಕ್ಷ್ಮಿ ಪ್ರಸಾದ್, ಸರ್ವೆ ನಂಬರ್ 10ರಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬಳಸಿ ಕಲ್ಲು ಬಂಡೆ ಹೊರ ತೆಗೆಯುತ್ತಿದ್ದಾರೆ ಎಂಬ ದೂರಿನ ಅನ್ವಯ ಆರ್ಆರ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎನ್ ಮುನಿರತ್ನ ಸೇರಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದರು.
ಮುನಿರತ್ನ, ಆನಂದನ್, ಗಣೇಶ್, ರಾಧಮ್ಮ ಮಾಲೀಕತ್ವದಲ್ಲಿರುವ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ಕಲ್ಲು ಬಂಡೆ ಹೊರ ತೆಗೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿ ತಹಶೀಲ್ದಾರ್ಗೆ ದೂರು ನೀಡಿದ್ದರು. ಅದರಂತೆ ಶಾಸಕ ಮುನಿರತ್ನ ನಾಲ್ವರು ವಿರುದ್ಧ ಯಲಹಂಕ ತಹಶೀಲ್ದಾರ್ ಅವರು ದೂರು ನೀಡಿದ್ದು, ಎಫ್ಐಆರ್ ದಾಖಲಿಸಿ ನಾಲ್ವರಿಗೂ ನೋಟಿಸ್ ನೀಡಲಾಗಿದೆ. ಬಾಂಬ್ ಡಿಸ್ಪೋಸಲ್, ಎಫ್ಎಸ್ಎಲ್ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ ಎಂದು ಡಿಸಿಪಿ ಹೇಳಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಸರ್ಕಾರಿ ಜಮೀನು ಸೇರಿದಂತೆ ಖಾಸಗಿ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ಮಾಡಿದ್ದಾರೆ. ಇತ್ತೀಚೆಗೆ ಹುಣಸಮಾರನಹಳ್ಳಿಯ ಜಮೀನಿನಲ್ಲಿ ಗಣಿಗಾರಿಕೆ ವೇಳೆ ಜಿಲೆಟಿನ್ ಸ್ಫೋಟ ಮಾಡಿದ ಆರೋಪ ಕೇಳಿಬಂದಿತ್ತು. ಗಣಿ ವಿರುದ್ಧ ಗ್ರಾಮಸ್ಥರು ಧರಣಿ ಕೂಡ ನಡೆಸಿದ್ದರು. ಸದ್ಯ ನಾಲ್ವರ ವಿರುದ್ಧ ಸ್ಫೋಟಕ ಕಾಯ್ದೆ 1884 US 9B(1b) , ಕರ್ನಾಟಕ ಭೂ ಕಂದಾಯ ಕಾಯ್ದೆ 1964ರಡಿ ಕೇಸ್ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:07 pm, Thu, 13 July 23