ತಲೆದಿಂಬಿನಡಿಯೇ ಇತ್ತು ಬೃಹತ್ ಗಾತ್ರದ ನಾಗರ! ಗೊತ್ತೇ ಇಲ್ಲದೆ ರಾತ್ರಿಯಿಡೀ ಹಾವಿನ ಜತೆ ಕಳೆದಿದ್ದ ಅಣ್ಣ-ತಂಗಿ
ಬೆಂಗಳೂರಿನ ಬಾಗಲಗುಂಟೆ ಬೈರವೇಶ್ವರನಗರದಲ್ಲಿ ಅಣ್ಣತಂಗಿ ರಾತ್ರಿ ಮಲಗಿದ್ದ ಕೋಣೆಗೆ ಕಿಟಕಿಯ ಮೂಲಕ ನಾಗರಹಾವು ಪ್ರವೇಶಿಸಿದೆ. ಬೆಳಿಗ್ಗೆ ಹೇರ್‌ಪಿನ್ ಹುಡುಕುವಾಗ ತಲೆದಿಂಬಿನ ಕೆಳಗೆ ಹಾವು ಕಾಣಿಸಿಕೊಂಡಿದ್ದು, ಇಬ್ಬರೂ ಭಯಗೊಂಡು ಕೋಣೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬಳಿಕ ಸ್ನೇಕ್ ನಾಗೇಂದ್ರ ಅವರು ಹಾವನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 23: ಮನೆಯಲ್ಲಿ ರಾತ್ರಿ ಮಲಗಿದ್ದ ಅಣ್ಣತಂಗಿಗೆ ತಮ್ಮ ಪಕ್ಕದಲ್ಲೇ ನಾಗರಹಾವೊಂದು ಓಡಾಡಿದ್ದು ಗೊತ್ತೇ ಆಗದ ಘಟನೆ ಬೆಂಗಳೂರಿನ ಬಾಗಲಗುಂಟೆ ಬೈರವೇಶ್ವರನಗರದಲ್ಲಿ ನಡೆದಿದೆ. ಬೆಳಿಗ್ಗೆ ಯುವತಿ ಹೇರ್‌ಪಿನ್ ಹುಡುಕುವಾಗ ತಲೆದಿಂಬಿನ ಕೆಳಗೆ ಬೃಹತ್ ಗಾತ್ರದ ನಾಗರಹಾವು ಕಾಣಿಸಿಕೊಂಡಿದ್ದು, ಇಬ್ಬರೂ ಆತಂಕಗೊಂಡಿದ್ದಾರೆ. ಬೈರವೇಶ್ವರನಗರದ ರೂಪಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ರೂಪಾ ಅವರ ಇಬ್ಬರು ಮಕ್ಕಳು ರಾತ್ರಿ ತಮ್ಮ ಕೋಣೆಯಲ್ಲಿ ಮಲಗಿದ್ದರು. ಈ ವೇಳೆ ಕಿಟಕಿಯ ಮೂಲಕ ನಾಗರಹಾವು ಕೋಣೆಯೊಳಗೆ ಪ್ರವೇಶಿಸಿತ್ತು. ಆದರೆ, ಹಾವು ಕೋಣೆಯಲ್ಲಿ ಓಡಾಡುತ್ತಿದ್ದರೂ ಮಕ್ಕಳಿಗೆ ಅದರ ಅರಿವಾಗಿರಲಿಲ್ಲ.
ಬೆಳಿಗ್ಗೆ ಯುವತಿ ತಲೆಗೆ ಹಾಕಿಕೊಳ್ಳುವ ಹೇರ್‌ಪಿನ್‌ಗಾಗಿ ಹುಡುಕುತ್ತಿದ್ದಾಗ ತಲೆದಿಂಬಿನ ಕೆಳಗೆ ಅವಿತಿದ್ದ ನಾಗರಹಾವನ್ನು ಮುಟ್ಟಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಯುವತಿ ಹಾಗೂ ಅವರ ಸಹೋದರ ಕೋಣೆಯಿಂದ ಹೊರಗೆ ಓಡಿ ಬಂದಿದ್ದಾರೆ. ಬಳಿಕ ಸ್ನೇಕ್ ನಾಗೇಂದ್ರ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ನಾಗೇಂದ್ರ ಅವರು ನಾಗರಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ರಾತ್ರಿ ಇಡೀ ನಾಗರಹಾವಿನ ಜೊತೆಯಲ್ಲೇ ಮಲಗಿದ್ದ ಅಣ್ಣತಂಗಿ, ಬೆಳಿಗ್ಗೆ ಹಾವು ಕಂಡು ಬೆಚ್ಚಿಬಿದ್ದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

