ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ(Doddaballapura)ನಗರದ ನಿವಾಸಿಯಾದ ಕುಶಾಲ್ ದ್ವೀತಿಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದು, ತನ್ನ ಸ್ನೇಹಿತನಿಗೆ ಹಣ ಕೊಡುವ ಕುರಿತು ಆತನ ಜೊತೆಗೂಡಿ ಹಣ ಕೇಳಲು ಹೋಗಿದ್ದಾನೆ. ಈ ವೇಳೆ ಬೆಟ್ಟಿಂಗ್ ಹಣ ಕೊಡಲಿಲ್ಲವೆಂದು ಯುವಕನ ಮೇಲೆ ಡ್ರ್ಯಾಗರ್ನಿಂದ ಹಲ್ಲೆ ಮಾಡಿದ ಘಟನೆ ನಡೆದಿದೆ. ಹೌದು ಆನ್ಲೈನ್ ಗೇಮ್ನಲ್ಲಿ ಆರೋಪಿ ಮಹೇಶ್ ಮತ್ತು ಆಂಧ್ರದ ಯುವಕ ಗಗನ್ ಎಂಬಾತ ಆನ್ಲೈನ್ನಲ್ಲಿ ಬೆಟ್ಟಿಂಗ್ ಗೇಮ್ ಆಡಿದ್ದು, ಅದರಲ್ಲಿ ಹಣವನ್ನು ಗೆದ್ದಿದ್ದನಂತೆ. ಆದ್ರೆ, ಗೆದ್ದಿದ್ದ ಹಣವನ್ನ ನೀಡಲು ಹಿಂದೇಟು ಹಾಕಿದ್ದು, ಹಲವು ಭಾರಿ ಇಬ್ಬರು ವಾಗ್ವಾದವನ್ನ ಮಾಡಿಕೊಂಡಿದ್ದಾರೆ. ಆದ್ರೆ, ಎಷ್ಟೆ ಕೇಳಿದರೂ, ಗೆದ್ದ 500 ರೂಪಾಯಿ ನೀಡದ ಕಾರಣ, ಗಗನ್ ತನ್ನ ಸ್ನೇಹಿತ ಕುಶಾಲ್ನನ್ನ ಪಾರ್ಕ್ಗೆ ಕರೆದುಕೊಂಡು ಹೋಗಿ ಮಹೇಶ್ನ ಬಳಿ ಕೇಳಿದ್ದಾನೆ. ಆದ್ರೆ, ಈ ವೇಳೆ ಹಣ ಕೊಡಲ್ಲ ಎಂದು ಎರಡು ಗುಂಪುಗಳ ನಡುವೆ ಜಗಳವಾಗಿದ್ದು, ನೋಡ ನೋಡುತ್ತಿದ್ದಂತೆ ಆರೋಪಿ ಮಹೇಶ್ ಕುಶಾಲ್ ಮೇಲೆ ಹಲ್ಲೆ ನಡೆಸಿ ಡ್ರ್ಯಾಗರ್ನಿಂದ ಇರಿದು ಎಸ್ಕೇಪ್ ಆಗಿದ್ದಾನೆ.
ಇನ್ನು ಗಗನ್ ಜೊತೆ ಬಂದಿದ್ದ ಕುಶಾಲ್ ಹಣ ಕೇಳಿದ್ರೆ ಯಾಕೆ ಹೀಗೆ ಹೊಡೆತಿದ್ದಿರಾ ಎಂದು ಮಹೇಶನಿಗೆ ಪ್ರಶ್ನೆ ಮಾಡಿದ್ದನಂತೆ. ಇದಕ್ಕೆ ಮಹೇಶ ಇದಕ್ಕೂ ನಿನಗೂ ಸಂಬಂಧವಿಲ್ಲವೆಂದು ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಮಹೇಶ ತನ್ನ ಬಳಿ ಇದ್ದ ಡ್ರ್ಯಾಗರ್ ತೆಗೆದು ಕುಶಾಲನ ಕುತ್ತಿಗೆಗೆ ಮನಬಂದಂತೆ ಚುಚ್ಚಿದ್ದಾನೆ. ಚಾಕುವಿನಿಂದ ಹಲ್ಲೆಗೊಳಗಾದ ಕುಶಾಲ್ ಸ್ಥಳದಲ್ಲೆ ಕುಸಿದು ಬಿದ್ದಿದ್ದು, ಪುಂಡ ಯುವಕರ ಗ್ಯಾಂಗ್ ಅಲ್ಲಿಂದ ಎಸ್ಕೆಪ್ ಆಗಿತ್ತು. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಕುಶಾಲ್ ಇದೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇದನ್ನೂ ಓದಿ:ಆನ್ ಲೈನ್ ಬೆಟ್ಟಿಂಗ್ ಆ್ಯಪ್ ಹಾವಳಿ, ಶಿವಮೊಗ್ಗ ಪೊಲೀಸರಿಂದ ಕಾರ್ಯಾಚರಣೆ; 25 ಲಕ್ಷ ಹಣ ಸೀಜ್, ಕಿಂಗ್ ಪಿನ್ ಅಂದರ್
ಇನ್ನು ಗಲಾಟೆ ನಡೆದ ಪಾರ್ಕ್ ಬಳಿ ಪುಂಡರು ಸಾಯಂಕಾಲ ಆದ್ರೆ, ಸಾಕು ಮೊಬೈಲ್ ಹಿಡಿದುಕೊಂಡು ಗೇಮ್ ಆಡುತ್ತಾ, ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆಯಂತೆ. ಇನ್ನೂ ನಗರದಲ್ಲಿ ದಿನೇ ದಿನೇ ಪುಡಿರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದರು, ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಮಹೇಶ್ ಹಾಗೂ ಆತನ ಜೊತೆಯಲ್ಲಿದ್ದ ಮತ್ತೊಬ್ಬನನ್ನ ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಅದೇನೆ ಇರಲಿ ಓದಿ ಬುದ್ದಿವಂತರಾಗಬೇಕಿದ್ದ ಯುವಕರು ಆನ್ಲೈನ್ ಗೇಮ್ ಚಟಕ್ಕೆ ಬಿದ್ದು, ಹಣಗಳಿಸಲು ದುಶ್ಚಟಗಳಿಗೆ ಬಲಿಯಾಗುತ್ತಾ ಹವಾ ತೋರಿಸಲು ಹೋಗಿ ಜೀವವನ್ನೆ ತೆಗೆಯುವ ಹಂತಕ್ಕೆ ಹೋಗುತ್ತಿರುವುದಂತು ನಿಜಕ್ಕೂ ವಿಪರ್ಯಾಸ.
ವರದಿ: ನವೀನ್ ಟಿವಿ9 ದೇವನಹಳ್ಳಿ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ