ಬೆಂಗಳೂರು: ಕೊರೊನಾ ಸೋಂಕಿನ ಮೊದಲ ಅಲೆಗಿಂತ, ಎರಡನೇ ಅಲೆ ಭೀಕರವಾಗಿದೆ. ಬಡವರಿಗಂತೂ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. ಇನ್ನು ಕೊರೊನಾ ಸೋಂಕಿನ ಲಕ್ಷಣ ಇಲ್ಲದವರು ಮನೆಯಲ್ಲೇ ಇದ್ದರೂ ಆಕ್ಸಿಮೀಟರ್ ಮೂಲಕ ನಾಡಿ ಮತ್ತು ರಕ್ತದಲ್ಲಿ ಆಮ್ಲಜನಕ ಮಟ್ಟವನ್ನು ಪರೀಕ್ಷಿಸಿಕೊಳ್ಳಲು ಆರೋಗ್ಯ ಸಿಬ್ಬಂದಿ, ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಬಡವರಿಗೆ, ಹಿಂದುಳಿದವರಿಗೆ ಈ ಆಕ್ಸಿಮೀಟರ್ ಕೊಳ್ಳುವುದಾಗಲಿ, ಅದನ್ನು ಬಳಕೆ ಮಾಡುವುದಾಗಿ ದೂರದ ಮಾತಾಗಿದೆ. ಇದೀಗ ಅಂಥ ಬಡವರ ಸಹಾಯಕ್ಕೆ ನಿಂತವರು ಬೆಂಗಳೂರಿನ ಸ್ನೇಹಾ ರಾಘವನ್ ಮತ್ತು ಶ್ಲೋಕಾ ಅಶೋಕ್.
ಸ್ನೇಹಾ ಹಾಗೂ ಶ್ಲೋಕಾ ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಬೆಂಗಳೂರು ನಗರ ಹೊರವಲಯದ ಸರ್ಜಾಪುರದ ನಿವಾಸಿಗಳು. ಇವರಿಬ್ಬರೂ ಈಗ ಸುಮಾರು 200 ಕೊಳೆಗೇರಿ ನಿವಾಸಿಗಳಿಗೆ ಆಕ್ಸಿಮೀಟರ್ ನೀಡುವ ಮಹಾತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಸಿದ್ಧರಾಗುತ್ತಿದ್ದಾರೆ. ಸ್ಲಮ್ ನಿವಾಸಿಗಳಿಗೆ ಆಕ್ಸಿಮೀಟರ್ ಒದಗಿಸುವ ಯೋಜನೆಯನ್ನು ಈ ಬಾಲಕಿಯರ ಎದುರು ಇಟ್ಟಿದ್ದು, ಸಾಮಾಜಿಕ ಕಾರ್ಯಕರ್ತೆ ಅನುಪಮಾ ಪರೇಖ್. ಅನುಪಮಾ ಅವರು ಹೀಗೊಂದು ವಿಚಾರ ಮುಂದಿಡುತ್ತಿದ್ದಂತೆ ಸ್ನೇಹಾ-ಶ್ಲೋಕಾ ಥಟ್ ಎಂದು ಒಪ್ಪಿಕೊಂಡರು ಹಾಗೂ ಕಾರ್ಯಪ್ರವೃತ್ತರಾದರು.
200 ಆಕ್ಸಿಮೀಟರ್ ಕೊಡಬೇಕು ನಿಜ..ಆದರೆ ಅದಕ್ಕೆ ಹಣ ಹೊಂದಿಸಬೇಕಲ್ಲ? ಕೂಡಲೇ ಕಾರ್ಯ ಶುರು ಮಾಡಿದ ಸ್ನೇಹಾ ಮತ್ತು ಶ್ಲೋಕಾ, ವಿವಿಧ ಆಕ್ಸಿಮೀಟರ್ ಉತ್ಪಾದಕರು, ಮಾರಾಟಗಾರರನ್ನು ಸಂಪರ್ಕಿಸಿದರು. ಆರ್ಥಿಕ ಸಹಾಯ ಮಾಡುವಂತೆ ಕೋರಿ ಪೋಸ್ಟರ್ನ್ನು ತಯಾರಿಸಿದರು. ಹಾಗೇ, GiveIndia ವೆಬ್ಸೈಟ್ನಲ್ಲೂ ಕೂಡ ದೇಣಿಗೆ ಕೋರಿ ಪೇಜ್ ಕ್ರಿಯೇಟ್ ಮಾಡಿದರು. ತಮ್ಮ ಉದ್ದೇಶವನ್ನು ವಿವರಿಸಿದರು. ಈ ವೆಬ್ಸೈಟ್ನಲ್ಲಿ ಅದ್ಭುತವಾಗಿ ಪ್ರತಿಕ್ರಿಯೆ ಬಂತು. ಬಡವರಿಗಾಗಿ ಆಕ್ಸಿಮೀಟರ್ ದೇಣಿಗೆ ನೀಡುವ ಉದ್ದೇಶದಿಂದ ದೇಣಿಗೆ ಸಂಗ್ರಹ ಮಾಡುತ್ತಿರುವ ಸ್ನೇಹಾ ಹಾಗೂ ಶ್ಲೋಕಾ ಬಳಿ ಕೇವಲ 24 ಗಂಟೆಯಲ್ಲಿ 2 ಲಕ್ಷ ರೂ. ಸಂಗ್ರಹವಾಯಿತು.
ಈ ಹಣವನ್ನು ಬಳಸಿ ಆಕ್ಸಿಮೀಟರ್ ಖರೀದಿಸಿದ ನಂತ ಅದನ್ನು ಬೆಂಗಳೂರು ಮೂಲದ ಎನ್ಜಿಒ ಸಂಪರ್ಕ ಮೂಲಕ ಬಡಜನರಿಗೆ ವಿತರಿಸಲಿ ಬಾಲಕಿಯರು ನಿರ್ಧರಿಸಿದ್ದಾರೆ. ಈ ಎನ್ಜಿಒ ಹಿಂದುಳಿದ, ದುರ್ಬಲ, ಬಡಜನರಿಗಾಗಿ ಕೆಲಸ ಮಾಡುತ್ತಿದೆ. ಇದೀಗ ಸ್ನೇಹಾ ಮತ್ತು ಶ್ಲೋಕಾ ಕೂಡ ಇದೇ ಎನ್ಜಿಒ ಮೂಲಕ ಬೆಂಗಳೂರಿನ ಸ್ಲಮ್ ಏರಿಯಾ ನಿವಾಸಿಗಳು, ಕೊಪ್ಪಳದ ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಆಕ್ಸಿಮೀಟರ್ ವಿತರಿಸಲಿದ್ದಾರೆ.
ಸಂಪರ್ಕ ಎಂಬ ಎನ್ಜಿಒ ಮೂಲಕ ಕೊಳೆಗೇರಿ ಜನರಿಗೆ ಆಕ್ಸಿಮೀಟರ್ ವಿತರಿಸಲಾಗುತ್ತದೆ. ಅದನ್ನು ಬಳಸುವುದು ಹೇಗೆ ಎಂಬ ತರಬೇತಿಯನ್ನೂ ನೀಡಲಾಗುವುದು ಎಂದು ಟಿವಿ 9 ಕನ್ನಡ ಡಿಜಿಟಲ್ಗೆ ಶ್ಲೋಕಾ ತಿಳಿಸಿದ್ದಾರೆ.
ಬಾಲಕಿಯರ ಕೃತಜ್ಞತೆ
ಈ ಆಕ್ಸಿಮೀಟರ್ ಖರೀದಿಸಿ, ಬಡವರಿಗೆ ನೀಡುವ ಯೋಜನೆಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಸ್ನೇಹಾ ಮತ್ತು ಶ್ಲೋಕಾ ಕೃತಜ್ಞತೆ ಸಲ್ಲಿಸಿದ್ದಾರೆ. ದೇಣಿಗೆ ನೀಡಿದವರಿಗೂ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇವಲ 24 ದಿನಗಳಲ್ಲಿ 1,093 ಮಂದಿ ಕೊರೊನಾ ಸೋಂಕಿಗೆ ಬಲಿ
ಸಾರಿಗೆ ನೌಕರರ ಮುಷ್ಕರದಿಂದ ಹುಬ್ಬಳ್ಳಿ ಗ್ರಾಮಾಂತರ ವಿಭಾಗಕ್ಕೆ 6 ಕೋಟಿ ನಷ್ಟ
Published On - 11:06 am, Sun, 25 April 21