ದೇವನಹಳ್ಳಿ, ಡಿ.4: ಬಂಗಾಳಕೊಲ್ಲಿಯಲ್ಲಿ ಉಂಟಾದ ಮಿಚಾಂಗ್ ಚಂಡಮಾರುತದಿಂದಾಗಿ ತಮಿಳುನಾಡಿನ ರಾಜಧಾನಿ ಚೆನ್ನೈಯಲ್ಲಿ (Chennai Rain) ಭಾರೀ ಮಳೆಯಾಗುತ್ತಿದೆ. ಪರಿಣಾಮ, ಚೆನ್ನೈ ವಿಮಾಣ ನಿಲ್ದಾಣದಲ್ಲಿ ಇಳಿಯಬೇಕಿದ್ದ ಎಲ್ಲಾ ವಿಮಾನಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸಮೀಪ ಇರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Airport) ಲ್ಯಾಂಡ್ ಮಾಡಲಾಗಿದೆ.
ಭಾರೀ ಮಳೆ ಹಿನ್ನೆಲೆ ಚೆನ್ನೈ ವಿಮಾನಗಳನ್ನು ಬೆಂಗಳೂರಿಗೆ ಡೈವರ್ಟ್ ಮಾಡಲಾಗಿದೆ. ಬೆಳಗ್ಗೆಯಿಂದಲೇ ಹಲವು ವಿಮಾನಗಳು ಬೆಂಗಳೂರಿಗೆ ಲ್ಯಾಂಡ್ ಆಗಿದ್ದು, ಹವಾಮಾನ ಸರಿಯಾಗದೇ ಇರುವ ಹಿನ್ನೆಲೆ ಸೇವೆ ಆರಂಭಿಸಿಲ್ಲ. ಪರಿಣಾಮ ಬೆಳಗ್ಗೆಯಿಂದಲೇ ಪ್ರಯಾಣಿಕರು ನಿಲ್ದಾಣದಲ್ಲಿ ಪರದಾಡುವಂತಾಗಿದೆ.
ಕೆಲವು ಪ್ರಯಾಣಿಕರು ಬಸ್, ಕಾರುಗಳ ಮೂಲಕ ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನೂ ಕೆಲ ಪ್ರಯಾಣಿಕರು ವಿಮಾನಗಳ ಟೇಕಾಫ್ಗಾಗಿ ಕಾಯುತ್ತಿದ್ದು, ಏರ್ಲೈನ್ಸ್ ಕಚೇರಿ ಬಳಿ ನಿಂತುಕೊಂಡಿದ್ದಾರೆ. ಹೀಗೆ ನಿಂತಿರುವ ಪ್ರಯಾಣಿಕರಿಗೆ ಏರ್ಲೈನ್ಸ್ ಅಧಿಕಾರಿಗಳು ಊಟ ಹಾಗೂ ತಿಂಡಿ ವ್ಯವಸ್ಥೆ ಮಾಡಿದ್ದಾರೆ.
ಇದನ್ನೂ ಓದಿ: ಮಿಚಾಂಗ್ ಚಂಡಮಾರುತ ಎಫೆಕ್ಟ್: ಕರ್ನಾಟಕದಿಂದ ತಮಿಳುನಾಡಿಗೆ ತೆರಳಬೇಕಿದ್ದ 10ಕ್ಕೂ ಹೆಚ್ಚು ರೈಲು ಕ್ಯಾನ್ಸಲ್
ನಿನ್ನೆ ರಾತ್ರಿಯಿಂದ ಇದುವರೆಗೂ ಚೆನ್ನೈನಲ್ಲಿ ಲ್ಯಾಂಡ್ ಆಗಬೇಕಿದ್ದ ಒಟ್ಟು 27 ವಿಮಾನಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಡೈವರ್ಟ್ ಆಗಿವೆ. ಎಮಿರೇಟ್ಸ್, ಏರ್ ಇಂಡಿಯಾ ಎಕ್ಸ್ಪ್ರೆಸ್ ಸೇರಿದಂತೆ 27 ವಿಮಾನಗಳು ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದಿದ್ದು ಬೆಳಗ್ಗೆಯಿಂದ ಪ್ರಯಾಣಿಕರು ಏರ್ಪೋರ್ಟ್ನಲ್ಲಿ ಉಳಿಯುವಂತಾಗಿದೆ. ಕೆಂಪೇಗೌಡ ಏರ್ಪೋಟ್ ರನ್ ವೇನಲ್ಲಿ ಡೈವರ್ಟ್ ವಿಮಾನಗಳು ನಿಂತಿವೆ.
ಮಿಚಾಂಗ್ ಚಂಡಮಾರುತದ ಅಬ್ಬರಕ್ಕೆ ಚೆನ್ನೈನಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಸ್ಥಿತಿ ಉಂಟಾಗಿದೆ. 23 ಸೆಂಟಿ ಮೀಟರ್ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚೆನ್ನೈನ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ಕೆಲವೊಂದು ರಸ್ತೆಗಳು ನದಿಯಂತಾಗಿವೆ.
ಮಳೆಯ ಆರ್ಭಟದಿಂದಾಗಿ ಹಲವು ತಗ್ಗು ಪ್ರದೇಶಗಳು ಮುಳುಗಿವೆ. ಜಲಾವೃತ್ತಗೊಂಡಿದ್ದ ತಂಬರಂ ಮತ್ತು ಪೆರುಂಗಲತ್ತೂರಿ ಪ್ರದೇಶದಲ್ಲಿ ಸಿಲುಕಿದ್ದ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಜಲಾವೃತ್ತಗೊಂಡಿರುವ 14 ಸಬ್‌ವೇಗಳನ್ನು ಬಂದ್ ಮಾಡಲಾಗಿದೆ.
ಮ್ಯಾಡ್ಲೇ, ರಂಗರಾಜಪುರಂ, ದೊರೈಸ್ವಾಮಿ, ಮೌಂಟ್, ರಂಗನಾಥನ್, ಗಣೇಶ್ ಪುರಂ, ಗೇಣುರೆಡ್ಡಿ, ವಿಲ್ಲಿವಕ್ಕಂ, ನುಂಗಂಬಾಕಂನಲ್ಲಿರೋ ಸಬ್ ವೇಗಳನ್ನು ಕ್ಲೋಸ್ ಮಾಡಲಾಗಿದೆ. ಸೆಂಟ್ ಥಾಮಸ್ ಮೆಟ್ರೋ ಸ್ಟೇಷನ್ ನೀರು ನುಗ್ಗಿದ್ದರಿಂದ ಪ್ರಯಾಣಿಕರು ಪರದಾಡಿದ್ದಾರೆ. ತಂಬರಂ ಕಾರ್ಪೋರೇಷನ್ ವ್ಯಾಪ್ತಿಯ 39 ನಿರಾಶ್ರಿತ ಕೇಂದ್ರಗಳಲ್ಲಿ 679 ಮಂದಿ ಆಶ್ರಯ ಪಡೆಯುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ