ಶಿವಗಂಗೆ: ಆಫೀಸ್ ಫೈಲ್ ಕಳೆದುಹೋಗಿದೆ ಅಂತಾ PWD ಕ್ಲರ್ಕ್ ಆತ್ಮಹತ್ಯೆ ಮಾಡಿಕೊಂಡರು

| Updated By: ಸಾಧು ಶ್ರೀನಾಥ್​

Updated on: Jan 28, 2023 | 5:07 PM

ತಮ್ಮ ಸರ್ವಿಸ್‌ನಲ್ಲೆ ಯಾವತ್ತು ಕೂಡ ಒಂದು ಕಪ್ಪು ಚುಕ್ಕೆ ಬಾರದಂತೆ ನೊಡಿಕೊಂಡಿದ್ದ ಎಫ್‌ಡಿಎ ಲಕ್ಷ್ಮೀನರಸಿಂಹಯ್ಯ, ಫೈಲ್ ಕಳೆದುಕೊಂಡ ಪ್ರಕರಣದಿಂದ ಕಳಂಕ ಹೊತ್ತು ಕೊಳ್ಳಬೇಕಾಗುತ್ತದೆ ಎಂದು ಹೆದರಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತವೆ ಸರಿ.

ಶಿವಗಂಗೆ: ಆಫೀಸ್ ಫೈಲ್ ಕಳೆದುಹೋಗಿದೆ ಅಂತಾ PWD ಕ್ಲರ್ಕ್ ಆತ್ಮಹತ್ಯೆ ಮಾಡಿಕೊಂಡರು
ಶಿವಗಂಗೆ: ಲೋಕೋಪಯೋಗಿ ಇಲಾಖೆಯ ಕ್ಲರ್ಕ್ ಆತ್ಮಹತ್ಯೆ
Follow us on

ಆತ ಲೋಕೋಪಯೋಗಿ ಇಲಾಖೆಯಲ್ಲಿ (PWD) ಪ್ರಥಮ ದರ್ಜೆ ಸಹಾಯಕನಾಗಿ (FDA) ಕೆಲಸ ನಿರ್ವಹಿಸುತ್ತಿದ್ದ. ಮನೆ ಕಡೆ ಕೂಡ ಸಂಸಾರ ಚೆನ್ನಾಗಿತ್ತು. ತನ್ನ ಸರ್ವಿಸ್‌ನಲ್ಲಿಯೂ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಇದ್ದ ವ್ಯಕ್ತಿ ಆತ. ಆದರೆ, ಆತ ಮಾಡಿದ ಅದೊಂದು ತಪ್ಪಿನಿಂದ ಕೊರಗಿ ಕೊರಗಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಇಷ್ಟಕ್ಕೂ ಎನಾಯ್ತು ಅಂತೀರಾ? ಆ ಕುರಿತಾದ ವರದಿ ಇಲ್ಲಿದೆ. ಇದೆಲ್ಲಾ ಘಟಿಸಿರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ (Shivagange, Nelamangala) ಹೊರವಲಯದ ಶಿವಗಂಗೆಯ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ.

ಹೌದು ಇದೇ ಪ್ರವಾಸಿ ಮಂದಿರದ ಸ್ನಾನದ ಕೊಠಡಿಯಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಕಂಡುಬಂದ ವ್ಯಕ್ತಿ ತುಮಕೂರು ಜಿಲ್ಲೆ ಮಧುಗಿರಿಯ ಪಿಡಬ್ಲೂಡಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ. ಹೆಸರು ಲಕ್ಷೀನರಸಿಂಹಯ್ಯ, ವಯಸ್ಸು 56 ವರ್ಷ. ಇವರು ನಿನ್ನೆ ಶಿವಗಂಗೆಯ ಪ್ರವಾಸಿ ಮಂದಿರಕ್ಕೆ ಆಗಮಿಸಿ ಅಲ್ಲಿರುವ ವಾಚ್​ ಮನ್‌ ಜೊತೆ ಮಾತನಾಡಿದ್ದಾರೆ.

ಬೆಳಿಗ್ಗೆ ಏಳೂವರೆ ಸುಮಾರಿಗೆ ವಾಚ್​ ಮನ್ ಕೊಠಡಿ ಬಳಿ ಹೋಗಿ ನೋಡಿದಾಗ ಸ್ನಾನದ ಕೋಣೆಯಲ್ಲಿ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಬಾಯಿಯಲ್ಲಿ ಕರವಸ್ತ್ರ ಹಾಕಿಕೊಂಡು ಕಿಟಕಿಗೆ ತಮ್ಮ ಬೆಲ್ಟ್‌ ಬಿಗಿದು ಕುತ್ತಿಗೆಗೆ ನೇಣು ಹಾಕಿಕೊಂಡು ಸತ್ತಿದ್ದಾರೆ ಎಂದು ಶಿವಗಂಗೆ ಪ್ರವಾಸಿ ಮಂದಿರ ವಾಚಮನ್ ಶೇಖರ್ ಮಾಹಿತಿ ನೀಡಿದ್ದಾರೆ.

ಇನ್ನುಮೃತ ಲಕ್ಷ್ಮೀನರಸಿಂಹಯ್ಯ ಅವರು 35 ವರ್ಷಗಳಿಂದ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 10 ವರ್ಷಗಳಿಂದ ಮಧುಗಿರಿಯಲ್ಲಿ ಸೇವೆ ಸಲ್ಲಿಸುತ್ತ ಕೆಲಸದಲ್ಲಿ ಯಾವುದೇ ತೊಂದರೆ ಇಲ್ಲದಂತೆ ಅಚ್ಚುಕಟ್ಟಾಗಿ ತಮ್ಮ ಕೆಲಸ ಮಾಡುತ್ತ ಬಂದಿದ್ದರು. ಆದರೆ ಇಲಾಖೆಗೆ ಸಂಬಂಧಪಟ್ಟ ಯಾವುದೋ ಒಂದು ಫೈಲ್‌ ಮಿಸ್ ಆಗಿತ್ತಂತೆ. ಈ ಬಗ್ಗೆ ಪತ್ನಿ ವನಿತಾ ಮುಂದೆ ನನ್ನ ಸರ್ವಿಸ್‌ನಲ್ಲೆ ಯಾವತ್ತು ಕೂಡ ಈ ರೀತಿ ಆಗಿಲ್ಲ. ನನಗೆ ಇದರಿಂದ ತುಂಬಾ ನೋವು ತಂದಿದೆ ಅಂತಾ ಹೇಳಿದ್ರಂತೆ.

ಮೂರು ದಿನದ ಹಿಂದೆ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿ ಬರುತ್ತೇನೆ ಎಂದು ಹೇಳಿದವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಅವರೇ ಫೋನ್ ಕರೆ ಮಾಡ್ತಾರೆ ಅಂತ ತಿಳಿದುಕೊಂಡಿದ್ದರಂತೆ ಲಕ್ಷ್ಮೀ ನರಸಿಂಹಯ್ಯ ಪತ್ನಿ ವನಿತಾ. ಆದರೆ, ಶುಕ್ರವಾರ ಬೆಳಿಗ್ಗೆ ಲಕ್ಷ್ಮೀನರಸಿಂಹಯ್ಯ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಒಟ್ಟಿನಲ್ಲಿ ತಮ್ಮ ಸರ್ವಿಸ್‌ನಲ್ಲೆ ಯಾವತ್ತು ಕೂಡ ಒಂದು ಕಪ್ಪು ಚುಕ್ಕೆ ಬಾರದಂತೆ ನೊಡಿಕೊಂಡಿದ್ದ ಎಫ್‌ಡಿಎ ಲಕ್ಷ್ಮೀನರಸಿಂಹಯ್ಯ, ಫೈಲ್ ಕಳೆದುಕೊಂಡ ಪ್ರಕರಣದಿಂದ ಕಳಂಕ ಹೊತ್ತು ಕೊಳ್ಳಬೇಕಾಗುತ್ತದೆ ಎಂದು ಹೆದರಿ ಈ ರೀತಿ ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತವೆ ಸರಿ.

ವರದಿ: ವಿನಾಯಕ್ ಗುರವ್, ಟಿವಿ 9, ನೆಲಮಂಗಲ

Published On - 5:03 pm, Sat, 28 January 23