ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪ ತಯಾರಿಸುತ್ತಾರೆ ಈ ಕುಟುಂಬ

| Updated By: ಆಯೇಷಾ ಬಾನು

Updated on: Sep 18, 2023 | 3:16 PM

ಮುತ್ತಮ್ಮನ ಮನೆ ಮಂದಿಯೆಲ್ಲ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮತ್ತು ಗೌರಮ್ಮ ಮೂರ್ತಿಗಳ ತಯಾರಿಕೆ ಮಾಡುತ್ತಾರೆ. ಆನೇಕಲ್ ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ ಕಳೆದ ಅರ್ಧ ಶತಮಾನದಿಂದ ವಂಶಪಾರಂಪರ್ಯವಾಗಿ ಪರಿಸರ ಸ್ನೇಹಿ ಗಣೇಶ-ಗೌರಿ ಮೂರ್ತಿಗಳ ತಯಾರಿಕೆಯಲ್ಲಿ ಮುತ್ತಮ್ಮ ಮತ್ತು ಕುಟುಂಬ ತೊಡಗಿಕೊಂಡಿದೆ.

ಗ್ರಾಹಕರ ಅಭಿರುಚಿಗೆ ತಕ್ಕಂತೆ ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪ ತಯಾರಿಸುತ್ತಾರೆ ಈ ಕುಟುಂಬ
ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪ ತಯಾರಿಸುತ್ತಾರೆ ಈ ಕುಟುಂಬ
Follow us on

ಬೆಂಗಳೂರು, ಸೆ.18: ಪಿಓಪಿ ಗಣಪತಿ(POP Ganesha) ಮೂರ್ತಿಗಳ ಭರಾಟೆ ನಡುವೆ ಬೆಂಗಳೂರು ಹೊರವಲಯ ಆನೇಕಲ್​ನಲ್ಲಿ ಜೇಡಿಮಣ್ಣಿನ ಗಣಪತಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೌದು ಪಿಓಪಿ ಗಣಪತಿ ಮೂರ್ತಿಗಳ ಪೈಪೋಟಿ ನಡುವೆಯು ಮುತ್ತಮ್ಮ ಕುಟುಂಬ ಇಂದಿಗೂ ಜೇಡಿ ಮಣ್ಣಿನ ಪರಿಸರ ಸ್ನೇಹಿ ಗಣಪತಿ ತಯಾರು ಮಾಡಿಕೊಂಡು ಬರುತ್ತಿದ್ದಾರೆ. ಅದರಲ್ಲೂ ಸಾಂಪ್ರದಾಯಿಕ ಶೈಲಿಯ ಗಣಪತಿ ಮತ್ತು ಗೌರಿ ಮೂರ್ತಿಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿದ್ದಾರೆ.

ಗ್ರಾಹಕರ ಅಭಿರುಚಿಗೆ ತಕ್ಕಂತೆ ಗಣಪತಿಗಳ ತಯಾರಿ

ಹೌದು ಮುತ್ತಮ್ಮನ ಮನೆ ಮಂದಿಯೆಲ್ಲ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮತ್ತು ಗೌರಮ್ಮ ಮೂರ್ತಿಗಳ ತಯಾರಿಕೆ ಮಾಡುತ್ತಾರೆ. ಆನೇಕಲ್ ಪಟ್ಟಣದ ಬ್ರಾಹ್ಮಣರ ಬೀದಿಯಲ್ಲಿ ಕಳೆದ ಅರ್ಧ ಶತಮಾನದಿಂದ ವಂಶಪಾರಂಪರ್ಯವಾಗಿ ಪರಿಸರ ಸ್ನೇಹಿ ಗಣೇಶ-ಗೌರಿ ಮೂರ್ತಿಗಳ ತಯಾರಿಕೆಯಲ್ಲಿ ಮುತ್ತಮ್ಮ ಮತ್ತು ಕುಟುಂಬ ತೊಡಗಿಕೊಂಡಿದೆ. ತಂದೆಯಿಂದ ಬಳುವಳಿಯಾಗಿ ಬಂದ ಈ ಕಸುಬನ್ನು ಮಕ್ಕಳಿಗೆ ದಾರೆಯೆರೆದಿದ್ದು, ಇಡೀ ಕುಟುಂಬ ಇಂದಿಗೂ ಪರಿಸರಕ್ಕೆ ಮಾರಕವಾದ ಪಿಓಪಿ ಬಳಸದೇ ಸ್ಥಳೀಯವಾಗಿ ಕೆರೆಯಲ್ಲಿ ದೊರೆಯುವ ಜೇಡಿಮಣ್ಣನ್ನು ಬಳಸಿಕೊಂಡು ಕೈಯಲ್ಲೇ ತಿದ್ದಿ ತೀಡಿ ಮೂರ್ತಿಗಳನ್ನು ತಯಾರಿಸುತ್ತಾರೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಗಣೇಶ ಮೂರ್ತಿಗಳನ್ನು ನಿರ್ಮಿಸಿ ಕೊಡಲಾಗುತ್ತದೆ ಎಂದು ಗಣೇಶ ಮೂರ್ತಿ ತಯಾರಕಿ ಮುತ್ತಮ್ಮ ತಿಳಿಸಿದ್ದಾರೆ.

ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪ

ಇದನ್ನೂ ಓದಿ: ಗೌರಿ ಗಣೇಶ ಹಬ್ಬದ ಸಂಭ್ರಮಕ್ಕೆ ಭರ್ಜರಿ ತಯಾರಿ, ಖರೀದಿಗಳಿಗೆ ಕೆಆರ್ ಮಾರ್ಕೆಟ್ ನಲ್ಲಿ ಜನಸಾಗರ

ಸಂಪ್ರದಾಯಿಕ ರೀತಿಯಲ್ಲಿ ನಾವು ಗಣೇಶ ಮೂರ್ತಿಗಳನ್ನು ತಯಾರಿಸುವುದರಿಂದ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಇದೆ. ಜೊತೆಗೆ ದಿನದಿಂದ ದಿನಕ್ಕೆ ಮಣ್ಣಿನ ಗಣೇಶ ಮೂರ್ತಿಗಳ ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ನಾವು ಮೂರ್ತಿಗಳ ನಿರ್ಮಾಣ ಮಾಡಿ ಗ್ರಾಹಕರಿಗೆ ನೀಡುತ್ತಿದ್ದೇವೆ. ಪಿಓಪಿ ಬಳಸದೇ ಜೇಡಿ ಮಣ್ಣು, ತೆಂಗಿನ ನಾರು, ಬತ್ತದಹುಲ್ಲು, ಬತ್ತದ ಒಟ್ಟು ಬಳಸಿ ಗಣೇಶ ತಯಾರಿಸಲಾಗುತ್ತದೆ . ಜೊತೆಗೆ ಎಷ್ಟೆ ಡಿಮ್ಯಾಂಡ್ ಇದ್ರು ಸಹ ಪರಿಸರಕ್ಕೆ ಹಾನಿಕಾರಕವಾದ ಬಣ್ಣ ಬಳಸದೇ ವಾಟರ್ ಕಲರ್ ಬಳಸಿ ಗಣೇಶ ತಯಾರಿಕೆ ಮಾಡುತ್ತಿದ್ದೆವೆ. ಹಾಗಾಗಿ ತಮಿಳುನಾಡು ಸೇರಿದಂತೆ ನಗರದ ವಿವಿಧ ಕಡೆಯಿಂದ ಗಣೇಶ ಮೂರ್ತಿಗಳನ್ನು ಖರೀದಿಸಲು ಗ್ರಾಹಕರು ಆಗಮಿಸುತ್ತಾರೆ. ಈ ಬಾರಿ ಪೌರಾಣಿಕ ಮುದ್ಗಲ್ ಗಣೇಶ ಮೂರ್ತಿಗಳನ್ನು ತಯಾರಿಸಿರುವುದು ವಿಶೇಷವಾಗಿದೆ. ಬಲಮುರಿ ಗಣಪ, ಯಕ್ಷಗಾನ ಗಣೇಶ, ಕಾಂತಾರ ಗಣಪತಿ ಸೇರಿದಂತೆ ಗ್ರಾಹಕರ ಬೇಡಿಕೆಯಂತೆ ಮೂರ್ತಿಗಳನ್ನು ನಿರ್ಮಿಸಿ ನೀಡಲಾಗುತ್ತಿದೆ ಎಂದು ಗಣೇಶ ತಯಾರಕಿ ಮುತ್ತಮ್ಮ ಕುಟುಂಬದವರು ತಿಳಿಸಿದ್ದಾರೆ.

ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪ

ಒಟ್ನಲ್ಲಿ ಲಾಭಕ್ಕಾಗಿ ಪರಿಸರಕ್ಕೆ ಮಾರಕವಾದ ಪಿಓಪಿ ಗಣೇಶನ ಮೂರ್ತಿಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುವವರ ನಡುವೆ ಇಂದಿಗೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಕೆಯಲ್ಲಿ ತೊಡಗಿಕೊಂಡಿರುವ ಮುತ್ತಮ್ಮ ಕುಟುಂಬ ಪರಿಸರಕ್ಕೆ ಅಳಿಲು ಸೇವೆ ಮಾಡುತ್ತಿದ್ದಾರೆ. ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ಹಾಗಾಗಿ ಪ್ರತಿಯೊಬ್ಬರು ಮಣ್ಣಿನ ಗಣೇಶನನ್ನೆ ಕೊಂಡು ಪೂಜಿಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ