ಕೆಲಸ ಮಾಡುತ್ತಿದ್ದ ಮಾಲೀಕನ ಹೆಂಡತಿ ಫೋಟೋ ತೆಗೆದುಕೊಂಡು ಬ್ಲಾಕ್ ಮೇಲ್; ನೆಲಮಂಗಲ ಠಾಣೆಯಲ್ಲಿ ದೂರು ದಾಖಲು

| Updated By: ಆಯೇಷಾ ಬಾನು

Updated on: Jul 13, 2023 | 9:50 AM

ನೀನು ನಿನ್ನ ಹೆಂಡತಿಯನ್ನ ಬಿಟ್ಟು ಬಿಡು, ನಾನು ಅವಳನ್ನ ಮದುವೆಯಾಗುತ್ತೇನೆ ಎಂದು ಗಂಡನ ಮೊಬೈಲ್‌ಗೆ ಕರೆ ಮಾಡಿ ಆರೋಪಿ ಬೆದರಿಸಿದ್ದು ಗಂಡ-ಹೆಂಡತಿ ದೂರು ದಾಖಲಿಸಿದ್ದಾರೆ.

ಕೆಲಸ ಮಾಡುತ್ತಿದ್ದ ಮಾಲೀಕನ ಹೆಂಡತಿ ಫೋಟೋ ತೆಗೆದುಕೊಂಡು ಬ್ಲಾಕ್ ಮೇಲ್; ನೆಲಮಂಗಲ ಠಾಣೆಯಲ್ಲಿ ದೂರು ದಾಖಲು
ಆರೋಪಿ ಅಬ್ರಾರ್
Follow us on

ನೆಲಮಂಗಲ: ತಾನು ಕೆಲಸ ಮಾಡುತ್ತಿದ್ದ ಮಾಲೀಕನ ಪತ್ನಿಯ ಫೋಟೋ ತೆಗೆದುಕೊಂಡು ಮಾಲೀಕನಿಗೆಯೇ ಕಳಿಸಿ ಬ್ಲಾಕ್ ಮೇಲ್(Blackmail) ಮಾಡುತ್ತಿದ್ದ ಆರೋಪಿ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ(Nelamangala Town Police Station) ಪ್ರಕರಣ ದಾಖಲಾಗಿದೆ. ನೆಲಮಂಗಲದ ರೇಣುಕಾನಗರದಲ್ಲಿ ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಬ್ರಾರ್ ಎಂಬ ಆರೋಪಿ ಕಳೆದ ನಾಲ್ಕು ತಿಂಗಳ ಹಿಂದೆ ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕನ ಹೆಂಡತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ, ಆದ್ರೆ ಮರ್ಯಾದೆಗೆ ಅಂಜಿ ದೂರು ನೀಡದೆ ಆತನನ್ನ ಕೆಲಸದಿಂದ ತೆಗೆದಿದ್ದರು. ಇದಾದ ಬಳಿಕ ಆರೋಪಿ ತನ್ನ ಮೊಬೈಲ್‌ನಲ್ಲಿ ಗೌಪ್ಯವಾಗಿ ಸೆರೆಹಿಡಿದಿದ್ದ ಮಹಿಳೆಯ ಫೋಟೋಗಳನ್ನ ಆತನ ಗಂಡನಿಗೆ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದಾನೆ.

ನೀನು ನಿನ್ನ ಹೆಂಡತಿಯನ್ನ ಬಿಟ್ಟು ಬಿಡು, ನಾನು ಅವಳನ್ನ ಮದುವೆಯಾಗುತ್ತೇನೆ ಎಂದು ಗಂಡನ ಮೊಬೈಲ್‌ಗೆ ಕರೆ ಮಾಡಿದ್ದಾನೆ. ಇಷ್ಟೆಲ್ಲಾ ಬೆಳವಣಿಗೆಗಳ ಬಳಿಕ ಆರೋಪಿ ಅಬ್ರಾರ್ ಕಿರುಕುಳಕ್ಕೆ ಬೇಸತ್ತು ಗಂಡ ಹೆಂಡತಿ ಇಬ್ಬರೂ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೂರಿನಲ್ಲಿರೋದೇನು?

ನನ್ನ ಗಂಡ ರೇಣುಕಾನಗರದಲ್ಲಿ ಕೋಳಿ ಅಂಗಡಿ ಇಟ್ಟುಕೊಂಡಿದ್ದಾರೆ. ಕೋಳಿ ಅಂಗಡಿಯಲ್ಲಿ 10ಜನ ಹುಡುಗರು ಕೆಲಸ ಮಾಡುತ್ತಿದ್ದು, ಸುಮಾರು 25 ವರ್ಷ ವಯಸ್ಸಿನ ಹೊಸಪೇಟೆ ತಾಲೂಕು ಚಿತ್ತೋಡಿ ಗ್ರಾಮದ ಅಬ್ರಾರ್ ಎಂಬ ಹುಡುಗನು ಕೂಡ ಕೆಲಸ ಮಾಡುತ್ತಿ. ಅಂಗಡಿಯಲ್ಲಿ, ಕೆಲಸ ಮಾಡುವ ಎಲ್ಲ ಹುಡುಗರಿಗೂ ಮಧ್ಯಾಹ್ನದ ಊಟವನ್ನು ನಾನೇ ಮಾಡುತ್ತಿದ್ದೆ. ಅಬ್ರಾ‌ರ್ ಪ್ರತಿ ದಿನ ಮಧ್ಯಾಹ್ನ ಮನೆಗೆ ಬಂದು ಊಟವನ್ನು ತೆಗೆದುಕೊಂಡು ಹೋಗುತ್ತಿದ್ದ. ಒಂದು ದಿನ ಊಟ ತೆಗೆದುಕೊಂಡು ಹೋಗಲು ಮನೆಗೆ ಬಂದಾಗ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವನು ನನ್ನನ್ನು ತಬ್ಬಿಕೊಂಡು ನನ್ನ ಮೈ, ಕೈ, ಎದೆ, ತೊಡೆಯನ್ನೆಲ್ಲಾ ಮುಟ್ಟಿ ಬಲವಂತವಾಗಿ ನನ್ನ ಬಟ್ಟೆ ಕಳಚಿ ಲೈಂಗಿಕ ಕ್ರಿಯೆ ನಡೆಸಲು ಪ್ರಯತ್ನಪಟ್ಟನು. ನಾನು ಗಾಬರಿಯಿಂದ ಜೋರಾಗಿ ಆತನನ್ನು ನೂಕಿ ಕಿರುಚಾಡಿಕೊಂಡೆ. ಬಳಿಕ ಆತ ಅಲ್ಲಿಂದ ಓಡಿ ಹೋದನು. ನಾನು ಈ ವಿಚಾರವನ್ನು ನನ್ನ ಗಂಡನಿಗೆ ಹೇಳಿದಾಗ ಅವರು ಇದನ್ನು ದೊಡ್ಡದು ಮಾಡುವುದು ಬೇಡ ಎಂದು ಹೇಳಿ ಅವನನ್ನು ಕೆಲಸದಿಂದ ತೆಗೆದು ಹಾಕಿದರು.

ಇದನ್ನೂ ಓದಿ: ಅಂಗಡಿಯವನಿಂದ 50 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿಯ ಬಂಧನ

ಕೆಲಸ ಬಿಟ್ಟು ಹೋಗುವಾಗಲೇ ನನ್ನ ಗಂಡನಿಗೆ ನಿನ್ನ ಸಾಯಿಸದೇ ಬಿಡುವುದಿಲ್ಲ. ನಿನ್ನ ಸಂಸಾರಕ್ಕೆ ಒಂದು ಗತಿ ಕಾಣಿಸುತ್ತೇನೆ ಅಂತ ಬೆದರಿಕೆ ಹಾಕಿದ್ದ. ಸ್ವಲ್ಪ ದಿನಗಳು ಕಳೆದ ಬಳಿಕ ಮತ್ತೆ ನನ್ನ ಫೋಟೋವನ್ನ ಗಂಡನಿಗೆ ಕಳುಹಿಸಿ ನನ್ನ ಬಳಿ ನಿನ್ನ ಹೆಂಡತಿಯ ಎಂತೆಂತದೋ ಫೋಟೋ ಇದೆ ಕಳುಹಿಸುತ್ತೇನೆ. ನಿಮ್ಮ ಮರ್ಯಾದೆ ಕಳೆಯುತ್ತೇನೆಂದು ಅವಾಚ್ಛ ಶಬ್ದದಿಂದ ನಿಂದಿಸಿ ಮಗನೆ ನನ್ನನ್ನೇ ಕೆಲಸದಿಂದ ತಗೆಯುತ್ತೀಯ ಅಂತ ಬೈದಿದ್ದ. ಆದರೆ ನಾವು ಈ ವಿಚಾರವನ್ನು ದೊಡ್ಡದು ಮಾಡುವುದು ಬೇಡವೆಂದು ಸುಮ್ಮನಾದೆವು. ಇದಾದ ಕೆಲವೇ ದಿನಗಳಲ್ಲಿ, ಆತನು ನನ್ನ ಗಂಡನಿಗೆ ಬೇರೆ ಬೇರೆ ನಂಬರ್​ಗಳಿಂದ ಫೋನ್ ಮಾಡಿ ನೀನು ನಿನ್ನ ಹೆಂಡತಿಯನ್ನು ಬಿಟ್ಟು ಬಿಡು, ನಾನು ಅವಳನ್ನು ಮದುವೆಯಾಗುತ್ತೇನೆ ಎಂದು ಕೆಟ್ಟದಾಗಿ ಬೈದಿದ್ದಾನೆ. ಜೊತೆಗೆ ನನ್ನ ಗಂಡನಿಗೆ ನನ್ನ ಬಗ್ಗೆ ಇಲ್ಲ-ಸಲ್ಲದ ಸುಳ್ಳನ್ನು ಹೇಳಿ ನಮ್ಮಿಬ್ಬರಿಗೂ ಜಗಳ ಆಗುವಂತೆಯೂ ಮಾಡಲು ಪ್ರಯತ್ನ ಮಾಡಿದ್ದಾನೆ.

ಅಬ್ರಾರ್ ನಮ್ಮ ಮನೆಗೆ ಬಂದು ಹೋಗುವಾಗಲೋ ಅಥವಾ ನಾನು ಅಂಗಡಿಗೆ ಹೋದಾಗಲೋ ನನಗೆ ಗೊತ್ತಾಗದಂತೆ ನನ್ನ ಫೋಟೋ ಮತ್ತು ವಿಡಿಯೋಗಳನ್ನು ನನಗೆ ಗೊತ್ತಿಲ್ಲದೆ ತೆಗೆದುಕೊಂಡಿದ್ದಾನೆ. ಅಬ್ರಾರ್ ನನಗೆ ಮತ್ತು ನನ್ನ ಗಂಡನಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ. ಆದ್ದರಿಂದ ಈತನ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕೋರುತ್ತೇನೆಂದು ನೆಲಮಂಗಲ ಟೌನ್ ಪೊಲೀಸ್ ಠಾಣೆಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಈ ಸಂಬಂಧ ಐ.ಪಿ.ಸಿ184/2023 ಕಲಂ 354(ಬಿ), 354 (ಸಿ) 504, 506 ಪ್ರಕರಣ ದಾಖಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ