
ದೇವನಹಳ್ಳಿ, ಅಕ್ಟೋಬರ್ 28: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಐಸಿಯು ಇದ್ದರೂ ಎಸಿ ಕೈಕೊಟ್ಟ ಹಿನ್ನೆಲೆ ಬಂದ ಮಾಡಲಾಗಿತ್ತು. ಹೀಗಾಗಿ ರೋಗಿಗಳು ಪರದಾಡಿದ್ದು, ಫ್ಯಾನ್ಗಳನ್ನ ತಮ್ಮ ಪಕ್ಕದಲ್ಲಿಟ್ಟುಕೊಂಡಿದ್ದಾರೆ. ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು ಇದೀಗ ಆಸ್ಪತ್ರೆಗೆ ಹೊಸ ಎಸಿ ಅಳವಡಿಕೆ ಮಾಡಿದ್ದು, ಐಸಿಯುನಲ್ಲಿ ಚಿಕಿತ್ಸೆಗೆ ಮುಂದಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸರ್ಕಾರಿ ಸಾರ್ವಜನಿಕರ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕಳೆದೊಂದು ತಿಂಗಳಿಂದ ಸರ್ಕಾರಿ ಆಸ್ಪತ್ರೆ ಐಸಿಯುನಲ್ಲಿ ಎಸಿ ಹಾಳಾಗಿದ್ದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಫ್ಯಾನ್ಗಳನ್ನ ಕೂಡ ತಮ್ಮೊಂದಿಗೆ ತೆಗೆದುಕೊಂಡು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಹೀಗಾಗಿ ಈ ಕುರಿತು ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಆರೋಗ್ಯ ಇಲಾಖೆ ಅಧಿಕಾರಿಗಳು, ಐಸಿಯುಗೆ ಹೊಸ ಎಸಿ ಅಳವಡಿಸಿದ್ದಾರೆ.
ದೊಡ್ಡಬಳ್ಳಾಫುರ ಸುತ್ತಾಮುತ್ತ ಕೈಗಾರಿಕೆ ಪ್ರದೇಶ ಹೆಚ್ಚಿರುವ ಕಾರಣ ಮಧ್ಯಮ ಹಾಗೂ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಹೆಚ್ಚಾಗಿ ಬರುತ್ತಿದ್ದು, ಎಮರ್ಜೆನ್ಸಿ ವೇಳೆ ಖಾಸಗಿ ಅಥವಾ ಬೆಂಗಳೂರಿನ ಆಸ್ಪತ್ರೆಗಳಿಗೆ ತೆರಳುವ ಅನಿರ್ವಾಯತೆ ಉಂಟಾಗಿತ್ತು. ಹೀಗಾಗಿ ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಡಿಹೆಚ್ಒ ಮಂಜುನಾಥ್, ಸರ್ಕಾರಿ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಹಾಳಾಗಿದ್ದ ಹಳೆ ಎಸಿಗಳನ್ನ ತೆರವುಗೊಳಿಸಿ, ಹೊಸ ಎಸಿಗಳನ್ನ ಅಳವಡಿಸಿದ್ದಾರೆ. ಜೊತೆಗೆ ಐಸಿಯು ಯೂನಿಟ್ಗೆ ಚಾಲನೆ ಕೂಡ ನೀಡಿದ್ದಾರೆ. ಅಷ್ಟೇ ಅಲ್ಲದೆ ರೋಗಿಗಳಿಗೆ ಅನಾನುಕೂಲವಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಇದನ್ನೂ ಓದಿ: ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ: ಜನರಲ್ ವಾರ್ಡ್ ರೋಗಿಗಳ ಪರದಾಟ
ಒಟ್ಟಾರೆ ಸುಸಜ್ಜಿತ ಕಟ್ಟಡ, ಬೆಡ್, ವಾರ್ಡ್ ಎಲ್ಲಾ ಇದ್ದರೂ ಎಸಿ ಒಂದಿಲ್ಲ ಅಂತ ಮೂಲೆಗುಂಪಾಗಿದ್ದ, ಸರ್ಕಾರಿ ಆಸ್ಪತ್ರೆಯ ಐಸಿಯು ಇದೀಗ ಮತ್ತೆ ತೆರೆಯಲಾಗಿದೆ. ಸಣ್ಣ ಪುಟ್ಟ ವಿಚಾರಗಳಿಗೆ ಬಡ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣ ಮುನ್ನ ಅಧಿಕಾರಿಗಳು ಎಚ್ಚೆತ್ತು ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸ ಮಾಡಬೇಕಿದೆ. ಟಿವಿ9 ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.