ಬೆಂಗಳೂರು ಗ್ರಾಮಾಂತರ, ಮಾ.31: ಕ್ರಷರ್ ಮಾಲೀಕನ ಮನೆ ಮೇಲೆ ಐಟಿ(IT) ಇಲಾಖೆ ಅಧಿಕಾರಿಗಳು ಇಂದು(ಮಾ.31) ದಾಳಿ ನಡೆಸಿದ್ದು, 1.20 ಕೋಟಿ ನಗದು ಹಾಗೂ 800 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರ ಆಪ್ತ ಸಹಾಯಕ ಮಂಜುನಾಥ್ ಎಂಬುವವರ ಅಳಿಯ ಆಗಿರುವ ಲೋಕೇಶ್, ಕೆಲದಿನಗಳ ಹಿಂದೆ ಗಡಿಭಾಗದ ಚೆಕ್ಪೋಸ್ಟ್ನಲ್ಲಿ 10 ಲಕ್ಷ ಹಣದ ಜೊತೆ ಸಿಕ್ಕಿಬಿದ್ದಿದ್ದರು. ಈ ಹಿನ್ನಲೆ ಅನುಮಾನದಿಂದ ಐಟಿ ಇಲಾಖೆ ಡಿಡಿ ವಿಷ್ಣುಪ್ರಸಾದ್ ನೇತೃತ್ವದಲ್ಲಿ 6 ಅಧಿಕಾರಿಗಳು ತಮಿಳುನಾಡಿನ ಹೊಸೂರಿನಲ್ಲಿರುವ ಲೋಕೇಶ್ ನಿವಾಸದ ಮೇಲೆ ದಾಳಿ ನಡೆಸಿದಾಗ ದಾಖಲೆ ಇಲ್ಲದೆ ಸಂಗ್ರಹಿಸಿದ್ದ ಚಿನ್ನಾಭರಣ, ನಗದು ಪತ್ತೆಯಾಗಿದೆ.
ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಮಂಗಳವಾಡದ ಅಂಬೇಡ್ಕರ್ ವೃತ್ತದಲ್ಲಿರುವ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ. ನಾಗರಾಜು ಎಂಬುವವರಿಗೆ ಸೇರಿದ ಅಂಗಡಿ ಇದಾಗಿದ್ದು, ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಪಕ್ಕದಲ್ಲಿದ್ದ ಐದಾರು ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ಕೆನ್ನಾಲಿಗೆಗೆ ಐದಾರು ಅಂಗಡಿಗಳು ಸುಟ್ಟು ಭಸ್ಮವಾಗಿದೆ. ಸ್ಥಳಕ್ಕೆ ಪಾವಗಡ ತಾಲೂಕಿನ ಅರಸಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಜುವೆಲ್ಲರಿ ಶಾಪ್ ಮಾಲೀಕರ ಮನೆ ಮೇಲೆ ಐಟಿ ದಾಳಿ ನಡೆಸಿ ಶೋಧ ನಡೆಸುವಾಗ ಅಪ್ರಾಪ್ತ ಹೆಣ್ಣು ಮಕ್ಕಳು ಪತ್ತೆ
ಬೆಂಗಳೂರು ಗ್ರಾಮಾಂತರ: ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಲಾರಿ ಚಾಲಕ ಸುಮಂತ್ಗೆ ಚಾಕುವಿನಿಂದ ಗಾಯಗೊಳಿಸಿ 7 ಸಾವಿರ ನಗದು, ಮೊಬೈಲ್ ಕಸಿದು ಪರಾರಿಯಾದ ಘಟನೆ ನಡೆದಿದೆ. ಮೂರು ಬೈಕ್ನಲ್ಲಿ ಬಂದಿದ್ದ 6 ಜನರಿಂದ ಕೃತ್ಯ ಎಸಗಲಾಗಿದೆ. ಈ ಕುರಿತು ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:32 pm, Sun, 31 March 24