ಬೆಂಗಳೂರು, ಮೇ 24: ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ (Bengaluru) ವಾತಾವರಣ ಬದಲಾಗಿದ್ದು ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ತಂಪಾದ ವಾತವರಣದಿಂದ ಜನರು ಖುಷಿಯಗಿದ್ದಾರೆ. ಆದರೆ ಮಳೆಯಿಂದ ನಗರದಲ್ಲಿ ಡೆಂಗ್ಯೂ/ಡೆಂಘಿ (Dengue) ಪ್ರಕರಣಗಳಲ್ಲಿ ವಿಪರೀತ ಏರಿಕೆ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಸದ್ಯ ರಾಜಧಾನಿಯಲ್ಲಿ ಶೇ 40 ರಷ್ಟು ಡೆಂಘಿ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ. ಇದರ ಜೊತೆಗೆ ಇತರ ಜ್ವರದ ಪ್ರಕರಣಗಳು ಕೂಡಾ ಹೆಚ್ಚಾಗಿದ್ದು, ಆರೋಗ್ಯ ಇಲಾಖೆಯ (Health Department) ಚಿಂತೆಗೆ ಕಾರಣವಾಗಿದೆ.
ಈ ವರ್ಷ ಜನರು ಅತಿಯಾಗಿ ಎಳೆನೀರು ಸೇವಸಿ ಚಿಪ್ಪುಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಇದರಲ್ಲಿ ನೀರು ನಿಂತು ಅತಿಯಾಗಿ ಸೊಳ್ಳೆಗಳ ಉತ್ಪತಿಯಾಗುತ್ತಿದೆ. ಇದು ಈಗ ಆರೋಗ್ಯ ಇಲಾಖೆಯ ತಲೆ ಬಿಸಿಗೆ ಕಾರಣವಾಗಿದೆ.
ಎಲ್ಲೆಂದರಲ್ಲಿ ಬಿಸಾಡಿರುವ ಎಳೆನೀರು ಚಿಪ್ಪುಗಳಲ್ಲಿ ಅತಿಯಾಗಿ ಸೊಳ್ಳೆಗಳ ಉತ್ಪತಿಯಾಗಿದೆ. ಇದರಿಂದಲೇ ಡೆಂಘಿ ಸೇರಿದ್ದಂತೆ ನಾನಾ ಖಾಯಿಲೆಗಳು ಏರಿಕೆಯಾಗುತ್ತಿವೆ ಎಂಬುದು ಆರೋಗ್ಯ ಇಲಾಖೆಯ ಅಭಿಪ್ರಾಯ. ಎಳೆನೀರು ಕುಡಿದು ಬಿಸಾಡಿರುವ ಚಿಪ್ಪುಗಳನ್ನು ವಿಲೇವಾರಿ ಮಾಡುವುದೇ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಬಗ್ಗೆ ಬಿಬಿಎಂಪಿಗೂ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಡೆಂಘಿ ಜೊತೆಗೆ ವೈರಲ್ ಜ್ವರ ಕೂಡಾ ಹೆಚ್ಚೆಚ್ಚು ಕಂಡುಬರುತ್ತಿದೆ. ಇನ್ನು ರಾಜ್ಯದಲ್ಲಿ ಡೆಂಘಿ ಹೆಚ್ಚಳ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಡಿಸ್ ಸೊಳ್ಳೆ ನಾಶಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಪರಿಶೀಲಿಸುವಂತೆ ಆಶಾ ಕಾರ್ಯಕರ್ತೆಯರಿಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿನ ಡೆಂಗ್ಯೂ ಪ್ರಕರಣಗಳ ಮಾನಿಟರ್ ಮಾಡಬೇಕು. ವಾರ್ಡ್ ಅಥವಾ ಗ್ರಾಮಗಳಿಗೆ ಭೇಟಿ ನೀಡಿ ಶಂಕಿತ ಪ್ರಕರಣದ ಮೇಲೆ ನಿಗಾ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ. ಶಂಕಿತ ಡೆಂಗ್ಯೂ ಪ್ರಕರಣಗಳ ಟೆಸ್ಟ್ಗೆ NSI antigen ಹಾಗೂ IgM ಟೆಸ್ಟಿಂಗ್ ಕಿಟ್ ಪರಿಶೀಲಿಸಬೇಕು. ಲಾರ್ವ ನಾಶ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಗಾಳಿಯ ಅಬ್ಬರಕ್ಕೆ ಚಾಲಕನಿಲ್ಲದೇ ಮುಂದೆ ಸಾಗಿದ ಆಟೋ! ವಿಡಿಯೋ ನೋಡಿ
ಈ ಮಧ್ಯೆ, ಜನರು ಮನೆ ಸುತ್ತ ಸ್ವಚ್ಛತೆ ಕಾಪಾಡುವುದು ಈ ಹೊತ್ತಿನಲ್ಲಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದಷ್ಟು ಮನೆಯಲ್ಲಿ ಮಲಗುವ ಹೊತ್ತಿನಲ್ಲಿ ಸೊಳ್ಳೆ ಪರದೆ ಹಾಕುವುದು, ಬಿಸಿ ನೀರು ಕುಡಿಯುವುದು, ಆರೋಗ್ಯಕರ ಆಹಾರ ಸೇವನೆ ಮಾಡುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಬಿಟ್ಟು ಬಿಟ್ಟು ಜ್ವರ ಬಂದು ಮೂರನೇ ದಿನವಾದರೂ ಜ್ವರ ಮರುಕಳಿಸಿದರೆ, ಇದರ ಜತೆ ವಾಂತಿ ಇದ್ದರೆ ಡೆಂಘಿ ಟೆಸ್ಟ್ ಮಾಡಿಸುವುದು ಕಡ್ಡಾಯ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ