ಬೆಂಗಳೂರು ಗ್ರಾಮಾಂತರ: ಸರ್ಕಾರಿ ಆಸ್ಪತ್ರೆಯ ಆಪರೇಷನ್ ಥಿಯೇಟರ್(Operation Theater)ಗೆ ಬಾಗಿಲು ಹಾಕಿದೆ. ವೈದ್ಯರು ಥಿಯೇಟರ್ ತಜ್ಞರು, ಗರ್ಭಿಣಿ ಸೇರಿದಂತೆ ಎಲ್ಲರೂ ಆಪರೇಷನ್ ಥಿಯೇಟರ್ ಬಾಗಿಲಿನಲ್ಲಿ ನಿಂತುಕೊಂಡಿದ್ದಾರೆ ಇದಕ್ಕೆಲ್ಲ ಕಾರಣ ಆಗಿರುವುದು ಇದೇ ಆಸ್ಪತ್ರೆಯ ಅನಸ್ತೇಷಿಯಾ(Anesthesia) ತಜ್ಞರಾದ ಡಾ. ಚಂದ್ರಕಲಾ ಅವರು ಆಪರೇಷನ್ ಥಿಯೇಟರ್‌ಗೆ ಬೀಗ ಹಾಕಿರುವುದು. ಹೌದು ಇದೇ ಏಪ್ರಿಲ್ 13ರಂದು ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮದಲ್ಲಿರುವ ಸರ್ಕಾರಿ ಸಮುದಾಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಕುರಿತು ಆಸ್ಪತ್ರೆಯ ವೈದ್ಯರ ಮೇಲೆ ಶೀಘ್ರ ಕ್ರಮ ವಹಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇನ್ನು ಡಾ.ಚಂದ್ರಕಲಾ ಒಂದು ವಾರದ ರಜೆ ತೆಗೆದುಕೊಂಡಿದ್ದರಂತೆ, ಈ ವೇಳೆ ಸಿ ಸೆಕ್ಷನ್ ಡೆಲಿವರಿಗೆ ಗರ್ಭಿಣಿ ಮಹಿಳೆಯೊಬ್ಬರು ಬಂದಿದ್ದಾರೆ. ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿ ಹೇಗೋ ಮಾಡಿ ಖಾಸಗಿ ವೈದ್ಯರೊಬ್ಬರನ್ನ ಅನಸ್ತೇಷಿಯಾ ನೀಡಲು ನಿಯೋಜಿಸಿದ್ದಾರೆ. ಈ ವಿಷಯವನ್ನ ಅರಿತ ಡಾ.ಚಂದ್ರಕಲಾ ಹಠಾತ್ತನೆ ಆಸ್ಪತ್ರೆಗೆ ದೌಡಾಯಿಸಿ ಇನ್ನೇನು ಕೆಲ ನಿಮಿಷಗಳಲ್ಲಿ ಆಪರೇಷನ್ ಶುರು ಮಾಡಬೇಕು ಅನ್ನೋ ಅಷ್ಟರಲ್ಲಿ ಬಂದು, ಆಪರೇಷನ್ ಥಿಯೇಟರ್ ನನ್ನ ಕಂಟ್ರೋಲ್, ಇಲ್ಲಿ ನನ್ನನ್ನ ಕೇಳಿ ಆಪರೇಷನ್ ಮಾಡಬೇಕು ಎಂದು ದಬಾಯಿಸಿ ಆಪರೇಷನ್ ಥಿಯೇಟರ್‌ಗೆ ಬೀಗ ಜಡಿದು ಅಲ್ಲಿಂದ ಹೋಗಿದ್ದಾರೆ. ಬಳಿಕ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಗರ್ಭಿಣಿ ಸ್ತ್ರೀಯನ್ನ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ವರ್ಗಾಯಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.
ಇದನ್ನೂ ಓದಿ:ಜಿಮ್ಸ್ ಆಸ್ಪತ್ರೆ ವೈದ್ಯರು ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿರುವ ಆರೋಪ: ಕ್ರಮ ಕೈಗೊಳ್ಳುವಂತೆ ಒತ್ತಾಯ
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಪತ್ರ ಬರೆದಿದ್ದು, ಜಿಲ್ಲಾ ಆರೋಗ್ಯಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅದೇನೆ ಇರಲಿ ರೋಗಿಗಳ ತುರ್ತು ಸಂದರ್ಭಕ್ಕೆ ಬಳಕೆಯಾಗಬೇಕಿದ್ದ ಆಸ್ಪತ್ರೆ, ವೈದ್ಯೆಯೊಬ್ಬರ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿದ್ದು ಮಾತ್ರ ದುರಾದೃಷ್ಟಕರ.
ವರದಿ: ವಿನಾಯಕ್ ಗುರವ್ ಟಿವಿ9 ನೆಲಮಂಗಲ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ