ಭೀಕರ ಅಪಘಾತ: ಮನೆಗೆ ದಿನಸಿ ತೆಗೆದುಕೊಂಡು ಬರ್ತಿದ್ದ ತಾಯಿ-ಮಗ ದುರಂತ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗೇಟ್​​​ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ತಾಯಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಡಿ ಮಾರ್ಟ್​​ನಿಂದ ದಿನಸಿ ಸಾಮಗ್ರಿಗಳನ್ನು ತೆಗೆದುಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದೆ.

ಭೀಕರ ಅಪಘಾತ: ಮನೆಗೆ ದಿನಸಿ ತೆಗೆದುಕೊಂಡು ಬರ್ತಿದ್ದ ತಾಯಿ-ಮಗ ದುರಂತ ಸಾವು
ಅಪಘಾತ

Updated on: Jan 24, 2026 | 6:08 PM

ನೆಲಮಂಗಲ, ಜನವರಿ 24: ಡಿ ಮಾರ್ಟ್​​ಗೆ ಹೋಗಿ ಬರುತ್ತಿದ್ದ ತಾಯಿ ಮತ್ತು ಮಗ (mother and son) ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗೇಟ್​​​ ಬಳಿ ಸಂಭವಿಸಿದೆ. ಶೈಲಜಾ(45), ಪ್ರಜ್ವಲ್(26) ಮೃತ ತಾಯಿ, ಮಗ. ತ್ಯಾಮಗೊಂಡ್ಲು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಡೆದದ್ದೇನು?

ತಾಯಿ ಮತ್ತು ಮಗ ಡಿ ಮಾರ್ಟ್​​ಗೆ ಹೋಗಿ ದಿನಸಿ ಸಾಮಗ್ರಿಗಳನ್ನು ತೆಗೆದುಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗೇಟ್ ಬಳಿ ವೇಗವಾಗಿ ಬಂದ ಟಾಟಾ ಏಸ್ ವಾಹನ ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಓವರ್​​ಟೇಕ್​ ಮಾಡಲು ಹೋಗಿ ಬಸ್​ಗೆ ಬೈಕ್​ ಡಿಕ್ಕಿ: ಸವಾರನಿಗೆ ಗಂಭೀರ ಗಾಯ

ಬಸ್​ಗೆ ಬೈಕ್​ ಡಿಕ್ಕಿಯಾಗಿ ಸವಾರನಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶೆಟ್ರಕಟ್ಟೆ ಬಳಿ‌ ನಡೆದಿದೆ. ಕುಂದಾಪುರದಿಂದ ಕೊಲ್ಲೂರು ಕಡೆಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ ಓವರ್​​ಟೇಕ್​ ಮಾಡುವಾಗ ಎದುರಿಗೆ ಬರುತ್ತಿದ್ದ ಖಾಸಗಿ ಬಸ್​ಗೆ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್​ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ದೃಶ್ಯ ಬಸ್ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ನಿಂತಿದ್ದ ಬೈಕ್​ಗೆ ಕಾರು ಡಿಕ್ಕಿ: ಸವಾರರಿಗೆ ಗಂಭೀರ ಗಾಯ

ನಿಂತಿದ್ದ ಬೈಕ್​ಗೆ ಕಾರು ಡಿಕ್ಕಿ ಹೊಡೆದಿದ್ದು, ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾರು ಡಿಕ್ಕಿ ಹೊಡೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಕಾರು ಮಾಲೀಕ ಹಾಗೂ ಬೈಕ್ ಸವಾರರ ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ: ಖಾಸಗಿ ಬಸ್​​- ಕ್ರೂಸರ್​ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು, 8 ಮಂದಿ ಗಂಭೀರ

ಯುವಕರಿಬ್ಬರು ರಸ್ತೆ ಬದಿ ಬೈಕ್ ನಿಲ್ಲಿಸಿ ಬೇಕರಿ ಕಡೆ ಹೋಗಲು ಮುಂದಾಗಿದ್ದರು. ಈ ವೇಳೆ ಕಾರು ಚಾಲಕ‌ನ ಅಜಾಗರೂಕತೆಯಿಂದ ಬೈಕ್​ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಯುವಕರು ನೆಲಕ್ಕೆ ಬಿದಿದ್ದು, ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.