ದೇವನಹಳ್ಳಿ: ನಿಧಿ ಹೆಸರಲ್ಲಿ ನಕಲಿ ಗೋಲ್ಡ್ ನೀಡಿ ಲಕ್ಷಾಂತರ ರೂ ಲೂಟಿ ಮಾಡಿದ್ದ ಗ್ಯಾಂಗ್​ ಅರೆಸ್ಟ್​

ಬೆಂಗಳೂರಿಗೆ ಆಗಮಿಸಿದ್ದ ಆಂಧ್ರ ಮೂಲದ ಖರ್ತನಾಕ್​​ ಗ್ಯಾಂಗ್​​ ಒಂದನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ನಿಧಿ ಹೆಸರಲ್ಲಿ ಜನರಿಗೆ ನಕಲಿ ಚಿನ್ನ ನೀಡಿ ಲಕ್ಷಾಂತರ ರೂ ಲೂಟಿ ಮಾಡಿ ಪರಾರಿಯಾಗಿದ್ದ ನಾಲ್ವರನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಬಂಧಿತರಿಂದ 65 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ.

ದೇವನಹಳ್ಳಿ: ನಿಧಿ ಹೆಸರಲ್ಲಿ ನಕಲಿ ಗೋಲ್ಡ್ ನೀಡಿ ಲಕ್ಷಾಂತರ ರೂ ಲೂಟಿ ಮಾಡಿದ್ದ ಗ್ಯಾಂಗ್​ ಅರೆಸ್ಟ್​
ಬಂಧಿತರಿಂದ ವಶಕ್ಕೆ ಪಡೆದ ಚಿನ್ನ
Updated By: ಗಂಗಾಧರ​ ಬ. ಸಾಬೋಜಿ

Updated on: Sep 29, 2025 | 11:17 AM

ದೇವನಹಳ್ಳಿ, ಸೆಪ್ಟೆಂಬರ್​ 29: ಚಿನ್ನ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದರಲ್ಲೂ ದಿನೇದಿನೆ ಗಗನಕ್ಕೇರುತ್ತಿರುವ ಚಿನ್ನದ ಬೆಲೆ ಎಲ್ಲರಿಗೂ ಶಾಕ್ ನೀಡಿದೆ. ಈ ನಡುವೆ ಇಲ್ಲೊಂದು ಗ್ಯಾಂಗ್ ಇದನ್ನೇ ಬಂಡವಾಳ ಮಾಡಿಕೊಂಡು ನಿಧಿ ಹೆಸರಲ್ಲಿ ಜನರಿಗೆ ನಕಲಿ ಚಿನ್ನದ (fake gold) ಮಕ್ಮಲ್ ಟೋಪಿ ಹಾಕಿ ಲಕ್ಷಾಂತರ ರೂ ಲೂಟಿ ಮಾಡಿದ್ದು, ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ (arrest). ಬಂಧಿತರಿಂದ 65 ಲಕ್ಷ ರೂ. ಮತ್ತು 5 ಕೆಜಿ ನಕಲಿ ಚಿನ್ನ ವಶಕ್ಕೆ ಪಡೆಯಲಾಗಿದೆ.

ನಾಲ್ವರು ಬಂಧಿತರು

ಅಸಲಿ ಅಂತ ನಕಲಿ ಚಿನ್ನ ನೀಡಿ ಲಕ್ಷಾಂತರ ರೂ ಹಣದೊಂದಿಗೆ ಪರಾರಿ ಆಗಿದ್ದ ರಾಜೇಶ್, ಬನ್ನಿ, ಕಲ್ಯಾಣ್, ಮತ್ತು ಸಂಪತ್ ನಾಲ್ವರು ಖತರ್ನಾಕ್ ಖದೀಮರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದವರಾದ ಈ ನಾಲ್ವರು ಆರೋಪಿಗಳು ಸಿಟಿ ಹೊರವಲಯದ ನಗರಗಳಿಗೆ ಎಂಟ್ರಿಕೊಟ್ಟು ತೆಲುಗು ಮಾತನಾಡುವ ಜನರನ್ನು ಗುರಿ ಮಾಡಿಕೊಂಡು ತಮ್ಮ ಪ್ಲ್ಯಾನ್​​ ಅನ್ನು ಅವರ ಮೇಲೆ ಪ್ರಯೋಗ ಮಾಡುತ್ತಿದ್ದರು. ಅದೇ ರೀತಿ ಕಳೆದ ತಿಂಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ ಬಂದಿದ್ದ ಈ ನಾಲ್ವರ ಗ್ಯಾಂಗ್​​, ಬಳ್ಳಾರಿ ಮೂಲದ ವ್ಯಕ್ತಿಯೊಬ್ಬರಿಗೆ ನಮಗೆ ಜಮೀನಿನಲ್ಲಿ ಕೆಲಸ ಮಾಡುವಾಗ ನಿಧಿ ಸಿಕ್ಕಿದೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇವೆ ಅಂತ ಅಸಲಿ ಚಿನ್ನ ನೀಡಿ ನಂಬಿಸಿದ್ದಾರೆ.

ನಕಲಿ ಚಿನ್ನ ನೀಡಿ ಗ್ಯಾಂಗ್​ ಪರಾರಿ

ಉಳಿದ ಚಿನ್ನವನ್ನ ವಿಡಿಯೋ ಕಾಲ್ ಮೂಲಕ ತೋರಿಸಿ ಲಕ್ಷಾಂತರ ರೂ ಹಣಕ್ಕೆ ಡೀಲ್ ಮಾಡಿಕೊಂಡಿದ್ದು, ಹೊಸಕೋಟೆ ಹೊರವಲಯದಲ್ಲಿ ಚಿನ್ನ ಕೊಡುವುದಾಗಿ ಕರೆಸಿಕೊಂಡು ನಕಲಿ ಚಿನ್ನ ನೀಡಿ ಲಕ್ಷ ಲಕ್ಷ ಹಣ ಪಡೆದು ಎಸ್ಕೇಪ್ ಆಗಿದ್ದರು.

ಇತ್ತ ಚಿನ್ನ ಪಡೆದ ವ್ಯಕ್ತಿ ಮನೆಗೆ ಹೋಗಿ ಪರಿಶೀಲನೆ ಮಾಡಿದಾಗ ಅದು ಅಸಲಿ ಅಲ್ಲ, ನಕಲಿ ಎನ್ನುವುದು ತಿಳಿದು ಒಂದು ಕ್ಷಣ ದಂಗಾಗಿದ್ದಾರೆ. ಬಳಿಕ ಹೊಸಕೋಟೆ ಪೊಲೀಸ್​ ಠಾಣೆಗೆ ದೂರು ನೀಡಿದರು. ಕಾರ್ಯಾಚರಣೆ ನಡೆಸಿದ ಪೊಲೀಸರು ಇದೀಗ ನಾಲ್ವರು ಆರೋಪಿಗಳನ್ನು ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಸೈಬರ್ ವಂಚಕರಿಂದ ಸುಧಾಮೂರ್ತಿ ಗ್ರೇಟ್ ಎಸ್ಕೇಪ್: ಮಾಡಿದ್ದೇನು ಗೊತ್ತಾ?

ಸೆರೆಸಿಕ್ಕ ನಾಲ್ವರು ಆರೋಪಿಗಳು ಕಳೆದ ಕೆಲ ತಿಂಗಳುಗಳಿಂದ ಇದೇ ರೀತಿ ಸಿಲಿಕಾನ್ ಸಿಟಿ, ಕೋಲಾರ ಸೇರಿದಂತೆ ನೆರೆಯ ಆಂಧ್ರದಲ್ಲೂ ಹಲವರಿಗೆ ಅಸಲಿ ಚಿನ್ನ ಅಂತ ನಕಲಿ ಚಿನ್ನ ನೀಡಿ ಮೋಸ ಮಾಡಿರುವುದಾಗಿ ಪೊಲೀಸ್​ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.

65 ಲಕ್ಷಕ್ಕೂ ಅಧಿಕ ನಗದು ಹಣ, ಕೃತ್ಯಕ್ಕೆ ಬಳಸುತ್ತಿದ್ದ 5 ಕೆಜಿಯಷ್ಟು ನಕಲಿ ಚಿನ್ನ, ಎರಡು ಕತ್ತಿಗಳು ಮತ್ತು ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರ ಮೇಲೆ ಹಲವು ಕಡೆ ಪ್ರಕರಣಗಳು  ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.