ಮೇಯಲು ಬಿಟ್ಟ ಮೇಕೆ ವಿಚಾರಕ್ಕೆ ಜಗಳ: ಹೊಡೆದ ಏಟಿಗೆ ವ್ಯಕ್ತಿ ಸಾವು, ಆರೋಪಿಗೆ ಜೀವಾವಧಿ ಶಿಕ್ಷೆ!
ದೊಡ್ಡಬಳ್ಳಾಪುರದ ಬಿಸುವನಹಳ್ಳಿಯಲ್ಲಿ ಮೇಯಲು ಬಿಟ್ಟಿದ್ದ ಮೇಕೆ ಕಟ್ಟಿಹಾಕುವ ವಿಚಾರದಲ್ಲಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬನ ಎದೆಗೆ ಗುದ್ದಿ ಕೊಲೆ ಮಾಡಿದ್ದ ಪ್ರಕರಣದಲ್ಲಿ, ಪ್ರಮುಖ ಆರೋಪಿ ರವಿ ಕುಮಾರ್‌ಗೆ ದೊಡ್ಡಬಳ್ಳಾಪುರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ. ವೈದ್ಯಕೀಯ ಸಾಕ್ಷ್ಯಗಳ ಆಧಾರದ ಮೇರೆಗೆ ಈ ಶಿಕ್ಷೆ ಪ್ರಕಟಿಸಲಾಗಿದೆ.

ಮುಖ್ಯಾಂಶಗಳು
- ಮೇಕೆ ಕಟ್ಟಿಹಾಕುವ ಜಗಳದಲ್ಲಿ ವ್ಯಕ್ತಿಯ ಎದೆಗೆ ಗುದ್ದಿ ಭೀಕರ ಕೊಲೆ.
- ಬಾಹ್ಯ ಗಾಯವಿಲ್ಲದಿದ್ದರೂ ದೈಹಿಕ ಆಘಾತದಿಂದ ಸಾವು ಸಂಭವಿಸಿರುವುದು ಕೋರ್ಟ್‌ನಲ್ಲಿ ಸಾಬೀತು.
- ದೊಡ್ಡಬಳ್ಳಾಪುರ ಕೋರ್ಟ್‌ನಿಂದ ಪ್ರಮುಖ ಆರೋಪಿ ರವಿ ಕುಮಾರ್‌ಗೆ ಜೀವಾವಧಿ ಶಿಕ್ಷೆ.
ದೊಡ್ಡಬಳ್ಳಾಪುರ, ಅಕ್ಟೋಬರ್ 26: ಮೇಯಲು ಬಿಟ್ಟಿದ್ದ ಮೇಕೆಯನ್ನು ಕಟ್ಟಿಹಾಕುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಸಣ್ಣ ಗಲಾಟೆಯು ಕೊಲೆಯಲ್ಲಿ ಅಂತ್ಯಗೊಂಡಿರುವ ವಿಶಿಷ್ಟ ಹಾಗೂ ಕುತೂಹಲಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಿಸುವನಹಳ್ಳಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಹಲ್ಲೆ ನಡೆಸಿದ ಪ್ರಮುಖ ಆರೋಪಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿದೆ.
ನಡೆದಿದ್ದೇನು?
ಆರೋಪಿ ರವಿ ಕುಮಾರ್ ಎಂಬುವರ ಕುಟುಂಬಕ್ಕೆ ಸೇರಿದ ಮೇಕೆಯು ದೇವಾಲಯದ ಬಳಿ ಸ್ವಚ್ಛಂದವಾಗಿ ತಿರುಗಾಡುತ್ತಾ, ಸ್ಥಳೀಯ ನಿವಾಸಿ ಚಂದ್ರಶೇಖರ್ ಅವರ ಮೂರು ವರ್ಷದ ಮೊಮ್ಮಗಳಿಗೆ ಪದೇಪೇದೆ ತೊಂದರೆ ನೀಡುತ್ತಿತ್ತು. ಮೇಕೆಯನ್ನು ಕಟ್ಟಿಹಾಕುವಂತೆ ಚಂದ್ರಶೇಖರ್ ಕುಟುಂಬದವರು ಹಲವು ಬಾರಿ ಮನವಿ ಮಾಡಿದ್ದರೂ, ಅದು ದೇವಾಲಯದ ಹೆಸರಿನಲ್ಲಿರುವ ಪ್ರಾಣಿ ಎಂದು ಆರೋಪಿಗಳು ಮೇಕೆಯನ್ನು ಕಟ್ಟಿಹಾಕಲು ನಿರಾಕರಿಸಿದ್ದರು.
2021ರ ಆಗಸ್ಟ್ 23ರಂದು ಮೇಕೆ ಮತ್ತೆ ಮಗುವಿಗೆ ತೊಂದರೆ ನೀಡಿದಾಗ, ಕುಟುಂಬಸ್ಥರು ಅದನ್ನು ಕಟ್ಟಿಹಾಕಲು ಮುಂದಾಗಿದ್ದಾರೆ. ಈ ವಿಷಯವಾಗಿ ನಡೆದ ವಾಗ್ವಾದವು ವಿಕೋಪಕ್ಕೆ ತಿರುಗಿದೆ. ರವಿ ಕುಮಾರ್ ಚಂದ್ರಶೇಖರ್ ಅವರ ಎದೆಯ ಎಡಭಾಗಕ್ಕೆ ಬಲವಾಗಿ ಗುದ್ದಿದ್ದಾನೆ. ಇದರಿಂದ ಕುಸಿದುಬಿದ್ದ ಚಂದ್ರಶೇಖರ್ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ವೈದ್ಯಕೀಯ ವರದಿ ಹಾಗೂ ಕಾನೂನು ಹೋರಾಟ
ಮೃತನ ಮೈಮೇಲೆ ಯಾವುದೇ ಬಾಹ್ಯ ಗಾಯಗಳಿರಲಿಲ್ಲವಾದ್ದರಿಂದ ಆರೋಪಿಗಳ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆ ಹಾಗೂ ಹಿಸ್ಟೋಪಥಾಲಜಿ ವರದಿಯಲ್ಲಿ, ತೀವ್ರವಾದ ದೈಹಿಕ ಆಘಾತ ಮತ್ತು ಭಾವನಾತ್ಮಕ ಉದ್ವೇಗದಿಂದ ಹೃದಯದ ರಕ್ತನಾಳ ಬ್ಲಾಕ್ ಆಗಿ (ಹೃದಯಾಘಾತ) ಸಾವು ಸಂಭವಿಸಿದೆ ಎಂದು ವೈದ್ಯರು ನ್ಯಾಯಾಲಯಕ್ಕೆ ಸಾಕ್ಷ್ಯ ಒದಗಿಸಿದರು.
ಪ್ರಕರಣದ ವಿಚಾರಣೆ ನಡೆಸಿದ ದೊಡ್ಡಬಳ್ಳಾಪುರದ IV ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಪ್ರಮುಖ ಆರೋಪಿ ರವಿ ಕುಮಾರ್‌ಗೆ ಜೀವಾವಧಿ ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಜೊತೆಗೆ ಇತರೆ ಸಹ ಆರೋಪಿಗಳಿಗೂ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Mon, 26 October 26




