
ಬೆಂಗಳೂರು, ಅಕ್ಟೋಬರ್ 23: ವಾಣಿ ವಿಲಾಸ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ 57 ದಿನದ ಹೆಣ್ಣು ಮಗು ಬೆರಳುಗಳನ್ನು ಕಳೆದುಕೊಂಡಿರುವ ಗಂಭೀರ ಆರೋಪ ಕೇಳಿಬಂದಿದೆ. ಜ್ವರದಿಂದ ಬಳಲುತ್ತಿದ್ದ ಮಗುವನ್ನು ಸೆಪ್ಟೆಂಬರ್ 15ಕ್ಕೆ ಆಸ್ಪತ್ರೆಗೆ ಕರೆತರಲಾಗಿತ್ತು. ಪರೀಕ್ಷಿಸಿದ ವೈದ್ಯರು ಮಗುವಿಗೆ ಸೋಂಕು ತಗುಲಿದೆ ಎಂದು ಹೇಳಿ 8 ದಿನಗಳ ಕಾಲ ಚಿಕಿತ್ಸೆ ನೀಡಿದ್ದಾರೆ. ಈ ನಡುವೆ ಮಗುವಿನ ಕಾಲಿಗೆ ಗ್ಯಾಂಗ್ರೀನ್ ಆಗಿದ್ದು, ಅದಕ್ಕೆ ಚಿಕಿತ್ಸೆ ನೀಡಿ ಎಂದರೆ ನಾವೇನು ಮಾಡಲು ಆಗುತ್ತೆ ಎಂದು ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಕಾಲಿನ ಬಣ್ಣ ನೀಲಿ ಬಣ್ಣಕ್ಕೆ ತಿರುಗಿದ ಬಗ್ಗೆ ಅವರ ಗಮನಕ್ಕೆ ತಂದಿದ್ದರೂ ರೀಲ್ಸ್ ನೋಡಿಕೊಂಡೇ ಕಾಲ ಕಳೆದಿದ್ದಾರೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ.
ನೋಡೋಣ ನೋಡೋಣ ಎಂದೇ 20 ದಿನಗಳನ್ನು ಕಳೆದ ಆಸ್ಪತ್ರೆಯವರು ಬೆರಳನ್ನೇ ಕಟ್ ಮಾಡಿ ಈಗ ಮಗುವನ್ನು ನಮಗೆ ನೀಡಿದ್ದಾರೆ. ಕೂಲಿ ಕೆಲಸ ಮಾಡುವ ನಾವು ಆ ಮಗುವನ್ನು ಮುಂದೆ ಹೇಗೆ ಸಾಕೋದು ಎಂದು ಪೋಷಕರು ಪ್ರಶ್ನಿಸಿದ್ದಾರೆ. ಆಸ್ಪತ್ರೆಗೆ ಬರುವಾಗ ಮಗುವಿನ ಕಾಲು ಚೆನ್ನಾಗಿಯೇ ಇತ್ತು. ಮಗುವಿಗೆ ಈಗ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮುಂದೆ ಏನು ಮಾಡಿಕೊಳ್ಳುತ್ತೀರೋ ನೀವು ಮಾಡಿಕೊಳ್ಳಿ ಎಂದು ಹೇಳಿರೋದಾಗಿ ಮಗುವಿನ ತಂದೆ ದೂರಿದ್ದಾರೆ.
ಇದನ್ನೂ ಓದಿ: ತಲೆದಿಂಬಿನಡಿಯೇ ಇತ್ತು ಬೃಹತ್ ಗಾತ್ರದ ನಾಗರ! ಗೊತ್ತೇ ಇಲ್ಲದೆ ರಾತ್ರಿಯಿಡೀ ಹಾವಿನ ಜತೆ ಕಳೆದಿದ್ದ ಅಣ್ಣ-ತಂಗಿ
ಆದರೆ ವಾಣಿವಿಲಾಸ ಆಸ್ಪತ್ರೆ ಮಾತ್ರ ಮಗುವಿನ ಪೋಷಕರ ಆರೋಪವನ್ನು ನಿರಾಕರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಸವಿತಾ, ಮಗುವಿಗೆ ಸೆಪ್ಟಿಸೆಮಿಯಾ ಎಂಬ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ ಆಗಿತ್ತು. ಅದಕ್ಕೆ ವೈದ್ಯರು ಮತ್ತು ಸಿಬ್ಬಂದಿ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಕೊಟ್ಟಿದ್ದಾರೆ. ಘಟನೆ ಬಗ್ಗೆ ತನಗೆ ನಿನ್ನೆ ಮಾಹಿತಿ ತಿಳಿದಿದ್ದು, ನಾವು ಮಾನಿಟರ್ ಮಾಡುತ್ತಿದ್ದೇವೆ. ಎಲ್ಲಿಯೂ ಆಸ್ಪತ್ರೆ ಕಡೆಯಿಂದ ನಿರ್ಲಕ್ಷ್ಯ ಆಗಿಲ್ಲ. ಮಗುವಿಗೆ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಅದಕ್ಕೆ ಅಗತ್ಯ ಚಿಕಿತ್ಸೆಯನ್ನು ನಮ್ಮ ವೈದ್ಯರು ನೀಡಿದ್ದಾರೆ. ಆಸ್ಪತ್ರೆಗೆ ಪ್ರತಿದಿನ ನೂರಾರು ರೋಗಿಗಳು ಬರುತ್ತಾರೆ. ಎಲ್ಲರಿಗೂ ಸರಿಯಾದ ಚಿಕಿತ್ಸೆಯನ್ನೇ ನೀಡುತ್ತೇವೆ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿರುವ ಕಾರಣ, ರೀಲ್ಸ್ ನೋಡಿಕೊಂಡು ಕೂರಲು ಯಾರಿಗೂ ಇಲ್ಲಿ ಸಮಯ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:27 pm, Fri, 23 October 26